ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ರ‌್ಯಾಪರ್ ಚಂದನ್ ಶೆಟ್ಟಿ, ಗೆಳತಿ ನಿವೇದಿತಾಗೆ ಮದುವೆ ಪ್ರಪೋಸ್ ಮಾಡಿದ್ದು ವಿವಾದದ ಬಿರುಗಾಳಿ ಎಬ್ಬಿಸಿದೆ. ದಸರಾದಂತಹ ದೊಡ್ಡ ಇತಿಹಾಸವಿರುವ ವೇದಿಕೆಯನ್ನು ಈ ಜೋಡಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಮಾತುಗಳ ಮೂಲಕ ಸೋಷಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆ ಶುರುವಾಗಿದೆ. ಈ ಕುರಿತು ಚಂದನ್ ಸಂದರ್ಶನ.

ನೀವು ಮಾಡಿದ್ದು ತಪ್ಪಾ?

ಗೊತ್ತಿಲ್ಲ ಸರ್, ಇದು ಈ ಮಟ್ಟಕ್ಕೆ ಹೋಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆ ಸಾಂಸ್ಕೃತಿಕ ವೇದಿಕೆಯಲ್ಲಿ ನನ್ನ ಹಾಡು ಇಷ್ಟಪಡುವವರು ಇದ್ದರು. ನಾನು, ನಿವೇದಿತಾ ಬಿಗ್‌ಬಾಸ್‌ಗೆ ಹೋಗಿದ್ದಾಗಿಂದಲೂ ನಮ್ಮಿಬ್ಬರ ಬಗ್ಗೆ ಸಾಕಷ್ಟು ರೂಮರ್ಸ್ ಹರಡಿದ್ದವು. ಇದಕ್ಕೆಲ್ಲ ಇಷ್ಟಪಡುವವರ ಮುಂದೆಯೇ ತೆರೆ ಎಳೆಯೋಣ ಅಂತ ಮಾಡಿದ ನಿರ್ಧಾರದಿಂದ ಇಷ್ಟೆಲ್ಲ ಆಚಾತುರ್ಯ ನಡೆದು ಹೋಯಿತು.

ಮೈಸೂರು: ಚಂದನ್ ಶೆಟ್ಟಿಗೆ ಪೇಮೆಂಟ್ ನೀಡದಂತೆ ಒತ್ತಾಯ

ಯುವ ದಸರಾ ವೇದಿಕೆಯಲ್ಲಿ ಆ ದಿನ ಆಗಿದ್ದೇನು?
ನಿವೇದಿತಾಗೆ ಸರ್ಪ್ರೈಸ್ ಕೊಡೋಣ ಅಂತ ವೇದಿಕೆಗೆ ಕೈ ಹಿಡಿದು ಕರೆ ತಂದೆ. ಅದು ಸಂಘಟಕರಿಗೂ ಮತ್ತು ನಿವೇದಿತಾಗೂ ಗೊತ್ತಿರಲಿಲ್ಲ. ಆಗ ಜನ ದೊಡ್ಡ ಮಟ್ಟದಲ್ಲೆ ಚಪ್ಪಾಳೆ ತಟ್ಟಿ, ರಂಜಿಸಿದರು. ಆ ಕ್ಷಣ ನಾನು, ‘ನನ್ನ ಮದುವೆ ಆಗ್ತೀರಾ’ ಅಂತ ನಿವೇದಿತಾನ ಕೇಳಿದೆ. ಆಕೆ ಎಕ್ಸೈಟ್ ಆಗಿ, ನನ್ನನ್ನು ತಬ್ಬಿಕೊಂಡಳು. ಅಷ್ಟೇ..ಅಲ್ಲಿ ಆ ಕ್ಷಣ ಆಗಿದ್ದು ಇಷ್ಟು ಮಾತ್ರ. ಅದು ಬಿಟ್ಟರೆ, ಅಸಹ್ಯ ಎನಿಸುವಂತೆ ನಾವು ನಡೆದುಕೊಂಡಿಲ್ಲ. ಅಂತಹ ಅಪರಾಧವನ್ನು ಮಾಡಿಲ್ಲ.

ದಸರಾದಂತಹ ದೊಡ್ಡ ವೇದಿಕೆಯನ್ನು ನೀವು ಪರ್ಸನಲ್ ಆಗಿ ಬಳಸಿಕೊಂಡ್ರಾ?

ಕ್ಷಮಿಸಿ ಸರ್, ಖಂಡಿತ ಅಂತಹ ಉದ್ದೇಶ ನನಗಿರಲಿಲ್ಲ. ಹಾಗೊಂದು ವೇಳೆ ನಿವೇದಿತಾಗೆ ಉಂಗುರ ತೊಡಿಸಿ, ಮದುವೆ ಆಗ್ತೀಯಾ ಅಂತ ಎಂಗೇಜ್‌ಮೆಂಟ್ ಮಾಡಿಕೊಳ್ಳುವುದಾಗಿದ್ದರೆ ಇಬ್ಬರ ಮನೆಯವರಿಗೂ ಹೇಳಬೇಕಾಗಿತ್ತು. ಅವರೆಲ್ಲ ಅಲ್ಲಿ ಇರಬೇಕಾಗಿತ್ತು. ಆದ್ರೆ, ನಾನಲ್ಲಿ ನಿವೇದಿತಾಗೆ ಮದುವೆ ಆಗ್ತೀಯಾ ಅಂತ ಹೇಳಿದಾಗ ಇಬ್ಬರ ಮನೆಯವರು ಅಲ್ಲಿರಲಿಲ್ಲ. ಇಷ್ಟಕ್ಕೂ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಬದಲಿಗೆ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡೋಣ ಅಂತ ಹೋದಾಗ ಅದ ಯಡವಟ್ಟು ಇದು.  ಅದು ಬಿಟ್ಟರೆ, ದಸರಾದಂತಹ ಇತಿಹಾಸವುಳ್ಳ ವೇದಿಕೆ ಹತ್ತುವುದಕ್ಕೆ ಹತ್ತು ವರ್ಷ ಕಾದಿದ್ದೇನೆ. ಅದಕ್ಕಾಗಿ ಹೆಮ್ಮೆಯಿದೆ. ದಸರಾ ಕಾರ್ಯಕ್ರಮದ ಬಗ್ಗೆ ನನಗೂ ಅಪಾರ ಗೌರವ ಇದೆ.

- ದೇಶಾದ್ರಿ ಹೊಸ್ಮನೆ