ಇದೇ ಶುಕ್ರವಾರ ನಿಮ್ಮ ನಟನೆಯ ‘ಮಟಾಶ್’ ಸಿನಿಮಾ ತೆರೆಗೆ ಬರುತ್ತಿದೆ. ಹೇಗನಿಸುತ್ತಿದೆ?

ಇದು ನನ್ನ ಮೂರನೇ ಚಿತ್ರ. ಬಾಲನಟನಾಗಿ ‘ಕಲಾಕಾರ್’ ಹಾಗೂ ‘ಜುಗಾರಿ’ ಕ್ರಾಸ್ ಚಿತ್ರಗಳಲ್ಲಿ ನಟಿಸಿದ್ದೆ. ‘ಲಾಸ್ಟ್ ಬಸ್’ ಚಿತ್ರದಲ್ಲಿ ಒಂದು ಪ್ರಬುದ್ಧ ಪಾತ್ರ ಮಾಡಿದೆ. ಆ ನಂತರ ಈ ವಾರ ತೆರೆಗೆ ಬರುತ್ತಿರುವ ‘ಮಟಾಶ್’ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ಬಿಡುಗಡೆಯಾಗುತ್ತಿರುವಾಗ ಸಹಜವಾಗಿ ಭಯ, ಕುತೂಹಲ ಇದ್ದೇ ಇರುತ್ತದೆ.

ಮಟಾಶ್ ನಿಮಗೆ ಯಾಕೆ ವಿಶೇಷ ಚಿತ್ರ?

ನನ್ನ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಪಾತ್ರ ಮಾಡುವುದಕ್ಕೆ ಆಯ್ಕೆ ಆದಾಗ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಕುಟುಂಬದಿಂದ ಮತ್ತೊಬ್ಬ ನಟ ಬಂದಿದ್ದಾರೆ ಎಂದು ಎಲ್ಲರು ಗುರುತಿಸುವಂತೆ ಮಾಡಿದ ಸಿನಿಮಾ. ಅಲ್ಲದೆ ಬಹು ಚರ್ಚೆಗೆ ಒಳಗಾಗಿದ್ದ ಬೆಳವಣಿಯೊಂದರ ಸುತ್ತ ಸಾಗುವ ಕತೆ. ಭಿನ್ನವಾದ ಕತೆಯನ್ನು ಹೇಳುವ ಚಿತ್ರಕ್ಕೆ ನಾಯಕನಾಗಿದ್ದೇನೆ.

ನಟನೆ ಏನೆಲ್ಲ ತಯಾರಿ ಮಾಡಿಕೊಂಡು ಬಂದಿದ್ದು?

ಡಿಪ್ಲೊಮಾ ಇನ್ ಫಿಲಮ್ ಮೇಕಿಂಗ್ ಮಾಡಿಕೊಂಡು ಕೆಲ ಕಾಲ ಡ್ಯಾನ್ಸ್ ಕ್ಲಾಸ್‌ಗೆ ಹೋದೆ. ಆ ನಂತರ ನಟನೆಯ ತರಬೇತಿ ಅಂತ ಆಗಿದ್ದು ‘ಲಾಸ್ಟ್ ಬಸ್’ ಚಿತ್ರದಲ್ಲಿ. ಹೀಗಾಗಿ ನಾನು ಕುಟುಂಬದ ಹಿನ್ನೆಲೆಯನ್ನೇ ನಂಬಿಕೊಂಡು ಕ್ಯಾಮೆರಾ ಮುಂದೆ ನಿಂತವನಲ್ಲ.

ಮಟಾಶ್ ಚಿತ್ರಕ್ಕೆ ನೀವೇ ಹೀರೋ ಆಗಿದ್ದು ಹೇಗೆ?

ನಾನು ಡಿಪ್ಲೊಮಾ ಇನ್ ಫಿಲಮ್ ಮೇಕಿಂಗ್ ಕೋರ್ಸ್ ಮುಗಿಸಿಕೊಂಡು ಒಂದು ಕತೆ ಬರೆದುಕಂಡು ಎಸ್‌ಡಿ ಅರವಿಂದ್ ಅವರ ಬಳಿ ಹೋದೆ. ಅವರು ಕತೆ ಕೇಳುವ ಜತೆಗೆ ನಾವೇ ಒಂದು ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿ ಆ್ಯಕ್ಟ್ ಮಾಡು ಅಂದ್ರೆ. ಹೀಗೆ ಕತೆಗಾರನಾಗಿ ಹೋದವನಿಗೆ ನಾಯಕನಾಗುವ ಅವಕಾಶ ಸಿಕ್ಕಿತು. ನಟನೆ ಜತೆಗೆ ನಿರ್ದೇಶನದ ವಿಭಾಗದಲ್ಲೂ ಕೆಲಸ ಮಾಡಿದೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಪ್ರೇಕ್ಷಕರಿಗೆ ಕತೆ ಹೇಗೆ ಕನೆಕ್ಟ್ ಆಗುತ್ತದೆ?

ಇಲ್ಲಿ ನನ್ನ ಪಾತ್ರದ ಹೆಸರು ಎಲ್‌ಕೆಬಿ ಅಂದರೆ ಲಕ್ಕುವಲ್ಲಿ ಕೃಷ್ಣಪ್ಪನ ಮಗ ಬಾಲು. ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಇರೋದು ಒಂದೇ ಜೀವನ ಅದನ್ನು ಅನುಭವಿಸಬೇಕು ಎನ್ನುವ ಕ್ಯಾರೆಕ್ಟರ್. ಆಗಲೇ ನೋಟ್ ಬ್ಯಾನ್ ಆಗುತ್ತದೆ. ಆಗ ಈ ಕ್ಯಾರೆಕ್ಟರ್ ನಡೆ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಪ್ರೇಕ್ಷಕರಿಗೆ ಇದು ಖಂಡಿತ ಕನೆಕ್ಟ್ ಆಗುತ್ತದೆ. ಯಾಕೆಂದರೆ ಅವರು ಪಟ್ಟ ವ್ಯಥೆಗಳನ್ನೇ ಕತೆ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಹಣದ ಸುತ್ತ ನಡೆಯುವ ಎಂಟರ್‌ಟೈನ್‌ಮೆಂಟ್ ಚಿತ್ರವಿದು. ನನಗೆ ಜೋಡಿಯಾಗಿ ಐಶ್ವರ್ಯ ಸಿಂಧೋಗಿ ಇದ್ದಾರೆ.