Asianet Suvarna News Asianet Suvarna News

ಚಿತ್ರ ವಿಮರ್ಶೆ: ದಂಗಾದ ನೋಡುಗರು ‘ರಂಗಾದ ಹುಡುಗರು’

ಪ್ರಾಯದಲ್ಲಿ ಹುಡುಗರು ಚೆಲ್ಲುಚೆಲ್ಲಾಗಿ ಆಡುತ್ತಾ ತಮ್ಮ ಜವಾಬ್ದಾರಿ ಮರೆತರೆ, ಅವರಿಗೆ ಗೊತ್ತಿಲ್ಲದೆ ಹೇಗೆ ಅನಾಹುತ ನಡೆದುಹೋಗುತ್ತೆ ಎನ್ನುವುದು ಈ ಚಿತ್ರದ ಒನ್‌ಲೈನ್ ಸ್ಟೋರಿ.

 

Film review of Rangaada hudugaru
Author
Bengaluru, First Published Dec 15, 2018, 8:53 AM IST

ಹಾಗೆ ತೋರಿಸಲು ನಿರ್ದೇಶಕರು ಮೂವರು ಪಡ್ಡೆ ಹುಡುಗರು, ಅವರಿಗೆ ಸವಾಲು ಹಾಕಿ ಗೆಲ್ಲುವುದಕ್ಕೆ ಓರ್ವ ನಾಯಕಿ. ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಓರ್ವ ವಿಲನ್, ಅವರ ಸುತ್ತ ಮತ್ತಷ್ಟು ಪಾತ್ರಗಳನ್ನು ಸೃಷ್ಟಿಸಿ, ಹಳಸಲು ಕತೆಯೊಂದನ್ನು ತೆರೆಗೆ ತಂದಿದ್ದಾರೆ. ಅದಕ್ಕೆ ಆಕರ್ಷಕವಾಗಿ ರಂಗಾದ ಹುಡುಗರು ಅಂತ ಹೆಸರಿಟ್ಟಿದ್ದಾರೆ.

ಹೆಸರಿಗೂ, ಚಿತ್ರದ ಕತೆಗೆ ಎಲ್ಲಿದೆಯೋ ನಂಟು ಅದು ನಿರ್ದೇಶಕರಿಗೆ ಗೊತ್ತು. ಪ್ರೇಕ್ಷಕರನ್ನು ರಂಜಿಸುವಂತಹ ಹೊಸತಾದ ಒಂದಂಶವೂ ಇಲ್ಲಿಲ್ಲ. ಬದಲಿಗೆ ಡಬಲ್ ಮೀನಿಂಗ್ ಪದಗಳನ್ನೇ ಸಿಂಗಲ್ ಮೀನಿಂಗ್ ರೂಪದಲ್ಲಿ ತಂದು, ಪ್ರೇಕ್ಷಕರನ್ನು ರಂಜಿಸುವ ಕಸರತ್ತು ಕೂಡ ಕ್ಲೀಷೆಯೇ.

ಇನ್ನು ಇಲ್ಲೇನಿದೆ ಕತೆ ಅಂತ ಕೈಮ್ಯಾಕ್ಸ್ ತನಕವೂ ತಡಕಾಡಬೇಕು. ಪ್ರಾಯದ ಮೂವರು ಪಡ್ಡೆ ಹುಡುಗರು, ಐಲುಪೈಲು ಸ್ವಭಾವ. ಹುಡುಗಾಟ ಮಾಡುತ್ತಾ ಕಾಲ ಕಳೆಯುವ ಹೊತ್ತಲ್ಲಿ ಆಕಸ್ಮಿಕವಾಗಿ ಸಿಕ್ಕವಳು ಚಿತ್ರದ ಕಥಾನಾಯಕಿ. ಆಕೆಯೊಂದಿಗೆ ಅವರ ಚೇಷ್ಟೆ, ಅವರ ಜತೆಗೆ ಆಕೆಯ ಕುಚೇಷ್ಟೆ. ಅಷ್ಟರಲ್ಲೇ ಮುಗಿದು ಹೋಗುತ್ತೆ ಅರ್ಧ ಸಿನಿಮಾ. ಪ್ರೇಕ್ಷಕ ಸಾಕಪ್ಪಾ ಸಾಕು ಈ ಗೋಳು ಎನ್ನುವ ಹೊತ್ತಿಗೆ ಬಾಂಬ್ ಬ್ಲಾಸ್ಟ್ ನಡೆದು ಹೋಗುತ್ತೆ. ಅದು ಯಾರ ಕೃತ್ಯ ಅದು ಚಿತ್ರದ ದ್ವಿತೀಯಾರ್ಧ. ಮೊದಲೆಲ್ಲ ಪ್ರೀತಿ, ಪ್ರೇಮ ಎನ್ನುವ ಕತೆ, ಕೊನೆಗೆ ದೇಶ ಪ್ರೇಮ ಎನ್ನುವ ಸಂದೇಶ ಹೇಳುತ್ತೆ. ಮೂರು ಹಾಡುಗಳಲ್ಲಿ ಸೇನಾಪತಿ ಅವರ ಸಂಗೀತ ‘ಏನಾಗಿದೆಯೋ... ನನಗೆ ಏನಾಗಿದೆಯೋ ’ ಎನ್ನುವ ಹಾಡಿನಲ್ಲಿ ಮಾತ್ರ ಮನಸ್ಸಿನಾಳಕ್ಕಿಳಿಯುತ್ತದೆ.

ಉಳಿದೆರಡು ನೆನಪಲ್ಲೂ ಉಳಿಯುವುದಿಲ್ಲ. ಸಿನಿಟೆಕ್ ಸೂರಿ ಛಾಯಾಗ್ರಹಣ ಪರ್ವಾಗಿಲ್ಲ. ಕಲಾವಿದರ ಅಭಿನಯದಲ್ಲಿ ನಾಯಕಿ ಅಮಿತಾ ಕುಲಾಲ್, ಸಾಗರ್, ಶೋಭರಾಜ್ ಅಭಿನಯ ಚೆನ್ನಾಗಿದೆ. ಅದರಾಚೆಯ ಪ್ರಯತ್ನಗಳ ಬಗ್ಗೆ ಹೇಳದಿದ್ದರೆ ಉತ್ತಮ.

ಚಿತ್ರ: ರಂಗಾದ ಹುಡುಗರು

ತಾರಾಗಣ: ಪ್ರಖ್ಯಾತ್, ಸಾಗರ್, ಮನು ಹೆಗಡೆ

ನಿರ್ದೇಶನ: ತೇಜಸ್ ಕುಮಾರ್

ರೇಟಿಂಗ್: **

Follow Us:
Download App:
  • android
  • ios