1996ರಲ್ಲಿ ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಿತ್ರರಂಗವನ್ನು ಮನರಂಜನಾ ತೆರಿಗೆಯಿಂದ ಮುಕ್ತಗೊಳಿಸಿ ಆದೇಶ ನೀಡಿದ್ದರು.
ಬೆಂಗಳೂರು(ಜು.02): ಕನ್ನಡ ಸಿನಿಮಾಗಳಿಗೆ 21 ವರ್ಷಗಳ ನಂತರ ಮನರಂಜನಾ ತೆರಿಗೆ ಹೇರಿಕೆಯಾಗಿದೆ. ಜಿಎಸ್ಟಿ ಜಾರಿಯಿಂದ ರಾಜ್ಯದಲ್ಲಿ ಮನರಂಜನಾ ತೆರಿಗೆ ಮತ್ತೆ ಶುರುವಾಗಿದ್ದು, ಮೊದಲ ದಿನ ಗೊಂದಲ ಉಂಟಾಗಿರುವ ಕಾರಣ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಾಗಿದ್ದರೆ ಇನ್ನು ಕೆಲ ಚಿತ್ರಮಂದಿರಗಳಲ್ಲಿ ಕಡಿಮೆಯಾಗಿದೆ.
1996ರಲ್ಲಿ ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಿತ್ರರಂಗವನ್ನು ಮನರಂಜನಾ ತೆರಿಗೆಯಿಂದ ಮುಕ್ತಗೊಳಿಸಿ ಆದೇಶ ನೀಡಿದ್ದರು. ಅಲ್ಲಿಯ ತನಕ ಅರ್ಧದಷ್ಟು ತೆರಿಗೆ ವಿನಾಯಿತಿಯನ್ನು ಮಾತ್ರ ಚಿತ್ರರಂಗ ಅನುಭವಿಸಿತ್ತು. ಇದೀಗ ಹೊಸ ತೆರಿಗೆ ನೀತಿಯಿಂದ ರಾಜ್ಯದಲ್ಲಿ ಕನ್ನಡ ಚಿತ್ರಗಳಿಗೆ ಶೇ.18ರಷ್ಟು ಮನರಂಜನಾ ತೆರಿಗೆ ಕಡ್ಡಾಯವಾಗಿದೆ. ಅಷ್ಟೆ ಅಲ್ಲ ಟಿಕೆಟ್ ದರ 100 ರೂ. ಗಿಂತ ಮೇಲ್ಪಟ್ಟಿದ್ದರೆ ಶೇ.28 ತೆರಿಗೆ ಕಟ್ಟಬೇಕಿದೆ. ಜಿಎಸ್'ಟಿ ಪರಿಣಾಮದಿಂದಾಗಿ ಪರಭಾಷೆ ಚಿತ್ರಗಳಿಗೆ ರಾಜ್ಯದಲ್ಲಿ ವಿಧಿಸಲಾಗಿದ್ದ ಶೇ.30 ರಷ್ಟು ತೆರಿಗೆಯಲ್ಲಿ 2 ರಷ್ಟು ಇಳಿಕೆಯಾಗಿದ್ದು, ಅದು ಪ್ರವೇಶದರ ಪರಿಷ್ಕರಣೆಗೂ ನಾಂದಿ ಹಾಡಿದೆ. ಇದು ಚಿತ್ರೋದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಟಿಕೆಟ್ ದರ ಪರಿಷ್ಕರಣೆಗೆ
ಬೆಂಗಳೂರಿನ ಮೆಜಸ್ಟಿಕ್ ಪ್ರದೇಶದ ಸಂತೋಷ್ ಚಿತ್ರಮಂದಿರದಲ್ಲಿ ಜಿಎಸ್ಟಿ ಪರಿಣಾಮ ಟಿಕೆಟ್ ದರ ಶೆ.15 ರಷ್ಟು ಹೆಚ್ಚಾಗಿದೆ. 80 ರೂ.ಇದ್ದ ಟಿಕೆಟ್ ದರ 95 ರೂ. ಆಗಿದೆ. ಹಾಗೆಯೇ ಬಾಲ್ಕನಿ ದರ 100ರೂ ನಿಂದ 120ಕ್ಕೆ ಏರಿದೆ. ಆದರೆ ಪಕ್ಕದಲ್ಲಿರುವ ನರ್ತಕಿ ಚಿತ್ರಮಂದಿರ ಮಾತ್ರ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದು 100 ರೂ. ಇದ್ದ ದರ 90ಕ್ಕೆ, 120ನಿಂದ 100ರೂ.ಗೆ ಇಳಿಕೆಯಾಗಿದೆ. ಕನ್ನಡ ಚಿತ್ರಗಳೆ ಹೆಚ್ಚು ಪ್ರದರ್ಶನವಾಗುತ್ತಿರುವುದರಿಂದ ಟಿಕೆಟ್ ದರ ಕಡಿಮೆ ಮಾಡಲಾಗಿದೆ ಎಂದು ನರ್ತಕಿ ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ. ಅದೇ ರೀತಿ ಟಿಕೆಟ್ ಹೆಚ್ಚಳಕೆ ಜಿಎಸ್ಟಿ ಕಾರಣ ಎಂದು ಸಂತೋಷ್ ಟಾಕೀಸ್ ಮಾಲೀಕರು ಸ್ಪಷ್ಟಿಕರಣ ನೀಡುತ್ತಾರೆ.
ಮಲ್ಟಿಫ್ಲೆಕ್ಸ್'ಗಳಲ್ಲೂ ಏರುಪೇರಾಗಿದ್ದು, ಕನ್ನಡ ಚಿತ್ರ ಹೊರತುಪಡಿಸಿ ಉಳಿದ ಸಿನಿಮಾಗಳಿಗೆ ಶೇ.30ರಿಂದ 28ಕ್ಕೆ ಇಳಿಕೆಯಾಗಿದೆ. ಕನ್ನಡ ಸಿನಿಮಾಗಳಿಗೆ ಕೆಲವು ಸಿನಿಮಾಗಳಿಗೆ ಕೆಲವು ಕಡೆ ದರ ಹೆಚ್ಚಾದರೆ ಕೆಲವು ಕಡೆ ಕಡಿಮೆಯಾಗಿದೆ.
