'ಬಿಗ್ ಬಾಸ್ ಸೀಜನ್ -10'ರ ವಿನ್ನರ್ ಮನ್ವೀರ್ ಗುರ್ಜರ್ ಇದೀಗ ಕಾನೂನಿನ ಕೈಯ್ಯಲ್ಲಿ ಸಿಲುಕಿದ್ದಾರೆ. ನೋಯ್ಡಾ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಐಪಿಸಿ ಸೆಕ್ಷನ್ 341ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂಬೈ(ಫೆ.03): 'ಬಿಗ್ ಬಾಸ್ ಸೀಜನ್ -10'ರ ವಿನ್ನರ್ ಮನ್ವೀರ್ ಗುರ್ಜರ್ ಇದೀಗ ಕಾನೂನಿನ ಕೈಯ್ಯಲ್ಲಿ ಸಿಲುಕಿದ್ದಾರೆ. ನೋಯ್ಡಾ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಐಪಿಸಿ ಸೆಕ್ಷನ್ 341ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿಯನ್ವಯ ನೋಯ್ಡಾದ ಸೆಕ್ಟರ್ 46ರಲ್ಲಿರುವ ಪಾರ್ಕ್ ಒಂದರಲ್ಲಿ ಮನ್ವೀರ್'ನನ್ನು ಸನ್ಮಾನಿಸಲು ಆತನ ಕುಟುಂಬಸ್ಥರು ಹಾಗೂ ಮಿತ್ರರು ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಸದ್ಯ ಇದೇ ಕಾರ್ಯಕ್ರಮ ಮನ್ವೀರ್ ವಿರುದ್ಧ ವಿವಾದವೆಬ್ಬಿಸಿದೆ.

ನೋಯ್ಡಾ ಪೊಲೀಸರು ಈ ಕಾರ್ಯಕ್ರಮದಲ್ಲಿ ನಡೆಯುವ ಮೆರವಣಿಗೆಗೆ ಕೇವಲ 40 ವಾಹನಗಳನ್ನು ಬಳಸಲು ಅನುಮತಿ ನೀಡಿದ್ದರು. ಆದರೆ ಕುಟುಂಬಸ್ಥರು ಹಾಗೂ ಮಿತ್ರರು ಪರವಾನಿಗೆ ನೀಡಿದ್ದಕ್ಕಿಂತ 25% ಹೆಚ್ಚು ವಾಹನಗಳನ್ನು ತಂದಿದ್ದರು. ಲಭ್ಯವಾದ ಮಾಹಿತಿ ಅನ್ವಯ ಈ ಮೆರವಣಿಗೆಯಲ್ಲಿ 1000ಕ್ಕೂ ಅಧಿಕ ವಾಹನಗಳಿದ್ದ ಕಾರಣ ಜನರು ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಯಿತು.

ಇದೇ ಕಾರಣಕ್ಕಾಗಿ ಪೊಲೀಸರು ಮನ್ವೀರ್ ವಿರುದ್ಧ IPC ಸೆಕ್ಷನ್ 341ರ ಅಡಿಯಲ್ಲಿ FIR ದಾಖಲಿಸಿದ್ದಾರೆ. ಇನ್ನು ಈ ಸೆಕ್ಷನ್ ಜಾರಿ ಮಾಡಿದರೆ ರೂ 500 ದಂಡ ಕಟ್ಟಬೇಕಾಗುತ್ತದೆ ಇಲ್ಲವಾದಲ್ಲಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಬೇಕಾಗುತ್ತದೆ. ಇನ್ನು ಅದೃಷ್ಟ ಕೆಟ್ಟಿದ್ದರೆ ಇವೆರಡೂ ಶಿಕ್ಷೆ ವಿಧಿಸುವ ಸಾಧ್ಯತೆಗಳು ಇವೆ.

ಬಿಗ್ ಬಾಸ್ ವಿನ್ನರ್ ಆಗಿ ಹೊರ ಬಂದ ಮನ್ವೀರ್ ವಿರುದ್ಧ ಮದುವೆಯಾದ ವಿಚಾರ ಮುಚ್ಚಿಟ್ಟು ಜನರನ್ನು ಮೋಸಗೊಳಿಸಿದ್ದಾನೆ ಎಂಬ ದೂರು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಕೇಸ್ ದಾಖಲಾಗಿರುವುದನ್ನು ನೋಡಿದರೆ ಬಿಗ್ ಬಾಸ್'ನಲ್ಲಿ ಗೆದ್ದ ಬಳಿಕ ಸಮಸ್ಯೆಗಳು ಹೆಚ್ಚಾಗಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತಿದೆ.