Asianet Suvarna News Asianet Suvarna News

ಈ ಪ್ರಶಸ್ತಿ ಪ್ರತಿಯೊಬ್ಬರಿಗೂ ಅರ್ಪಣೆ: ಲಕ್ಷ್ಮೀ

ರಾಜ್‌ಕುಮಾರ್  ಪ್ರಶಸ್ತಿ ಪುರಸ್ಕೃತ ಜೂಲಿ ಲಕ್ಷ್ಮೀ ಜತೆ ಮಾತುಕತೆ | ನನಗೆ ಬಹಳಷ್ಟು ಅವಾರ್ಡ್ ಬಂದಿದೆ. ಆದರೆ ಈ ಪ್ರಶಸ್ತಿ ಕೊಟ್ಟ ಸಂತೋಷವೇ ಬೇರೆ. ಶಿವಾಜಿ ಗಣೇಶನ್ ಮತ್ತು ಡಾ. ರಾಜ್‌ಕುಮಾರ್ ನನ್ನನ್ನು ಹರಸಿದ್ದಾರೆ- ಲಕ್ಷ್ಮೀ 

Dr. Rajkumar awardee Sandalwood actress Lakshmi interview with Kannada Prabha
Author
Bengaluru, First Published Oct 3, 2018, 12:49 PM IST

ಬೆಂಗಳೂರು (ಅ. 03): ಬಹುಭಾಷಾ ನಟಿ ಲಕ್ಷ್ಮಿಯವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಬಂದಿದೆ. ಜೊತೆಗೆ ಶಿವಾಜಿ ಗಣೇಶನ್ ಪ್ರಶಸ್ತಿ ಕೂಡಾ ಬಂದಿದೆ. ಈ ಸಂತೋಷವನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

ನಿನ್ನೆ ತಾನೇ ಶಿವಾಜಿ ಗಣೇಶನ್ ಪ್ರಶಸ್ತಿ ಸ್ವೀಕರಿಸಿದಿರಿ, ಜೊತೆಗೆ ಡಾ. ರಾಜ್ ಕುಮಾರ್ ಪ್ರಶಸ್ತಿ ಬಂದಿದೆ. ಹೇಗನ್ನಿಸಿತು?

ನಿನ್ನೆ ಶಿವಾಜಿ ಗಣೇಶನ್ ಅವಾರ್ಡ್ ಸ್ವೀಕರಿಸಲು ಹೋಗ್ತಿರುವಾಗ ಈ ಮೆಸೇಜ್ ಬಂತು. ನಾನು ಅಂದ್ಕೊಂಡೆ, ಈ ಇಬ್ಬರು ಹೀರೋಗಳು ಮೇಲಿನ ಲೋಕದಲ್ಲಿ ಮಾತಾಡ್ಕೊಂಡು ನನ್ನ ತಲೆ ಮೇಲೆ ಅಕ್ಷತೆ ಹಾಕಿದ್ದಾರೆ ಅಂತ. ನನಗೆ ಬಂದ ಈ ಪ್ರಶಸ್ತಿಯನ್ನು ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಅರ್ಪಣೆ ಮಾಡಬೇಕು ಅನಿಸ್ತಿದೆ. ಅವ್ರೆಲ್ಲ ಇನ್ನೂ ತಮ್ಮ ಮನೆ ಮಗಳಂತೆ ಕಂಡು ಪ್ರೀತಿಸುತ್ತಾರಲ್ಲಾ. ನನಗೆ ಬಹಳಷ್ಟು ಅವಾರ್ಡ್ ಬಂದಿದೆ.

ಆದರೆ ಈ ಪ್ರಶಸ್ತಿಯಿಂದ ಸಿಕ್ಕಿದ ಸಂತೋಷವೇ ಬೇರೆ. ಈಗಲೂ ಹಬ್ಬ ಅಂದರೆ ಇದೇ ನನಗೆ. ಡಾ.ರಾಜ್‌ಕುಮಾರ್ ಹೇಳ್ತಿದ್ದ ಮಾತು ನೆನಪಾಗುತ್ತಿದೆ, ಯಾವ ಪ್ರಶಸ್ತಿ ಗೌರವಗಳನ್ನೂ ನಾವು ಹುಡುಕ್ಕೊಂಡು ಹೋಗಬಾರದು, ಅವೇ ನಮ್ಮನ್ನು ಹುಡುಕಿಕೊಂಡು ಬರುವ ತನಕ ಕಾಯಬೇಕು. ಯಾವಾಗ ಬರಬೇಕು ಅಂತ ಭಗವಂತ ತೀರ್ಮಾನ ಮಾಡ್ತಾನೋ ಆವಾಗ ಬಂದೇ ಬರುತ್ತೆ. ಪ್ರೀತಿಯಿಂದ ನೀಡುವ ಯಾವ ಪ್ರಶಸ್ತಿ, ಗೌರವಗಳನ್ನೂ ತಿರಸ್ಕರಿಸಬಾರದು.

ಅಂತಹ ಮಹಾನ್ ವ್ಯಕ್ತಿ ಎಂಥಾ ಮಾತು ಹೇಳಿ ಹೋಗಿದ್ದಾರೆ. ಎರಡೂ ಕೈ ಚಾಚಿ ದೇಹಿ ಅಂತ ನಾನು ಈ ಪ್ರಶಸ್ತಿ ತಗೊಳ್ತೀನಿ.

ಡಾ.ರಾಜ್ ಜೊತೆಗೆ ಅಷ್ಟೊಂದು ಸಿನಿಮಾಗಳಲ್ಲಿ ಅಭಿನಯಿಸಿದ್ದೀರಿ. ಈ ಹೊತ್ತಿಗೆ ಅವರೊಂದಿಗಿನ ಒಡನಾಟ ನೆನಪಿಸಿಕೊಳ್ಳಬೇಕು ಅಂದರೆ?

ರಾಜ್‌ಕುಮಾರ್ ಇಷ್ಟು ದೊಡ್ಡ ವ್ಯಕ್ತಿ ಆಗಿರೋದರ ಹಿಂದಿನ ಶಕ್ತಿ ಪಾರ್ವತಮ್ಮ. ಅವರು ಮನೆಯಲ್ಲಿ ಕುಳಿತು, ಮಕ್ಕಳು, ಕಂಪೆನಿ, ರಾಜ್‌ಕುಮಾರ್ ಅವರ ಡೇಟ್ಸ್ ಹೀಗೆ ಆಲ್‌ರೌಂಡರ್ ಥರ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ರಲ್ಲ. ಇದನ್ನೆಲ್ಲ ಮ್ಯಾನೇಜ್ ಮಾಡೋಕೆ ಅವರೇನು ಎಂಬಿಎ ಓದಿಲ್ಲ. ಬಹಳ ಮೃದುವಾಗಿ ಮಾತನಾಡುವ ಅವರಿಗೆ ನಾನು ಅಂದರೆ ತುಂಬ ಇಷ್ಟ. ನನಗೂ ಅಷ್ಟೇ. ರಾಜ್ ಕುಮಾರ್ ಅವರಿಗೆ ನಟಿಸುವುದೊಂದೇ ಕೆಲಸ, ಆದರೆ ಪಾರ್ವತಮ್ಮನವರಿಗೆ? ಒಬ್ಬಾತ ದೊಡ್ಡವ್ಯಕ್ತಿಯಾಗಿ ಹೊರಹೊಮ್ಮಿದರೆ ಆ ಕ್ರೆಡಿಟ್ ಯಾರಿಗೆ ಹೋಗ್ಬೇಕು ಗೊತ್ತಾ, ಅವ್ರಿಗೆ ಯಾವ ಟೆನ್ಶನ್ ಕೊಡದೇ ಎಲ್ಲವನ್ನೂ ನೋಡಿಕೊಳ್ಳುವ ಹೆಂಡತಿಗೆ. ಪಾರ್ವತಮ್ಮನಿಗೇ ನಾನು ಈ ಪ್ರಶಸ್ತಿಯ ಕ್ರೆಡಿಟ್ ಕೊಟ್ಟುಬಿಡ್ತೀನಿ.

30 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದವರು. ಆಗಿನ ಅವಿಸ್ಮರಣೀಯ ಕ್ಷಣಗಳು?

30 ಅಲ್ಲಮ್ಮಾ, 51 ವರ್ಷಗಳು. ಅಂದರೆ ನೀವೆಲ್ಲ ಹೋದ ಜನ್ಮದಲ್ಲೂ ಈ ಜನ್ಮದಲ್ಲೂ ನನ್ನನ್ನು ನೋಡಿದ್ದೀರ. ಇಲ್ಲೊಂದು ವಿಷಯ ಹೇಳ್ತೀನಿ. ಕೋಪ ಅನ್ನೋದು ಒಂದು ಸ್ವಲ್ಪವೂ ಬರದೇ ಇರುವ ಮನುಷ್ಯ ಈ ಲೋಕದಲ್ಲಿ ಇದ್ದರು
ಅಂದರೆ ಅದು ರಾಜ್‌ಕುಮಾರ್ ಸಾರ್. ಶುರು ಶುರುವಿನಲ್ಲಿ ನಮಗೆಲ್ಲ ಅರಗಿಸಿಕೊಳ್ಳಲಿಕ್ಕೇ ಬಹಳ ಕಷ್ಟ ಆಗುತ್ತಿತ್ತು.

‘ಯಾಕ್ಸಾರ್ ನೀವು ಕೋಪ ಮಾಡ್ಕೊಳಲ್ಲಾ?’ ಅಂದರೆ, ‘ಕೋಪ, ದುರಹಂಕಾರವನ್ನೆಲ್ಲ ಇಟ್ಕೊಂಡು ನಾವು ಸಾಧಿಸೋದಾದರೂ ಏನು’ ಅನ್ನುತ್ತಿದ್ದರು. ‘ಹೋಗಿ ಸಾರ್, ನೀವು ತುಂಬ ಬೋರ್’ ಅಂತ ಕಾಲೆಳೆಯುತ್ತಿದ್ದೆವು. ಆಗಲೂ
ಸಾವಧಾನದಿಂದ, ‘ಹೌದಾ ಲಕ್ಷ್ಮೀ ಅವರೇ, ನನಗೆ ಕೋಪ ಮಾಡೋದೇ ಬೇಕಿಲ್ಲ. ಎಲ್ಲರೂ ನಮ್ಮವರು ಅಂತ ತಿಳ್ಕೊಂಡ್ರಾಯ್ತು’ ಎನ್ನುತ್ತಿದ್ದರು. ಅದೇ ಕಾರಣಕ್ಕೆ ವೀರಪ್ಪನ್ನಂಥ ದರೋಡೆಕೋರನೂ ಅವರ ಕಾಲಿಗೆ ನಮಸ್ಕಾರ ಮಾಡಿ ಕಳುಹಿಸಿಕೊಟ್ಟ. ಇನ್ನೊಂದು ವಾರ ಅವರು ಅಲ್ಲಿರುತ್ತಿದ್ದರೆ ಬಹುಶಃ ಅವನೇ ಚೇಂಜ್ ಆಗಿರೋನು.

ನಿಮ್ಮಂಥಾ ನಾಯಕಿಯರು ಚಿತ್ರರಂಗದಲ್ಲಿ ಬಹಳ ಕಾಲ ಉಳಿದಿದ್ರಿ. ಆದರೆ ಈ ಕಾಲದ ಹೀರೋಯಿನ್‌ಗಳಿಗೆ ಯಾಕೆ ಸಾಧ್ಯವಾಗ್ತಿಲ್ಲ?

ಈಗ್ಲೂ ಹತ್ತು-ಹನ್ನೆರಡು ವರ್ಷ ಚಿತ್ರರಂಗದಲ್ಲಿ ನಿಂತ ಹೀರೋಯಿನ್‌ಗಳಿದ್ದಾರೆ. ಆದರೆ ಅಷ್ಟರಲ್ಲಿ ಅವರಿಗೆ ಲೈಫ್ನಲ್ಲಿ ಸೆಟಲ್ ಆಗ್ಬೇಕು ಅನ್ನುವ ಹಂಬಲ. ಈಗಿನ ಕಾಲದ ಮಕ್ಕಳೆಲ್ಲ ಬಹಳ ಪ್ಲಾನ್ಡ್ ಆಗಿದ್ದಾರೆ. ಅದು ಒಳ್ಳೆಯ
ಬೆಳವಣಿಗೆಯೇ. ಇನ್ನು ಸ್ಥಾನಮಾನದ ವಿಷಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ. ರಾಜ್‌ಕುಮಾರ್‌ಗೆ ಸಿಕ್ಕಿದ ಸ್ಥಾನ ಇನ್ನೊಬ್ಬನಿಗೂ ಸಿಗಬೇಕು ಅಂತೇನಿಲ್ಲವಲ್ಲ. ಹೀರೋಯಿನ್ ಗಳ ಸ್ಥಾನಮಾನದ ವಿಚಾರವೂ ಅಷ್ಟೇ. ಆವಾಗ್ಲೂ ದುಡ್ಡೇ,
ಈವಾಗ್ಲೂ ದುಡ್ಡೇ, ಏನೂ ಕಮ್ಮಿಯಿಲ್ಲ. ಹೊಸ ನೋಟು ಬಂದಿದೆ. ಡಿಜಿಟಲ್ ಮನಿ ಬಂದಿದೆ ಅನ್ನೋದಷ್ಟೇ ವ್ಯತ್ಯಾಸ.  

-ಪ್ರಿಯಾ ಕೇರ್ವಾಶೆ 

Follow Us:
Download App:
  • android
  • ios