ಮುಂಬೈ (ಫೆ.11): ಒಂದು ಕಾಲದ ಖಳನಟನಾಗಿ ಬಾಲಿವುಡ್‌ ತೆರೆ ಮೇಲೆ ಮಿಂಚಿದ್ದ ಮಹೇಶ್ ಆನಂದ್ (58) ಅವರ ಮೃತದೇಹ ಅವರ ಮುಂಬೈ ನಿವಾಸದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. 

ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಕೊಲೆಯಂತೆ ಭಾಸವಾಗುತ್ತಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಮದ್ಯ ವ್ಯಸನಿಯಾಗಿದ್ದ ಮಹೇಶ್, ಒಂಟಿಯಾಗಿ ವಾಸಿಸುತ್ತಿದ್ದರು. ಪತ್ನಿ ಮಾಸ್ಕೋ ವಾಸಿಯಾಗಿದ್ದು, ಸಾವಿನ ಬಗ್ಗೆ ಇನ್ನು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ. 

ಅನೇಕ ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದ ಮಹೇಶ್, ಅಮಿತಾಭ್ ಬಚ್ಚನ್, ಧರ್ಮೇಂದ್ರ, ಗೋವಿಂದ್, ಸಂಜಯ್ ದತ್ ಅವರಂಥ ಮೇರು ಕಲಾವಿದರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. 1961ರಲ್ಲಿ ಜನಿಸಿದ್ದ ಆನಂದ್ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಕೂಲಿ ನಂ.1, ಸ್ವರ್ಗ್, ಕುರುಕ್ಷೇತ್ರ, ವಿಜೇತ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.