ಮಕ್ಕಳಿಗೆ ಹೆತ್ತ ತಾಯಿಯೇ ಮದುವೆಗೂ ಮುನ್ನ ಮನೆಗೆ ಹುಡುಗಿಯೊಬ್ಬಳನ್ನು ಕರೆತಂದು ಲವ್‌ ಮಾಡಿಸುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲವೆಂದು ಅಚ್ಚರಿ ವ್ಯಕ್ತಪಡಿಸುವವರಿಗೆ ಹರಟೆ ಕಟ್ಟೆಯಂತೆ ಸಾಗುವ ‘ಎರಡನೇ ಸಲ' ಇಷ್ಟವಾಗುತ್ತದೆ.
ರೇಟಿಂಗ್ ***
ಚಿತ್ರ: ಎರಡನೇ ಸಲ
ಭಾಷೆ: ಕನ್ನಡ,
ತಾರಾಗಣ: ಧನಂಜಯ, ಸಂಗೀತಾ ಭಟ್, ಜ್ಯೂಲಿ ಲಕ್ಷ್ಮೀ, ಪದ್ಮಜಾ ರಾವ್, ಅವಿನಾಶ್, ಕಿರಿಕ್ ಕೀರ್ತಿ
ನಿರ್ದೇಶನ: ಗುರುಪ್ರಸಾದ್
ನಿರ್ಮಾಣ: ಯೋಗೇಶ್ ನಾರಾಯಣ್
ಸಂಗೀತ: ಜೆ ಅನೂಪ್ ಸೀಳಿನ್
ಛಾಯಾಗ್ರಾಹಣ: ಸಾಮ್ರಾಟ್ ಅಶೋಕ್ ಗೌತಮ್
ಮಾತಿನಲ್ಲಿ ಮನೆ ಕಟ್ಟುವುದು ಹಲವರಿಗೆ ಕರಗತವಾಗಿರುವ ಜಾಣ್ಮೆ. ಆದರೆ, ಅದೇ ಮಾತುಗಳಿಂದ ಸಿನಿಮಾ ಕಟ್ಟುವ ಸೃಜನಶೀಲತೆ ಕೆಲವರಿಗೆ ಮಾತ್ರ ದಕ್ಕಿದೆ. ಆ ಪೈಕಿ ಗುರುಪ್ರಸಾದ್ ಪ್ರಮುಖರು. ‘ಮಠ', ‘ಎದ್ದೇಳು ಮಂಜುನಾಥ', ‘ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನೇ ತೆಗೆದುಕೊಳ್ಳಿ ಮಾತು, ಮಾತು, ಮತ್ತೂ ಮಾತು. ತೂತುಗಳಿಲ್ಲದೆ ದೋಸೆ ಮಾಡಬಹುದೇನೋ ಆದರೆ, ವಿಡಂಬನೆಯ ಮಾತುಗಳ ಮಂಟಪ್ಪವಿಲ್ಲದೆ ಗುರುಪ್ರಸಾದ್ ಸಿನಿಮಾ ಮಾಡಲ್ಲ ಎಂಬುದಕ್ಕೆ ‘ಎರಡನೇ ಸಲ' ನಿದರ್ಶನ ಒದಗಿಸಿದ್ದಾರೆ ಅವರು. ತಾಜ್'ಮಹಲ್ ಹಲವರಿಗೆ ಪ್ರೇಮಿಗಳ ಅದ್ಭುತ ತ್ಯಾಗದ ಪ್ರತೀಕದಂತೆ ಕಂಡರೆ, ಇನ್ನು ಕೆಲವರಿಗೆ ಸುಂದರ ಕಟ್ಟಡ, ಪ್ರವಾಸಿ ತಾಣ. ಉಳಿದವರಿಗೆ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಕಟ್ಟಿರುವ ಸ್ಮಾರಕ. ಗುರುಪ್ರಸಾದ್ ಸಿನಿಮಾ ಕೂಡ ಅಷ್ಟೆ, ನೋಡುವಾಗ ಅವರವರ ಭಾವ ಮತ್ತು ಭಕುತಿಗೆ ತಕ್ಕಂತೆ. ಜತೆಗೆ ಗುರುಪ್ರಸಾದ್ ಇನ್ನೂ ಬದಲಾಗಿಲ್ಲ ಎಂಬುದನ್ನು ಹೇಳುವ ಮತ್ತೊಂದು ಚಿತ್ರವಿದು.
ಅದ್ದೂರಿ ಮೇಕಿಂಗ್, ಸ್ಟಾರ್ಗಳ ಅಬ್ಬರ, ಐಟಂ ಡ್ಯಾನ್ಸ್'ಗಳ ಹವಾ, ಹೀರೋಗಳ ಎಂಟ್ರಿ ಸೌಂಡಿನ ಹೊರತಾಗಿಯೂ ಒಂದು ಕತೆ ಹೇಳುವುದಕ್ಕೆ ಸಾಧ್ಯವೇ ಎಂದುಕೊಳ್ಳುವಾಗಲೆಲ್ಲ ಇವರ ಚಿತ್ರ ಕಣ್ಮುಂದೆ ಬರುತ್ತವೆ. ಹಾಗಂತ ಅವರು ಯಾರೂ ಕಂಡು ಹಿಡಿಯದ ಕತೆಯ ಬೆನ್ನು ಹತ್ತಿ ತೆರೆ ಮೇಲೆ ತರಲ್ಲ. ದಿನನಿತ್ಯ ನಾವು ನೋಡುವ ನಮ್ಮ ಸುತ್ತಲಿನ ಸಂಗತಿಗಳೇ ಅವರ ಸಿನಿಮಾ ಕತೆಗಳು. ಅದರಲ್ಲಿ ಮುಖ್ಯವಾಗಿ ವೃದ್ಧರ ಸಮಸ್ಯೆ ಅವರ ಕತೆಯ ಕೇಂದ್ರಬಿಂದು. ಅದರ ಜತೆಗೆ ಇಂದಿನ ಹೀರೋಗಳ ಆಡಂಬರವನ್ನು ವ್ಯಂಗ್ಯ ಮಾಡುವ ವಿಡಂಬನೆ, ಕತೆಯನ್ನು ಮೀರದ ಪಾತ್ರಗಳು, ಹಾಸ್ಯಕ್ಕೆ ಕೊಂಚ ಅಡಲ್ಟ್ ಟಚ್ ಕೊಟ್ಟು ಕತೆ ನಿರೂಪಿಸುವ ಶೈಲಿ ‘ಎರಡನೇ ಸಲ'ದಲ್ಲೂ ಮುಂದುವರೆದಿದೆ. ಎದೆ ಹಾಲು ಕುಡಿಸಿ ಎದೆ ಮಟ್ಟ ಬೆಳೆಸಿದ ಮಕ್ಕಳಿಗೆ ಮದುವೆ ಮಾಡಿದ ಮೇಲೆ ವಯಸ್ಸಾದ ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಾರೆ. ಅಂಥ ಸ್ಥಿತಿ ತನಗೆ ಬರಬಾರದು. ಹೀಗಾಗಿ ತನ್ನ ಮನೆಗೆ ಬರುವ ಸೊಸೆ ತನ್ನ ಮಗನಂತೆ ತನ್ನನ್ನೂ ಮನೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳಬೇಕೆಂಬ ಹೆತ್ತ ಕರುಳಿನ ಸಂಕಟದಲ್ಲಿ ಹುಟ್ಟಿಕೊಳ್ಳುವ ಪ್ರೇಮ ಕತೆ ಇದು.
ಹುಡುಗಿಯ ಹಿಂದೆ ಹೊರಟು ಹಾದಿ ತಪ್ಪುವ ಮಕ್ಕಳನ್ನು ನೋಡಿದ್ದೇವೆ. ಆದರೆ, ಅದೇ ಮಕ್ಕಳಿಗೆ ಹೆತ್ತ ತಾಯಿಯೇ ಮದುವೆಗೂ ಮುನ್ನ ಮನೆಗೆ ಹುಡುಗಿಯೊಬ್ಬಳನ್ನು ಕರೆತಂದು ಲವ್ ಮಾಡಿಸುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲವೆಂದು ಅಚ್ಚರಿ ವ್ಯಕ್ತಪಡಿಸುವವರಿಗೆ ಹರಟೆ ಕಟ್ಟೆಯಂತೆ ಸಾಗುವ ‘ಎರಡನೇ ಸಲ' ಇಷ್ಟವಾಗುತ್ತದೆ. ಹೀಗಾಗಿ ಮಗನಿಗೆ ತಾಯಿಯೇ ಹೇಗೆ ಪ್ರೇಯಸಿಯನ್ನು ಹುಡುಕಿ ತರುತ್ತಾಳೆಂಬ ಕುತೂಹಲ ಇದ್ದವರು ಈ ಚಿತ್ರ ನೋಡಬಹುದು. ಜಾನಪದ ಗೀತೆಗಳಂತೆ ಕೇಳಿಸುವ ಹಾಡುಗಳು, ಸಾಹಿತ್ಯವನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಅನೂಪ್ ಸೀಳಿನ್'ರ ಸಂಗೀತ ಕೂಡ ನಿರ್ದೇಶಕನ ಕಲ್ಪನೆಗೆ ಪೂಕರವಾಗಿದೆ. ನಟನೆ ವಿಚಾರಕ್ಕೆ ಬಂದರೆ ಧನಂಜಯ್ ಹಾಗೂ ಸಂಗೀತಾ ಭಟ್ ಸ್ಪರ್ಧೆಗೆ ಬಿದ್ದವರಂತೆ ಪಾತ್ರಗಳಲ್ಲಿ ಮುಳುಗುತ್ತಾರೆ. ಒಂದು ಹಂತದಲ್ಲಿ ಸಂಗೀತಾ ಭಟ್ ಮೇಲುಗೈ ಸಾಧಿಸಿದಂತೆ ಆವರಿಸಿಕೊಳ್ಳುತ್ತಾರೆ. ಲಕ್ಷ್ಮೀ ಅವರದ್ದು ಎಂದಿನಂತೆ ಆಪ್ತ ಅಮ್ಮ. ಉಳಿದವರು ನಿರ್ದೇಶಕರ ಮಾತುಗಳನ್ನು ಒಪ್ಪಿಸುವ ಜವಾಬ್ದಾರಿ ನಿಭಾಯಿಸಿದ್ದಾರೆ.
- ಆರ್.ಕೇಶವಮೂರ್ತಿ, ಕನ್ನಡಪ್ರಭ
