ಬಹುತೇಕ ಟಾಲಿವುಡ್ ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿದ ಚಿತ್ರವಿದು. ಜತೆಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಕೂಡ ಅಲ್ಲಿನವರೇ. ಹೆಸರಾಂತ ನಿರ್ದೇಶಕ ಪೂರಿ ಜಗನ್ನಾಥ್ ಶಿಷ್ಯ ರವಿ ಗೌಡ ನಿರ್ದೇಶನದ ಚೊಚ್ಚಲ ಚಿತ್ರ. ಅದಕ್ಕೆ ತಕ್ಕಂತೆ ತೆಲುಗು ರೇಂಜ್‌ನಲ್ಲೇ ಚಿತ್ರದ ಟೀಸರ್ ಲಾಂಚ್ ಮಾಡಿ ಕುತೂಹಲ ಮೂಡಿಸಿದ್ದು ವಿಶೇಷ

ಹಾಲಿವುಡ್ ನಟರ ಹಾಗೆ ವಿನೋದ್ ಪ್ರಭಾಕರ್ ಎಂಟು ಪ್ಯಾಕ್‌ನಲ್ಲಿ ಹುರಿಗಟ್ಟಿಸಿದ ದೇಹವನ್ನು ರಗಡ್‌ಲುಕ್‌ನಲ್ಲಿ ಭರ್ಜರಿಯಾಗಿ ತೋರಿಸಿದ್ದಾರೆ ನಿರ್ದೇಶಕರು. ಆ ದಿನ ಸಂಜೆ ಟೀಸರ್ ಲಾಂಚ್ ಕಾರ್ಯಕ್ರಮಕ್ಕಾಗಿಯೇ ಶೂಟಿಂಗ್ ಸೆಟ್‌ನಿಂದಲೇ ನೇರವಾಗಿ ಚಾಮುಂಡೇಶ್ವರಿ ಸ್ಟುಡಿಯೋಕ್ಕೆ ಬಂದಿದ್ದ ನಟ ದರ್ಶನ್, ಚಿತ್ರದ ಟೀಸರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ‘ಟೈಗರ್ ರೇಂಜ್ ಗೆ ತಕ್ಕಂತೆ ಟೀಸರ್ ಬಂದಿದೆ. ಆ್ಯಕ್ಷನ್ ಸನ್ನಿವೇಶಗಳ ಜತೆಗೆ ಸಿನಿಮಾ ದೊಳಗಿನ ಸೆಂಟಿಮೆಂಟ್ ಸೀನ್ ಕೂಡ ಮನಸು ಮುಟ್ಟುವಂತಿದೆ. ವಿನೋದ್ ಅವರಿಗೆ ಇದೊಂದು ಒಳ್ಳೆಯ ಮೈಲುಗಲ್ಲು ಆಗುವ ಎಲ್ಲಾ ಲಕ್ಷಣಗಳಿವೆ’ ಅಂತ ದರ್ಶನ್ ಬಣ್ಣಿಸಿದ್ದು ಚಿತ್ರ ತಂಡಕ್ಕೆ ಥ್ರಿಲ್ ನೀಡಿತು.

ಕನ್ನಡದ ನಂಟಿದ್ದರೂ ಕನ್ನಡ ಭಾಷೆ ಗೊತ್ತಿಲ್ಲದ ಕಾರಣಕ್ಕೆ ತೆಲುಗಿನಲ್ಲೇ ಮಾತನಾಡಿದ ರವಿಗೌಡ, ‘ವಿನೋದ್ ಅವರ ಮಾಸ್ ಲುಕ್‌ಗೆ ತಕ್ಕಂತೆ ಈ ಸಿನಿಮಾವನ್ನು ತೆರೆಗೆ ತಂದಿದ್ದೇವೆ. ಮಾಸ್ ಜತೆಗೆ ಕ್ಲಾಸ್ ಆಡಿಯನ್ಸ್‌ಗೂ ಈ ಚಿತ್ರ ಹಿಡಿಸುವಂತಿದೆ. ಚಿತ್ರದ ತೆರೆ ಕಂಡರೆ ವಿನೋದ್ ದೊಡ್ಡ ಸ್ಟಾರ್ ಆಗುವುದು ಗ್ಯಾರಂಟಿ’ ಎನ್ನುವ ಮಾತುಗಳನ್ನು ಅರ್ಧಗಂಟೆಯ ತಮ್ಮ ಮಾತುಗಳಲ್ಲಿ ಹೇಳಿಕೊಂಡರು.

ಅಷ್ಟು ಮಾತುಗಳ ಆಚೆ, ಹೆಚ್ಚು ಸಮಯವನ್ನು ನಿರ್ಮಾಪಕರು ಮತ್ತು ಚಿತ್ರ ತಂಡಕ್ಕೆ ಥ್ಯಾಂಕ್ಸ್ ಹೇಳುವುದಕ್ಕೆ ಮೀಸಲಿಟ್ಟರು. ವಿನೋದ್ ಪ್ರಭಾಕರ್ ಮಾತನಾಡುತ್ತಾ ಚಿತ್ರೀಕರಣದ ಅನುಭವ, ಪೋಷಕ ಕಲಾವಿದರ ಸಹಕಾರ ಇತ್ಯಾದಿ ನೆನಪಿಸಿಕೊಂಡರು. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಶರತ್ ಲೋಹಿತಾಶ್ವ, ಒಂದೊಳ್ಳೆ ಪಾತ್ರ ಸಿಕ್ಕಿರುವ ಖುಷಿ ಹಂಚಿಕೊಂಡರು ನಿರ್ಮಾಪಕ ಚಕ್ರವರ್ತಿ, ಚಿತ್ರಕ್ಕೆ ಕನ್ನಡ ಪ್ರೇಕ್ಷಕರ ಆಶೀರ್ವಾದ ಬೇಕೆಂದರು. ನಿರ್ಮಾಪಕಿ ಶೈಲಜಾ ನಾಗ್, ನಿಶಾ ವಿನೋದ್ ಪ್ರಭಾಕರ್, ನಿರ್ಮಾಪಕ ರಾಮು ಹಾಜರಿದ್ದರು.