ಸುದೀಪ್ ಬಳಿ ಕಲಿಯೋದು ಬಹಳಷ್ಟಿದೆ!

Bollywood Actress Akshatha Sing interview with Kannada Prabha
Highlights

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಆಕಾಂಕ್ಷ ಸಿಂಗ್ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾಳೆ. ಕಿಚ್ಚ ಸುದೀಪ್‌ಗೆ  ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಗ್ ಬಜೆಟ್ ಪಿಚ್ಚರ್‌ಗೆ ಬಂದ ಉತ್ತರದ ಸುಂದರಿ ಜೊತೆ ಮೊದಲ ಸಂದರ್ಶನ
 

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಆಕಾಂಕ್ಷ ಸಿಂಗ್ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾಳೆ. ಕಿಚ್ಚ ಸುದೀಪ್‌ಗೆ  ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಗ್ ಬಜೆಟ್ ಪಿಚ್ಚರ್‌ಗೆ ಬಂದ ಉತ್ತರದ ಸುಂದರಿ ಜೊತೆ ಮೊದಲ ಸಂದರ್ಶನ

ಯಾವೂರಾಯ್ತು ನಿಮ್ದು..

ನಾನು ರಾಜಸ್ಥಾನದವಳು. ಹುಟ್ಟಿ, ಬೆಳೆದಿದ್ದು ಜೈಪುರ್. ಕಾಲೇಜು ದಿನಗಳ ನಂತರ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟೆ. ಹಲವು ಪ್ರತಿಷ್ಟಿತ ಕಂಪನಿಗಳ ಪ್ರಾಡೆಕ್ಟ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆದೆ. ಹಿಂದಿ ಸೀರಿಯಲ್‌ಗೆ ಆಫರ್ ಬಂತು. ಅಲ್ಲಿ ಬ್ಯುಸಿ ಆದೆ. ಶೂಟಿಂಗ್ ಒತ್ತಡದಲ್ಲಿ ಮುಂಬೈ-ಜೈಪುರ್ ಓಡಾಟ ಕಷ್ಟ ಎನಿಸಿತು. ಮುಂಬೈಗೆ ಶಿಫ್ಟ್ ಆದೆ.

‘ಪೈಲ್ವಾನ್’ಗೆ ನಾಯಕಿ ಆಗಿದ್ದು ಹೇಗೆ?

ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿ ವಾರ ಆಯ್ತಷ್ಟೆ. ಅದಕ್ಕೂ ಮೊದಲು ಒಂದು ದಿನ ನಿರ್ದೇಶಕ ಕೃಷ್ಣ ಅವರು ಫೋನ್ ಮಾಡಿದ್ರು.  ಬೆಂಗಳೂರಿನಿಂದ ಬಂದ ಕಾಲ್ ಅದು. ಯಾರಿರಬಹುದು ಎನ್ನುವ ಕುತೂಹಲ. ಹಲೋ ಎಂದಾಗ, ನಿರ್ದೇಶಕರು ತಮ್ಮನ್ನು ತಾವು ಪರಿಚಯಿಸಿಕೊಂಡು ಸಿನಿಮಾದ ಆಫರ್ ಬಗ್ಗೆ ಹೇಳಿದ್ರು.  ಆಡಿಷನ್‌ಗೆ ಬರಬಹುದಾ ಅಂದ್ರು. ಆಯ್ತು ಅಂದೆ. ಹೊಸಬಳು, ಆಡಿಷನ್ ಅನಿವಾರ್ಯ . ಮಾತು ಕೊಟ್ಟಂತೆ ಬಂದೆ. ಆಡಿಷನ್ ಮುಗಿದು, ಪಾತ್ರದ ಡಿಟೇಲ್ಸ್ ಕೇಳಿದ ನಂತರ ಸೆಲೆಕ್ಟ್ ಆಗಿದ್ದೀರಿ ಅಂತ ಹೇಳಿದ್ರು. ಖುಷಿ ಆಯ್ತು. ಸದ್ಯಕ್ಕೀಗ ನಾನು ಶೂಟಿಂಗ್ ಸಲುವಾಗಿ ಚೆನ್ನೈಗೆ ಬಂದಿದ್ದೇನೆ.

ಚಿತ್ರಕ್ಕೆ ಸೆಲೆಕ್ಟ್ ಆಗುವ ಮುನ್ನ ಕನ್ನಡ ಮತ್ತು ಕನ್ನಡ ಚಿತ್ರಗಳ ಬಗ್ಗೆ ಗೊತ್ತಿತ್ತಾ?

ಬಾಲಿವುಡ್‌ನ ಸ್ಟಾರ್ ನಟಿಯರಾದ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಇಲ್ಲಿಂದಲೇ ಬಂದವರು. ಹಾಗಾಗಿ ಇಲ್ಲಿಯ ಬಗ್ಗೆ ನಂಗೆ ಸಾಕಷ್ಟು ಕುತೂಹಲವಿತ್ತು. ಆದ್ರೆ ಇಲ್ಲಿನ ಚಿತ್ರೋದ್ಯಮ ಹಾಗೂ ಸ್ಟಾರ್‌ಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಯಾಕಂದ್ರೆ ನಾನು ಕನ್ನಡ ಸಿನಿಮಾ ನೋಡಿಲ್ಲ. ಡಬ್ ಆಗಿ ಬಂದ ತೆಲುಗು, ತಮಿಳು ಸಿನಿಮಾಗಳನ್ನು ನೋಡುತ್ತಿದ್ದೆ. ಅಲ್ಲಿನವರು ಗೊತ್ತಿದ್ದಷ್ಟು,  ಇಲ್ಲಿನವರ ಬಗ್ಗೆ ಗೊತ್ತಿಲ್ಲ. ಸುದೀಪ್ ಬಗ್ಗೆಯೂ ಗೊತ್ತಾಗಿದ್ದು ಪೈಲ್ವಾನ್ ಚಿತ್ರಕ್ಕೆ ನಾಯಕಿ ಆದ ನಂತರ.

ಹಿಂದಿ ಕಿರುತೆರೆಯ ಸೂಪರ್‌ಸ್ಟಾರ್ ನೀವು..

ಮೊದಲು ಕಿರುತೆರೆಗೆ ಕಾಲಿಟ್ಟಿದ್ದು ‘ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ’ ಸೀರಿಯಲ್ ಮೂಲಕ. ಆಗ ಆ್ಯಕ್ಟಿಂಗ್ ಅಂದ್ರೇನು ಅನ್ನೋದೆ ಗೊತ್ತಿರಲಿಲ್ಲ. ಒಳ್ಳೆಯ ಅವಕಾಶ ಅಂತ ಅಪ್ಪ-ಅಮ್ಮ, ಫ್ರೆಂಡ್ಸ್ ಸಲಹೆ ಕೊಟ್ಟರು. ಹಾಗಾಗಿ ಒಪ್ಪಿಕೊಂಡೆ. ಅಲ್ಲಿಂದ ಶುರುವಾಯಿತು ಸೀರಿಯಲ್ ಜರ್ನಿ. ಸಾವಧಾನ್ ಇಂಡಿಯಾ, ನಚ್ ಬಲಿಯೇ, ಗುಲ್ ಮೊಹರ್ ಗ್ರಾಂಡ್..ಹೀಗೆ ಟೆಲಿವಿಷನ್ ಸರಣಿಯ ನಂತರ ಸಿನಿಮಾಕ್ಕೆ ಬಂದೆ.

ಬಾಲಿವುಡ್‌ನಿಂದ ಟಾಲಿವುಡ್‌ಗೆ ಕಾಲಿಟ್ಟಿದ್ದು ಹೇಗೆ?

ನಾನು ನಟಿಸಿದ ‘ಬದ್ರಿನಾಥ್ ಕಿ ದುಲ್ಹಾನಿಯಾ’ ಚಿತ್ರಕ್ಕೆ ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಬಾಲಿವುಡ್‌ನಲ್ಲೇ ಹೊಸ ಆಫರ್ ಬರಬಹುದೇ ಅಂತ ಯೋಚಿಸುತ್ತಿದ್ದೆ. ಆಗ ಹೈದರಾಬಾದ್ ನಿಂದ ಒಂದು ಫೋನ್ ಕಾಲ್ ಬಂತು. ಅವರು ‘ಮಳ್ಳಿ ರಾವಾ’ ಚಿತ್ರದ ನಿರ್ದೇಶಕರು. ಹೈದರಾಬಾದ್‌ಗೆ ಹೋಗಿ ಕತೆ ಮತ್ತು ಕ್ಯಾರೆಕ್ಟರ್ ಡೀಟೈಲ್ಸ್ ಪಡೆದುಕೊಂಡೆ. ಹಿಡಿಸಿತು. ಒಪ್ಪಿಕೊಂಡು ಅಭಿನಯಿಸಿದೆ. ಅದರ ಬೆನ್ನಲೇ ನಾಗಾರ್ಜುನ್ ಹಾಗೂ ನಾನಿ ಅಭಿನಯದ ಮತ್ತೊಂದು ತೆಲುಗು ಸಿನಿಮಾದ ಅವಕಾಶ ಸಿಕ್ಕಿದೆ.

ಯಾವ ರೀತಿಯ ಪಾತ್ರಗಳಿಷ್ಟ?

ಈಗಷ್ಟೇ ಬೆಳ್ಳಿತೆರೆಗೆ ಕಾಲಿಟ್ಟವಳು ನಾನು. ಗ್ಲಾಮರಸ್ ಅಥವಾ ಡಿ ಗ್ಲಾಮರಸ್ ಎನ್ನುವುಕ್ಕಿಂತ ಪರ್‌ಫಾರ್ಮೆನ್ಸ್ ಓರಿಯೆಂಟೆಡ್ ಪಾತ್ರಗಳು ಸಿಕ್ಕರೆ ಅಭಿನಯಿಸಲು ನಾನ್ ರೆಡಿ. 

ಕನ್ನಡದಲ್ಲೇ ಅವಕಾಶ  ಸಿಕ್ಕರೆ... 
ಕಲಾವಿದರಿಗೆ ಭಾಷೆಯ ಗಡಿ ಇಲ್ಲ. ಬಾಲಿವುಡ್, ಟಾಲಿವುಡ್ ಅಥವಾ ಸ್ಯಾಂಡಲ್‌ವುಡ್ ಯಾವುದಾದರೂ ಸರಿ, ನನಗೆ ಆಫರ್ ಸಿಕ್ಕರೆ ಯಾವುದೇ ಭಾಷೆಯಲ್ಲೂ ಅಭಿನಯಿಸಲು ರೆಡಿ. ಒಂದು ವೇಳೆ ಇಲ್ಲಿಯೇ ಬ್ಯುಸಿಯಾಗುವಷ್ಟು ಆಫರ್ ಸಿಕ್ಕರೆ, ಖಂಡಿತವಾಗಿಯೂ ನಾನು ಇಲ್ಲಿಯೇ ಸೆಟ್ಲ್ ಆಗುತ್ತೇನೆ. ಹಣಕ್ಕಿಂತ ನನಗೆ ಕಲಾವಿದೆ ಎನಿಸಿಕೊಳ್ಳುವುದೇ ಮುಖ್ಯ. 
 

-ಸಂದರ್ಶನ: ದೇಶಾದ್ರಿ ಹೊಸ್ಮನೆ 

loader