ಕನ್ನಡ ಬಿಗ್ ಬಾಸ್ ಸೀಸನ್ 6ಕ್ಕೆ ವಾರ ಕಳೆದಿದೆ. ಈಗಾಗಲೇ ಒಬ್ಬರು ಮನೆಯಿಂದ ಹೊರ ಬಂದೂ ಆಗಿದೆ. ಮನೆಯೊಳಗಿರುವ ಒಬ್ಬರಿಗೆ ಜೂನಿಯರ್ ಮಿನಿ ಬುಲೆಟ್ ಆಗೋವಾಸೆ. ಡಯಟ್‌ನಲ್ಲಿರೋ ಅವರು ಮನೆಯೊಳಗೆ ಬಯಸಿದ್ದೇನು? 

ಬಲಗಾಲಿಟ್ಟು ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ, ಆ್ಯಂಡಿ ಎಂದ ಕರೆಯಲ್ಪಡುವ ಆ್ಯಂಡ್ರೂ ಬರೋಬ್ಬರಿ 140 ಕೆಜಿ ತೂಗುತ್ತಾರೆ! ಬೆಂಗಳೂರಲ್ಲಿಯೇ ಹುಟ್ಟಿ ಬೆಳೆದ ಇವರು ಕಾರ್ಪೋರೇಟ್ ಟ್ರೈನರ್. ಬುಲೆಟ್ ಪ್ರಕಾಶ್ ಇದೀಗ ತೂಕ ಇಳಿಸಿಕೊಂಡಿದ್ದರಿಂದ, ಇವರಿಗೆ ಜೂನಿಯರ್ ಪ್ರಕಾಶ್ ಆಗೋ ಕನಸಂತೆ.

ಕಾರ್ಪೋರೇಟ್ ಟ್ರೈನರ್ ಎಂದ ಮೇಲೆ ಕೇಳಬೇಕಾ? ಮಾತೇ ಬಂಡವಾಳ ಆ್ಯಂಡ್ರೂಗೆ. ನಗುತ್ತಾರೆ, ನಗಿಸುತ್ತಾರೆ, ಕಲ್ಲನ್ನು ಬೇಕಾದರೂ ಮಾತನಾಡಿಸುತ್ತಾರೆ. ಅಷ್ಟೇ ಅಲ್ಲ ಸುಮಧುರವಾಗಿಯೂ ಹಾಡುತ್ತಾರೆ. ಅರಳು ಹುರಿದಂತೆ ಪಟ ಪಟ ಅಂತ ಡೈಲಾಗ್ ಹೇಳುತ್ತಾರೆ.

ಸಣ್ಣ ಆಗ್ಬೇಕು ಎಂದೇನೂ ಹೆಚ್ಚಿಗೆ ಶ್ರಮ ಹಾಕದ ಆ್ಯಂಡ್ರೂ ಬಿಗ್‌ಬಾಸ್‌ ಮನೆಯಲ್ಲಿ ಸಣ್ಣಗಾಗಬೇಕಂತೆ. ಅದಕ್ಕೆ ಡಯಟ್‌ನಲ್ಲಿದ್ದಾರಂತೆ. ಹಾಗಂತ ಇವರದ್ದು 'ಏಕಾದಶಿ ಉಪವಾಸದಲ್ಲಿರೋ ಆಚೆಮನೆ ಸುಬ್ಬಮ್ಮನ ಕಥೆ'. ತಿನ್ನೋದು ಬರೀ 20 ಇಡ್ಲಿ, ಅರ್ಧ ಕೆಜಿ ಅನ್ನ, ಚಿಕನ್, 15 ಚಪಾತಿ ಹಾಗೂ ಅರ್ಧ ಕೆಜಿ ಚಿಕನ್..ಅಷ್ಟೇ!

ಬಿಗ್‌ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಕ್ಯಾಮೆರಾ ಮುಂದೆ ಆ್ಯಂಡ್ರೂ ಹೇಳಿ ಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗುತ್ತಿದೆ. ಡಯಟ್‌ನಲ್ಲಿದ್ದೇ ಇಷ್ಟು ತಿನ್ನೋದಾದ್ರೆ, ಇನ್ನು ಸಾಮಾನ್ಯವಾಗಿ ಎಷ್ಟು ತಿನ್ನಬಹುದು!?