ಇದೇ ವಾರ ಈ ಚಿತ್ರ ತೆರೆಗೆ ಬರುತ್ತಿದೆ. ಮರ್ಡರ್ ಮಿಸ್ಟ್ರಿಯ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರದೊಳಗೆ ವೈಷ್ಣವಿ ನಿರ್ವಹಿಸಿರುವ ಪಾತ್ರ ವಿಚಿತ್ರ ಮತ್ತು ವಿಭಿನ್ನ. ಕತೆಯೊಳಗಿನ ಆ ನಾಯಕಿ ವೃತ್ತಿಯಲ್ಲಿ ದಾದಿಯೋ, ಪತ್ರಕರ್ತೆಯೋ ಎಂಬುದು ವೈಷ್ಣವಿ ಅವರಿಗೆ ಗೊತ್ತಾಗಿದ್ದು ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲೇ. ಇಂತಹದೊಂದು ಸಂಗತಿಯನ್ನು ಈಗ ಬಹಿರಂಗ ಪಡಿಸಿದ್ದಾರೆ ನಟಿ ವೈಷ್ಣವಿ.

‘ಇದುವರೆಗೂ ನಾನು ಇಂತಹ ಪಾತ್ರಕ್ಕೆ ಬಣ್ಣ ಹಚ್ಚಿಲ್ಲ. ಹಾಗೆಯೇ ಇಂತಹ ಪಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕೂಡ ಅಪರೂಪ. ಯಾಕಂದ್ರೆ ಆ ಪಾತ್ರದಲ್ಲಿ ನಾನು ಅಭಿನಯಿಸುತ್ತಾ ಹೋದರು, ಅಲ್ಲಿ ನಾನು ಪಾತ್ರವಾಗಿ ದಾದಿಯೋ, ಪತ್ರಕರ್ತೆಯೋ ಕೊನೆ ತನಕ ಗೊತ್ತೇ ಆಗಲಿಲ್ಲ. ಅದರ ವಾಸ್ತವ ಗೊತ್ತಾಗಿದ್ದು ಕ್ಲೈಮ್ಯಾಕ್ಸ್‌ನಲ್ಲಿ. ಇದೊಂದು ಡ್ಯುಯೆಲ್ ಶೇಡ್ ಕ್ಯಾರೆಕ್ಟರ್ ಅಂತ ನಿರ್ದೇಶಕರು ಹೇಳಿದ್ದು ನಿಜ. ಆದರೆ ಡ್ಯುಯೆಲ್ ಶೇಡ್ ಹೀಗೆಲ್ಲ ಇರುತ್ತೆ ಎನ್ನುವ ಬಗ್ಗೆ ನನಗೆ ಅಂದಾಜು ಸಿಕ್ಕಿರಲಿಲ್ಲ’ ಎನ್ನುತ್ತಾರೆ ವೈಷ್ಣವಿ.

ಹಿರಿಯ ನಿರ್ದೇಶಕ ಉಮಾಕಾಂತ್ ಹಲವು ದಿನಗಳ ಗ್ಯಾಪ್ ನಂತರ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೃಷ್ಣೇಗೌಡ ನಿರ್ಮಾಪಕ ಕಮ್ ನಾಯಕ ನಟ. ಹಿಂದೊಮ್ಮೆ ತಮಿಳುನಾಡಿನಲ್ಲಿ ಬಾರೀ ಸುದ್ದಿ ಆಗಿದ್ದ ಮರ್ಡರ್ ಮಿಸ್ಟ್ರಿಯ ಈ ಕತೆ ಇದೀಗ ಸಿನಿಮಾ ಆಗಿದೆ.