- ರಾಣಿ ಪದ್ಮಾವತಿಯನ್ನು ಅವಮಾನಿಸಲಾಗಿದೆ ಚಿತ್ರ ಬಿಡುಗಡೆಗೆ ವ್ಯಕ್ತವಾಗಿತ್ತು ವಿರೋಧ- ತಜ್ಞರ ಅಭಿಮತದಿಂದ ಚಿತ್ರ ಬಿಡುಗಡೆಗೆ ಒಪ್ಪಿಗೆ- ಶಿರ್ಷಿಕೆ ಸೇರಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಚಿತ್ರ ಬಿಡುಗಡೆಗೆ ಓಕೆ ಎಂದ ಸೆನ್ಸಾರ್ ಮಂಡಳಿ.

ಹೊಸದಿಲ್ಲಿ: ಬಹು ವಿವಾದಿತ 'ಪದ್ಮಾವತಿ' ಚಿತ್ರ ಬಿಡುಗಡೆಗೆ ಕೇಂದ್ರ ಸೆನ್ಸಾರ್ ಮಂಡಳಿ ಕಡೆಗೂ ಒಪ್ಪಿಗೆ ಸೂಚಿಸಿದ್ದು, ಚಿತ್ರದ ಹೆಸರನ್ನು 'ಪದ್ಮಾವತ್' ಎಂದು ಬದಲಾಯಿಸಲು ಸೂಚಿಸಿದೆ.

ಡಿಸೆಂಬರ್ 28ರಂದು ಮಂಡಳಿಯ ಪರೀಕ್ಷಾ ಸಮಿತಿಯು ಸಭೆ ನಡೆಸಿದ್ದು, ಚಿತ್ರಕ್ಕೆ 'ಯುಎ' ಪ್ರಮಾಣ ಪತ್ರ ನೀಡಲಿದ್ದು, ಚಿತ್ರದ ಹೆಸರಿನೊಂದಿಗೆ ಸಣ್ಣ ಪುಟ್ಟ ಬದಲಾವೆಗಳನ್ನು ಮಾಡಲು ಸೂಚಿಸಿದೆ.

16ನೇ ಶತಮಾನದ ಮಲಿಕ್ ಮುಹ್ಮದ್ ಜಯಸಿ ಅವರ 'ಪದ್ಮಾವತ್' ಎಂಬ ಮಹಾ ಕಾವ್ಯವನ್ನು ಆಧಾರವನ್ನಾಗಿಟ್ಟುಕೊಂಡು, 150 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ಮಾಡಲಾಗಿದೆ, ಎಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದರು.

'ಸತಿ' ಪದ್ಧತಿಯನ್ನು ವೈಭವೀಕರಣಗೊಳಿಸದಂತೆ ಹಾಗೂ 'ಘೂಮರ್' ಗೀತೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಮಂಡಳಿ ಸಲಹೆ ನೀಡಿದೆ. 

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ ರಾಣಿ ಪದ್ಮಾವತಿಯನ್ನು ಅವಮಾನಿಸಲಾಗಿದೆ, ಎಂದು ಆರೋಪಿಸಿ ದೇಶದ ಎಲ್ಲೆಡೆ ಪ್ರತಿಭಟನೆಗಳು ನಡೆದಿದ್ದು, ಚಿತ್ರ ಬಿಡುಗಡೆಗೆ ತಡೆಯಾಜ್ಞೆ ತರಲಾಗಿತ್ತು.