ಶೀತಲ್‌ ಶೆಟ್ಟಿಗೆ ಪತಿ ಬೇಕಂತೆ!
ಟಿವಿ ನಿರೂಪಣೆಯಿಂದ ಹಿರಿತೆರೆಗೆ ಜಿಗಿದ ನಟಿ ಶೀತಲ್ ಶೆಟ್ಟಿಮತ್ತೊಂದು ಚಿತ್ರಕ್ಕೆ ನಾಯಕಿ. ಸದ್ದಿಲ್ಲದೆ ಆ ಚಿತ್ರಕ್ಕೀಗ ಮುಹೂರ್ತವೂ ಮುಗಿದಿದೆ. ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಈ ಚಿತ್ರದ ಟೈಟಲ್. ನಮಗೆಲ್ಲಾ ‘ಶಾದಿ ಡಾಟ್ ಕಾಮ್' ಗೊತ್ತು, ಆದರೆ ಇದ್ಯಾವುದು ‘ಪತಿ ಬೇಕು. ಕಾಮ್'?
ಅದು ಶೀತಲ್ ಶೆಟ್ಟಿ ಹೊಸ ಸಿನಿಮಾದ ಟೈಟಲ್ಲು. ವಧು-ವರರ ಹುಡುಕಾಟಕ್ಕಿರುವ ಸಾಮಾಜಿಕ ತಾಣಗಳನ್ನು ನೆನಪಿಸುವ ಈ ಟೈಟಲ್ಲು, ಮದುವೆ ಕತೆಗೆ ಸಂಬಂಧಿಸಿದ್ದ ಸಿನಿಮಾ ಎಂಬ ಕಾರಣಕ್ಕೇ ಇಡಲಾಗಿದೆ. ಶಾಮ್ ಚಿತ್ರದ ನಿರ್ದೇಶಕರು. ಈ ಹಿಂದೆ ಇವರು ‘ಆರ್ಜಿವಿ' ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈಗ ನಿರ್ಮಾಪಕ ರಾಕೇಶ್ ಜತೆಗೆ ಸೇರಿ ‘ಪತಿ ಬೇಕು.ಕಾಮ್' ಸಿನಿಮಾ ಶುರು ಮಾಡಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ. ನಟಿ ಶೀತಲ್ ಶೆಟ್ಟಿಕಥಾ ನಾಯಕಿ. ‘ಮಧ್ಯಮ ವರ್ಗದ ಕುಟುಂಬದಲ್ಲಿ ಹೆಣ್ಣ ಮಕ್ಕಳ ಮದುವೆ ಮಾಡುವುದು ಇವತ್ತು ತುಂಬಾ ಕಷ್ಟ. ವರದಕ್ಷಿಣೆ ಅನ್ನೋದು ಇಡೀ ಬದುಕನ್ನೇ ದುಬಾರಿ ಮಾಡಿದೆ. ಅದೇ ಈ ಚಿತ್ರದ ಕಥಾವಸ್ತು' ಎನ್ನುತ್ತಾರೆ ನಿರ್ದೇಶಕ ಶಾಮ್. ಜುಲೈ 17 ರಿಂದ ಚಿತ್ರೀಕರಣ ಶುರು. ಉಳಿದ ಪಾತ್ರಗಳಿಗೆ ಕಲಾವಿದರು ಇನ್ನೂ ಫೈನಲ್ ಆಗಿಲ್ಲ.
