ಹಾಗಾಗಿ ಹರಿಪ್ರಿಯಾಗೆ ಚಿತ್ರದಲ್ಲಿ ಒಂದಲ್ಲ ನಾಲ್ಕು ಹೆಸರುಗಳಿವೆ. ಚಿತ್ರದಲ್ಲಿ ಕುಸುಮಾ ಅಷ್ಟೇ ಅಲ್ಲ, ಮೇರಿ ಥಾಮಸ್, ಗೀತಾ ಹಾಗೂ ಯಶೋಧಾ ಎಂಬ ನಾನಾ ಪಾತ್ರ ಮಾಡುತ್ತಿದ್ದಾರೆ. 

ಈ ಕುರಿತು ಹರಿಪ್ರಿಯಾರನ್ನು ಮಾತನಾಡಿಸಿದರೆ ಅವರು ಗುಟ್ಟು ಬಿಟ್ಟು ಕೊಡಲಿಲ್ಲ. ‘ಸಾಮಾನ್ಯವಾಗಿ ಡಿಟೆಕ್ಟಿವ್ ಕತೆಗಳಲ್ಲಿ ನಾಯಕಿಗೆ ಕಥಾ ನಾಯಕನ ಮೇಲೆ ಲವ್ ಇಂಟರೆಸ್ಟ್ ಇರೋದು ಸಹಜ. ಆದರೆ, ಈ ಕ್ಯಾರೆಕ್ಟರ್‌ಗೆ ಅದೊಂದೇ ಅಲ್ಲ, ಆಕೆಯ ಉದ್ದೇಶಗಳು ಬೇರೆಯದೇ ಆಗಿರುತ್ತೆ. ನಾನು ತಿಳಿದಿರುವ ಹಾಗೆ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಈ ತರಹದ ನಾಯಕಿ ಪಾತ್ರ ಎಲ್ಲೂ ಕಂಡಿಲ್ಲ. ಆ ಮಟ್ಟಿಗೆ ಅದೊಂದು ವಿಶೇಷವಾದ ಪಾತ್ರ. ಪೋಸ್ಟರ್‌ನಲ್ಲೇ ಹೇಳುವ ಹಾಗೆ ಆಕೆಗೆ ಕುಸುಮಾ, ಗೀತಾ, ಯಶೋಧಾ ಇತ್ಯಾದಿ ಹೆಸರುಗಳಿವೆ. ಅವೆಲ್ಲವೂ ಆಕೆಗೆ ಸಂಬಂಧಿಸಿದ್ದಾ ಅಥವಾ ಬೇರೆ ಪಾತ್ರಗಳ ಹೆಸರಾ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗುತ್ತದೆ’ ಎನ್ನುತ್ತಾ ಬಾಯ್ತುಂಬ ನಗುತ್ತಾರೆ ಹರಿಪ್ರಿಯಾ.

ಇದು ರೆಟ್ರೋ ಲುಕ್‌ನಲ್ಲಿ ಬರುವ ಪಾತ್ರ. 80ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಕಂಡ ನಾಯಕಿಯರ ಲುಕ್ ಈ ಪಾತ್ರಕ್ಕಿದೆ. ಕತೆ ಕೂಡ ಅದೇ ಕಾಲಘಟ್ಟಕ್ಕೆ ಸಂಬಂಧಿಸಿದ್ದು. ಆದರೆ, ಅದಕ್ಕೆ ಈ ಹೊತ್ತಿನ ಮತ್ತು ಭವಿಷ್ಯದ ನೋಟವಿದೆಯಂತೆ. ಚಿತ್ರದ ಕತೆಯ ಬಗ್ಗೆ ಅಷ್ಟೇ ವಿಶ್ವಾಸ, ನಂಬಿಕೆಯಲ್ಲಿ ಮಾತನಾಡುವ ಹರಿಪ್ರಿಯಾ, ಇದು ಒಂದೊಳ್ಳೆ ಸಿನಿಮಾವಾಗುವ ನಿರೀಕ್ಷೆ ಹೊಂದಿದ್ದಾರೆ. ಹಾಗೆಯೇ ಚಿತ್ರದಲ್ಲಿನ ತಮ್ಮ ಪಾತ್ರಕ್ಕೂ ಅಂತಹದೇ ಐಡೆಂಟಿಟಿ ಸಿಗುತ್ತೆ ಎನ್ನುವ ನಂಬಿಕೆಯಲ್ಲೂ ಮಾತನಾಡುತ್ತಾರೆ. ಜಯ ತೀರ್ಥ ಜತೆಗೆ ಇದು ಅವರ ಎರಡನೇ ಸಿನಿಮಾ. ಹಾಗೆಯೇ ರಿಷಬ್ ಶೆಟ್ಟಿ ಕಾಂಬಿನೇಷನ್ನಲ್ಲೂ ಎರಡನೇ ಸಿನಿಮಾ. ಹಾಗೆಯೇ ಚಿತ್ರದಲ್ಲಿ ರಿಷಬ್ ಶೆಟ್ಟಿ ಜತೆಗೆ ಹರಿಪ್ರಿಯಾ ಡ್ಯುಯೆಟ್ ಸಾಂಗ್ ವೊಂದರಲ್ಲಿ ಕಾಣಿಸಿಕೊಂಡಿದ್ದು, ಅದು ಸಾಕಷ್ಟು ಜನಪ್ರಿಯತೆ ಪಡೆಯುವುದು ಗ್ಯಾರಂಟಿ ಎನ್ನುವ ವಿಶ್ವಾಸ ಅವರದ್ದು.