ಬೆಂಗಳೂರು (ಆ. 22): ಹರಿಪ್ರಿಯಾ ಸಂಭ್ರಮದಲ್ಲಿದ್ದಾರೆ. ಈ ವರ್ಷ ಅವರು ನಟಿಸಿದ ನಾಲ್ಕನೇ ಸಿನಿಮಾ ತೆರೆಗೆ ಬರುತ್ತಿರುವುದೇ ಅವರ ಸಂತೋಷಕ್ಕೆ ಕಾರಣ. ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಮೂಲಕ ಇದೇ ಆ.24 ರಂದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹರಿಪ್ರಿಯಾ ಹೇಳಿದ ಮಾತುಗಳು. 

ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಹಾಡುಗಳು ಹಾಗೂ ಟ್ರೇಲರ್ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ನಾನು, ಪ್ರಜ್ವಲ್ ದೇವರಾಜ್, ಪ್ರೇಮ್ ಕಾಂಬಿನೇಷನ್ ತೆರೆ ಮೇಲೆ ಚೆನ್ನಾಗಿ ಕಾಣುತ್ತದೆ. ಹೀಗಾಗಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದೇನೆ.

ನಿಜ ಜೀವನಕ್ಕೆ ಹತ್ತಿರವಾದ ಪಾತ್ರ

ನಾನು ಇಲ್ಲಿಯವರೆಗೂ ನಟಿಸಿರುವ ಚಿತ್ರಗಳಲ್ಲಿ ಗ್ಲಾಮರ್, ಸಿಂಪಲ್ ಅಥವಾ ಗಂಭೀರವಾಗಿರುವ ಸಿನಿಮ್ಯಾಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಅದ್ಯಾವುದೂ ನನ್ನ ನಿಜ ಬದುಕಿಗೆ ಹತ್ತಿರವಲ್ಲ. ಮೊದಲ ಬಾರಿಗೆ ನನ್ನ ರಿಯಲ್ ಲೈಫ್‌ಗೆ ಹತ್ತಿರವಾಗುವಂತಹ ಪಾತ್ರ ಮಾಡಿರುವುದು ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ. ತುಂಬಾ ಜಾಲಿ ಹುಡುಗಿ. ಸಿಕ್ಕಾಪಟ್ಟೆ ತಿರುಗಾಡುತ್ತೇನೆ. ಟ್ರಾವೆಲ್ ಅಂದ್ರೆ ಪ್ರೀತಿ. ಸ್ನೇಹಿತರು ಅಂದ್ರೆ ಪ್ರಾಣ. ಅದೇ ರೀತಿಯ ಪಾತ್ರ ಈ ಚಿತ್ರದಲ್ಲಿದೆ.

ದಿನಕರ್ ಲಕ್ಕಿ ನಿರ್ದೇಶಕರು

ನಿರ್ದೇಶಕ ದಿನಕರ್ ನನಗೆ ಲಕ್ಕಿ ನಿರ್ದೇಶಕ. ನನಗೆ ಕನ್ನಡದಲ್ಲಿ ರೀಎಂಟ್ರಿ ಕೊಟ್ಟ ಉಗ್ರಂ ಹಾಗೂ ನೀರ್‌ದೋಸೆ ಚಿತ್ರಗಳ ವಿತರಣೆಗೆ ದಿನಕರ್ ಸಾಥ್ ನೀಡಿದ್ದರು.  ಆ ಎರಡು ಸಿನಿಮಾಗಳು ಗೆದ್ದವು. ಈಗ ಅವರದ್ದೇ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವೆ. ಈ ಚಿತ್ರಕ್ಕೆ ಅವರ ಪತ್ನಿ ಮಾನಸ ದಿನಕರ್ ಕತೆ ಬರೆಯುವ ಜತೆಗೆ ಅಸಿಸ್ಟೆಂಟ್ ಡೈರೆಕ್ಟರ್ ರೀತಿಯಲ್ಲಿ ಇಡೀ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಮುಂದಿವೆ ಐದು ಚಿತ್ರಗಳು
ಈಗ ಐದು ಚಿತ್ರಗಳಿವೆ. ರಿಷಬ್ ಶೆಟ್ಟಿ ಜತೆ 2 ಚಿತ್ರ- ಬೆಲ್‌ಬಾಟಮ್ ಹಾಗೂ ಕಥಾಸಂಗಮ. ಇದರ ನಂತರ ಕೊಂಚ ಪ್ರಯೋಗ ಎನ್ನಬಹುದಾದ ಸೂಜಿದಾರ ಚಿತ್ರದಲ್ಲಿ 30 ಪ್ಲಸ್ ಗೃಹಿಣಿಯಾಗಿ ನಟಿಸಿದ್ದೇನೆ. ಕುರುಕ್ಷೇತ್ರದಲ್ಲಿ ದರ್ಶನ್ ಜೋಡಿ. ಈ ನಾಲ್ಕು ಚಿತ್ರಗಳು ಇದೇ ವರ್ಷ ತೆರೆ ಕಂಡರೆ ಅಲ್ಲಿಗೆ ಒಂದೇ ವರ್ಷದಲ್ಲಿ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತವೆ.