‘ಬಹಳ ಬರಹಗಾರರು ನನ್ನ ಯೋಚನೆಗಳು ದೊಡ್ಡದಿವೆ, ಚಿತ್ರರಂಗಕ್ಕೆ ಅದರ ಅವಶ್ಯಕತೆ ಇಲ್ಲ ಎಂಬ ಕ್ರಿಯೇಟಿವ್ ಸಂಕಟ ಅನುಭವಿಸುತ್ತಿರುತ್ತಾರೆ. ನನ್ನ ಪ್ರಕಾರ ಆ ಸಂಕಟ ಅವಶ್ಯಕತೆ ಇಲ್ಲ. ಇಲ್ಲಿ ಒಮ್ಮೆಲೇ ನಾವಂದುಕೊಂಡಿದ್ದು ಮಾಡಲಾಗದೇ ಇರಬಹುದು. ಆದರೆ ಇದು ದಾರಿ. ದಾರಿಯನ್ನು ಆಸ್ವಾದಿಸದೇ ಗುರಿ ಸೇರಲಾಗುವುದಿಲ್ಲ. ಒಂದಲ್ಲ ಒಂದು ದಿನ ನಮಗೆ ಇಷ್ಟವಾದ ಕೆಲಸ ಮಾಡಲು ಸಾಧ್ಯವಾಗುತ್ತದೆ.’

ಜಾಸ್ತಿ ಕಾನ್ಫಿಡೆನ್ಸು, ಸ್ವಲ್ಪ ಹಿಂಜರಿಕೆ, ಭಾರಿ ಹಠ, ಇಂಟರೆಸ್ಟಿಂಗ್ ಜೀವನಾನುಭವ, ಅಪಾರ ಜೀವನಪ್ರೀತಿ ಎಲ್ಲವನ್ನೂ ಮಾತಿನಲ್ಲೇ ಪ್ರಕಟಿಸುವ ಈ ಬರಹಗಾರ ಹೆಸರು ರಘು ನಿಡುವಳ್ಳಿ. ಊರು ಕಡೂರ್ ತಾಲೂಕಿನ ನಿಡುವಳ್ಳಿ. ಅಪ್ಪ ಬಸವರಾಜು. ಅಮ್ಮ ಜಯಮ್ಮ. 13 ವರ್ಷಗಳ ಹಿಂದೆ ತಿಪಟೂರಿನಲ್ಲಿ ಪಿಯುಸಿ ಮುಗಿಸಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದವನಿಗೆ ತಾನು ಚಿತ್ರರಂಗದ ಭಾಗವಾಗಿ ಹೋಗುತ್ತೇನೆ ಅನ್ನುವ ಸಣ್ಣ ಐಡಿಯಾ ಕೂಡ ಇರಲಿಲ್ಲ. ಓದು ಮುಂದುವರಿಸುವ ಆರ್ಥಿಕ ಶಕ್ತಿ ಇರಲಿಲ್ಲ. ಹೊಟ್ಟೆಪಾಡಿಗೊಂದುಕೆಲಸ ಬೇಕಿತ್ತು.

ಬಂಧು ಲಕ್ಷ್ಮೀಕಾಂತ್. ಮೇಕಪ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಜೊತೆ ಮೇಕಪ್ ಅಸಿಸ್ಟೆಂಟ್ ಆಗಿದ್ದು ರಘು ಮೊದಲ ಕೆಲಸ. ಸೀರಿಯಲ್ಲಿಗೆ ಮೇಕಪ್ ಕೆಲಸ ಮಾಡುತ್ತಿದ್ದಾಗ ಒನ್ ಫೈನ್ ಡೇ ಪರಿಚಯ ಆದ ಆರ್ ಚಂದ್ರು ಸಿನಿಮಾ ರಂಗಕ್ಕೆ ಪರಿಚಯಿಸಿದರು. ರಘುಗೆ ಓದುವುದು ಅಂದ್ರೆ ಇಷ್ಟ. ಬರವಣಿಗೆ ಪ್ರೀತಿ. ಒಂದುಸಂದರ್ಭದಲ್ಲಿ ಬರವಣಿಗೆಗೆ ಇಳಿಯುವ ಅವಕಾಶ ಸಿಕ್ಕಿತು. ಅದು ಅಣಜಿ ನಾಗರಾಜ್ ಅವರ ನಂದಾದೀಪ ಚಿತ್ರದಲ್ಲಿ.

ಈ ಹೊತ್ತಿಗೆ ದಾರಿ ಸ್ಪಷ್ಟವಾಗಿ ಗೋಚರಿಸತೊಡಗಿತ್ತು. ಬರವಣಿಗೆ ಮತ್ತು ನಿರ್ದೇಶನದ ಮೇಲೆ ಪ್ರೀತಿ ಹುಟ್ಟತೊಡಗಿತು. ಆರ್ ಚಂದ್ರು ‘ಮೈಲಾರಿ’ಗೆ ಬರೆಸಿದರು. ಜಯತೀರ್ಥ ‘ಬುಲೆಟ್ ಬಸ್ಯ’ ಚಿತ್ರದಲ್ಲಿ ಬರೆಸಿ ಪ್ರೋತ್ಸಾಹಿಸಿದರು. ಈ ಮಧ್ಯೆ ಸಂಜೆ ಕಾಲೇಜಿಗೆ ಹೋಗಿ ಬಿಎಸ್ಸಿ ಪದವಿ ಪಡೆದರು. ಮಧ್ಯಮ ವರ್ಗದಲ್ಲಿ ಹುಟ್ಟಿ ಮಹಾನಗರ ಸೇರಿದವರಿಗೆ ವಿಚಿತ್ರ ಛಲ ಮತ್ತು ಏನನ್ನಾದರೂ ಸಾಧಿಸುವ ಶಕ್ತಿ, ತಾಳ್ಮೆ ಇರುತ್ತದೆ. ಅದನ್ನು ಸಾಬೀತು ಪಡಿಸುವಂತೆ ರಘು ದುಡಿದರು. ಅದಕ್ಕೆ ಅವರ ಬದುಕೇ ಪುರಾವೆ.

ಹೃಷಿಕೇಶ್ ಮುಖರ್ಜಿ, ರಾಜ್‌ಕುಮಾರ್ ಹಿರಾನಿ ಬಹಳ ಇಷ್ಟ ಎನ್ನುವ ರಘು ಈಗ ಬೇಡಿಕೆಯ ಬರಹಗಾರ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಗಳಿಸಿದ್ದ ಇವರು ಈಗ ಸ್ವಂತ ಚಿತ್ರಕತೆ ರಚಿಸಿ ಕಾಯುತ್ತಿದ್ದಾರೆ. ಒಂದೊಳ್ಳೆ ದಿನ ಇವರ ಸಿನಿಮಾ ಬರಲಿದೆ. ಇಷ್ಟವಾದ ಜೀವಗಳಿಗೆ, ಸಿನಿಮಾಗೆ ಕಾಯುವುದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ.

ರಘು ಸಾಲುಗಳು

  • ಓದುವಾಗ ಇಷ್ಟವಾದ ಸಾಲುಗಳನ್ನು, ಸಿನಿಮಾ ನೋಡುವಾಗ ಕಾಡಿದ ಡೈಲಾಗುಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವಿದೆ. ಖಾಲಿ ಅನ್ನಿಸಿದಾಗ, ಬರೆಯಲು ಏನೂ ಇಲ್ಲ ಅನ್ನಿಸಿದಾಗ ಅವುಗಳನ್ನೆಲ್ಲಾ ಮತ್ತೆ ಓದುತ್ತೇನೆ.
  •  ಪ್ರತಿಯೊಬ್ಬ ನಿರ್ದೇಶಕನಿಗೂ ಒಂದು ಸ್ಟೈಲ್ ಇರುತ್ತದೆ. ಅವರ ಯೋಚನೆ ಬರಹಗಾರನಿಗೆ ಅರ್ಥವಾಗಬೇಕು.
  • ಸಂಭಾಷಣೆ ಬರೆಯುವಾಗ ಜಾಸ್ತಿ ಬರೆಯಬಾರದು. ಹೇಳುವ ವಿಚಾರವನ್ನು ಅತಿ ಕಡಿಮೆ ಪದಗಳಲ್ಲಿ ಹೇಳುವುದೇ ಒಳ್ಳೆಯದು.