Asianet Suvarna News Asianet Suvarna News

ಅಂದು ಸೆಕ್ಯುರಿಟಿ ಗಾರ್ಡ್ ಇಂದು ಬೇಡಿಕೆಯ ಹಾಸ್ಯ ನಟ

ಅವಕಾಶಗಳು ಎಂದಾದರೂ ಬಂದು ಬಾಗಿಲು ತಟ್ಟಬಹುದು. ಆಗ ಕೆಲವಾರು ಅಂಶಗಳನ್ನು ತ್ಯಾಗ ಮಾಡಿ ಶ್ರದ್ಧೆಯಿಂದ ಸಿಕ್ಕ ಅವಕಾಶದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಶತ ಸಿದ್ಧ ಎನ್ನುವುದಕ್ಕೆ ಮಜಾ ಟಾಕೀಸ್ ಮೂಲಕ ಜನ ಮನ ಗೆದ್ದಿರುವ ಹಾಸ್ಯ ಕಲಾವಿದ ಚಂದ್ರಪ್ರಭಾ ಅವರೇ ಸಾಕ್ಷಿ, ಗಾರೆ ಕೆಲಸ, ಕಬ್ಬು ಕಡಿಯುವುದು, ಸೆಕ್ಯುರಿಟಿ ಗಾರ್ಡ್ ಕೆಲಸ  ಮಾಡಿಕೊಂಡಿದ್ದ ಅವರಿಗೆ ಇಂದು ಸಿನಿಮಾಗಳಲ್ಲಿ ಫುಲ್ ಟೈಂ ವರ್ಕ್.

Interesting story of  security guard become famous comedian
Author
Bengaluru, First Published Aug 6, 2018, 5:20 PM IST

ಬೆಂಗಳೂರು (ಆ. 06): ಮಜಾ ಭಾರತ,  ಕಾಮಿಡಿ ಟಾಕೀಸ್, ಮಜಾ ಟಾಕೀಸ್, ಮಜಾ ವೀಕೆಂಡ್ ಕಾರ್ಯಕ್ರಮಗಳನ್ನು ನೋಡಿದ್ದವರಿಗೆ ಚಂದ್ರಪ್ರಭಾ ಜಿ. ಎನ್ನುವ ಕಲಾವಿದನ ಬಗ್ಗೆ ಗೊತ್ತೇ ಇರುತ್ತೆ. ಗ್ರಾಮೀಣ ಶೈಲಿಯ ಡೈಲಾಗ್, ಒಳ್ಳೆಯ ಬಾಡಿ ಲ್ಯಾಂಗ್ವೇಜ್‌ನೊಂದಿಗೆ ನೋಡುಗರು ನಗುವಂತೆ ಮಾಡುವ ಇವರ ಬದುಕಿನ ಹಿಂದೆ ಸಾಕಷ್ಟು ರೋಚಕ ತಿರುವುಗಳಿವೆ.

ಒಂದು ಕಡೆಯಾದರೂ ನನ್ನಿಂದ ಇದು ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕುಳಿತಿದ್ದರೆ ಅವರು ಇಂದು ಒಬ್ಬ ಸೆಕ್ಯುರಿಟಿ ಗಾರ್ಡ್ ಆಗಿರುತ್ತಿದ್ದರು. ಆದರೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡದ್ದರ ಪರಿಣಾಮ ಶ್ರೀರಂಗಪಟ್ಟಣದ ದೊಡ್ಡೇಗೌಡನ ಕೊಪ್ಪಲಿನ ಈ ಪ್ರತಿಭೆ ಇಂದು ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಾಸ್ಯ ನಟ. ಕೂಲಿ ಕೆಲಸದಿಂದ ಕಲಾವಿದನವರೆಗೆ ಓದು ತಲೆಗತ್ತದೇ ಎಸ್‌ಎಸ್‌ಎಲ್‌ಸಿ ಫೇಲ್ ಆದಾಗ ಇನ್ನೇನು ಮಾಡುವುದು ಎಂದು ಗಾರೆ ಕೆಲಸ, ಕಬ್ಬು ಕಡಿಯುವ ಕೆಲಸ ಮಾಡಿಕೊಂಡಿದ್ದ ಚಂದ್ರಪ್ರಭಾ ಕಡೆಗೆ ಸೇರಿದ್ದು ರೆಸಾರ್ಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ.

ಹೀಗೆ ಒಂದು ದಿನ ಸ್ನೇಹಿತನೊಂದಿಗೆ ಕುಕ್ಕರಹಳ್ಳಿ ಕೆರೆಯ ಏರಿಯಲ್ಲಿ ಕುಳಿತಿದ್ದಾಗ ಪಕ್ಕದಲ್ಲೇ ಇರುವ ರಂಗಾಯಣದಲ್ಲಿ ಚಿಣ್ಣರ ಮೇಳದ ಸದ್ದಾಗುತ್ತದೆ.  ಏನು ನಡೆಯುತ್ತಿದೆ ಎಂದು ನೋಡುವ ಸಾಮಾನ್ಯ ಕುತೂಹಲವೇ ಇಂದು ಅವರನ್ನು ಮಜಾ ವೀಕೆಂಡ್ ವರೆಗೂ ತಂದು ನಿಲ್ಲಿಸಿದೆ. ಸವಾಲಿನ ಒಂದು ವರ್ಷ ನಾಟಕದ ಹುಚ್ಚಿನ ಹಿಂದೆ ಬಿದ್ದು ಮಾಡುತ್ತಿದ್ದ ಕೆಲಸ ಬಿಟ್ಟು, ರಂಗಾಯಣ ಸೇರಿದ ಚಂದ್ರಪ್ರಭಾಗೆ ಒಂದು ವರ್ಷ ಮುಳ್ಳಿನ ಹಾದಿ.

ಸಂಜೆ 4 ರಿಂದ 9 ಗಂಟೆ ವರೆಗೆ ಇದ್ದ ತರಗತಿ ಮುಗಿಸಿಕೊಂಡು ಊರಿಗೆ ಹೋಗಲು ಬಸ್‌ಗಳು ಇರುತ್ತಿರಲಿಲ್ಲವಾದ್ದರಿಂದ ಅತ್ತ ಊರಿಗೂ ಹೋಗಲಾಗದೇ, ಇತ್ತ ಮೈಸೂರಿನಲ್ಲೇ ಉಳಿದುಕೊಳ್ಳಲಾಗದೇ ಸ್ನೇಹಿತರ ರೂಂಗಳಲ್ಲಿ ರಾತ್ರಿ ಕಳೆದು, ನಾಟಕ ಕಲಿಯುತ್ತಿದ್ದಾಗ ಗುರುವಾಗಿ ಸಿಕ್ಕವರು ರಂಗಾಯಣದ ಸಗಯ್ ರಾಜು.

ಮೂವರ ಸಹಾಯ ‘ಕಷ್ಟಪಟ್ಟು ನಾಟಕ ಕಲಿತು ಏನಾಗಬೇಕು. ಇದೆಲ್ಲಾ ನನಗೆ ಬೇಡ ಎಂದು ಮೊದಲಿನಂತೆಯೇ ಕೆಲಸ ಮಾಡಿಕೊಂಡು ಇದ್ದುಬಿಡುವ ಮನಸ್ಸಾಯಿತು. ಆದರೆ ಮತ್ತೆ ಅದೇ ಸಾಮಾನ್ಯ ಬದುಕಿಗೆ ಮರಳುವುದು ಬೇಡ. ನಾಲ್ಕು ಜನ ಮೆಚ್ಚುವ ಹಾಗೆ ನಾಟಕ ಮಾಡಿ ತೋರಿಸಬೇಕು ಎಂದುಕೊಳ್ಳುವಾಗಲೇ ನನಗೆ ಗುರುವಾಗಿ ಸಿಕ್ಕವರು ರಂಗಾಯಣದ ಬೆಳಕಿನ ವಿನ್ಯಾಸಕರಾದ ಸಗಯ್ ರಾಜು. ಇವರೇ ನನಗೆ ಧೈರ್ಯ ತುಂಬಿ ಮನೆಯಲ್ಲೇ ಉಳಿಸಿಕೊಂಡು ಎರಡು ಹೊತ್ತು ಊಟ ಕೊಟ್ಟು, ನಾಟಕಗಳಿಗೆ ಲೈಟ್ ಹಾಕುವ ಕೆಲಸ ಕೊಟ್ಟರು.

ಸತತ ಆರು ವರ್ಷ ಅವರ ಜೊತೆಯಲ್ಲೇ ಬೆಳಕಿನ  ವಿನ್ಯಾಕನಾಗಿ ಕಳೆದೆ. ಇದಾದ ನಂತರ ನನಗೆ ಮತ್ತೊಬ್ಬ ಗುರುವಾಗಿ ಸಿಕ್ಕಿದ್ದು ಜಿಬಿ ಸರಗೂರು ಸಿದ್ದೇಗೌಡರು. ಅವರ ಬಳಿಯೂ ಆರು ವರ್ಷ ಕೆಲಸ ಮಾಡಿದೆ. ಅವರೂ ನನ್ನಲ್ಲಿನ ಪ್ರತಿಭೆ ಗುರುತಿಸಿ ಈ ಮಟ್ಟಕ್ಕೆ ಬರಲು ಸಹಕಾರ ನೀಡಿದರು. ಇದಾದ ಮೇಲೆ ನನ್ನ ಪ್ರತಿಭೆಗೆ ಅವಕಾಶ ನೀಡಿದ್ದು, ಸೃಜನ್ ಲೋಕೇಶ್ ಸರ್’ ಎಂದು ಸಿಕ್ಕ ನೆರವಿನ ಬಗ್ಗೆ ಹೇಳುತ್ತಾರೆ ಚಂದ್ರಪ್ರಭಾ.

ಬಂದದ್ದು ಎರಡು ದಿನದ ಕಲಾವಿದನಾಗಿ ‘ನಾಟಕ ಆತ್ಮ ಸಂತೋಷಕ್ಕೆ ಮಾತ್ರ. ಇದರಿಂದ ಹೊಟ್ಟೆ ತುಂಬುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ ಕಲರ್ಸ್‌ ಸೂಪರ್ ಚಾನೆಲ್ನವರು ಕಾಮಿಡಿ ಶೋಗೆ ಆಡಿಷನ್ ಮಾಡುತ್ತಿದ್ದಾರೆ ನೀನೂ
ಭಾಗವಹಿಸು ಎಂದು ಗೆಳೆಯ ರವಿ ಶಂಕರ್ ಒತ್ತಾಯ ಮಾಡಿದ.

ಬೆಂಗಳೂರಿನಲ್ಲಿ ನಡೆದ ಆಡಿಷನ್‌ಗೆ ಬಂದು ಸೆಲೆಕ್ಟ್ ಆಗಿ ಅವರು ಹೇಳಿದ ದಿನ ಲಗೇಜ್‌ನೊಂದಿಗೆ ಬಂದುಬಿಟ್ಟೆ. ಆದರೆ ಆಗ ನನಗೊಂದು ಶಾಕ್ ಕಾದಿತ್ತು. ಮೊದಲು ಸೆಲೆಕ್ಟ್ ಎಂದು ಹೇಳಿದ್ದರೂ ನಂತರ ವೈಟಿಂಗ್ ಲೀಸ್ಟ್‌ನಲ್ಲಿ ಇದ್ದೇನೆ ಎಂದು ಗೊತ್ತಾಯಿತು. ಇನ್ನೇನು ಅವಕಾಶ ಕೈ ತಪ್ಪಿತು ಎಂದು ವಾಪಸ್ ಊರಿಗೆ ಬಂದಿದ್ದೆ. ಮತ್ತೆ ಅವರೇ ಕಾಲ್ ಮಾಡಿ ‘ನಿಮಗೆ ಎರಡು ದಿನಗಳ ಶೂಟಿಂಗ್ ಇದೆ. ಬರುವುದಿದ್ದರೆ ಬನ್ನಿ’ ಎಂದು ಕರೆದರು.

ಎರಡು ದಿನ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದೆ. ನನ್ನ ನಟನೆಯನ್ನು ನೋಡಿ ಪೂರ್ಣವಾಗಿ ಶೋನಲ್ಲಿ ಇರುವಂತೆ ಹೇಳಿದರು. ಅಂದಿನಿಂದ ಮಜಾ ಭಾರತ, ಕಾಮಿಡಿ ಟಾಕೀಸ್, ಮಜಾ ಟಾಕೀಸ್‌ಗಳಲ್ಲಿ ನಟಿಸಿದೆ. ಸೃಜನ್ ಲೋಕೇಶ್ ಸರ್ ಕೂಡ ನನಗೆ ಒಳ್ಳೆಯ ಅವಕಾಶ ಕೊಟ್ಟರು’ ಎನ್ನುವ ಚಂದ್ರಪ್ರಭಾ ಇದುವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದವರು. ‘ನಮ್ ಏರಿಯಾದಲ್ಲಿ ಒಂದ್ ದಿನ’, ‘ತರ‌್ಲೆ ವಿಲೇಜ್’, ‘ಐರಾವತ’, ‘ಪರಸಂಗ’ ಮೊದಲಾದ ಚಿತ್ರಗಳ ನಂತರ ಈಗ ಸೂಪರ್ ಸ್ಟಾರ್ ಉಪೇಂದ್ರ ಸ್ನೇಹಿತನ ಪಾತ್ರದಲ್ಲಿ ‘ಐ ಲವ್ ಯು’ ಚಿತ್ರಕ್ಕೆ ಬಣ್ಣ ಹಚ್ಚಿ ಮುನ್ನಡೆಯುತ್ತಿದ್ದಾರೆ. 

-ಕೆಂಡಪ್ರದಿ 

Follow Us:
Download App:
  • android
  • ios