ಗೌರಿಬಿದನೂರು ತಾಲೂಕಿನ ಗಡಿ ಭಾಗದಲ್ಲಿ ಸಂಚರಿಸುತ್ತಿದ್ದ ಶಿವರಾಜ್ ಕುಮಾರ್ ಕಾರನ್ನು ಚೆಕ್ ಪೋಸ್ಟ್ ಅಧಿಕಾರಿಗಳು ಲೋಕಸಭಾ ಚುನಾವಣೆ ನೀತಿ ಸಂಹಿತೆಯನ್ವಯ ತಪಾಸಣೆ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗಿ ಬರುವಾಗ ಅವರ ಕಾರನ್ನು ತಾಲೂಕಿನ ತಿಪ್ಪಗಾನಹಳ್ಳಿ ಬಳಿ ತಪಾಸಣೆ ನಡೆಸಿದ ಸಿಬ್ಬಂದಿ, ಕಾರ್ ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆ ದಾಖಲಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ನಟನನ್ನು ಕಂಡ ಸಂತಸದಲ್ಲಿ ಅವರೊಂದಿಗೆ ಒಂದು ಗ್ರೂಪ್ ಪೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜನಸಾಮಾನ್ಯರಂತೆ ವರ್ತಿಸಿ ಸಹಕರಿಸಿದ್ದಕ್ಕೆ ಸಿಬ್ಬಂದಿ, ಹಾಗೂ ಸಾರ್ವಜನಿಕ ಮೆಚ್ಚುಗೆಗೆ ಶಿವಣ್ಣ ಪಾತ್ರರಾಗಿದ್ದಾರೆ.