Asianet Suvarna News Asianet Suvarna News

ವಿಷ್ಣು ಸ್ಮಾರಕ: ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್ ಕೊನೆ ಎಚ್ಚರಿಕೆ

ಡಾ.ವಿಷ್ಣುವರ್ಧನ್ ಸ್ಮಾರಕ ಜಾಗದ ವಿವಾದ ಈಗಲೂ ಇತ್ಯರ್ಥವಾಗದೆ ಉಳಿದಿರುವುದಕ್ಕೆ ಡಾ. ಭಾರತಿ ವಿಷ್ಣುವರ್ಧನ್ ಅಸಮಾಧಾನ | ವಿಷ್ಣುವರ್ಧನ್ ನಿಧನರಾಗಿ 9 ವರ್ಷವಾದರೂ ಈಗಲೂ ಬಗೆಹರಿದಿಲ್ಲ ಅವರ ಸ್ಮಾರಕ ಜಾಗದ ವಿವಾದ. 

Bharathi Vishnuvardhan last warning to Government
Author
Bengaluru, First Published Sep 5, 2018, 9:46 AM IST

ಬೆಂಗಳೂರು (ಸೆ. 05): ಕಾಯುವಷ್ಟು ತಾಳ್ಮೆ ಇನ್ನು ನಮಗಿಲ್ಲ. ಜಾಗ ಕೊಡಿ, ಸಮಸ್ಯೆ ಬಗೆಹರಿಸಿ ಅಂತೆಲ್ಲ ಮನವಿ ಹಿಡಿದು ಓಡಾಡಿ ಸಾಕಾಗಿದೆ. ಕಾಲುಗಳು ಸವೆದು ಹೋಗಿವೆ. ಸಾಕು ಈ ಓಡಾಟ, ಇನ್ನೇನಿದ್ದರೂ ಅಂತಿಮ ನಿರ್ಧಾರ!

- ಡಾ.ವಿಷ್ಣುವರ್ಧನ್ ಸ್ಮಾರಕ ಜಾಗದ ವಿವಾದ ಈಗಲೂ ಇತ್ಯರ್ಥವಾಗದೆ ಉಳಿದಿರುವುದಕ್ಕೆ ಡಾ. ಭಾರತಿ ವಿಷ್ಣುವರ್ಧನ್ ನೀಡಿದ ಖಾರವಾದ ಪ್ರತಿಕ್ರಿಯೆ ಇದು.

‘ಸ್ಮಾರಕ ಜಾಗ ಇತ್ಯರ್ಥವಾಗುತ್ತಿಲ್ಲ. ಇದಕ್ಕೆ ನಿಜವಾದ ಕಾರಣಗಳೇನು ಅನ್ನೋದು ನಮಗೂ ಗೊತ್ತಿಲ್ಲ. ಜಾಗ ಇನ್ನೇನು ಅಂತಿಮವಾಗಿ, ಸ್ಮಾರಕ ಕೆಲಸಗಳು ಶುರುವಾಗಬೇಕೆನ್ನುವಾಗ ಅಡೆಚಣೆಗಳು ಬರುತ್ತಿವೆ. ಅವೆಲ್ಲ ಎಲ್ಲಿಂದ ಬಂದವು, ಅದರ ಹಿಂದೆ ಯಾರಿದ್ದಾರೋ ಅರ್ಥವಾಗುತ್ತಿಲ್ಲ. ಇನ್ನಷ್ಟು ದಿನ ಕಾಯುವ ತಾಳ್ಮೆ ನಮಗಿಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಭಾರತಿ ವಿಷ್ಣುವರ್ಧನ್.

ವಿಷ್ಣುವರ್ಧನ್ ನಿಧನರಾಗಿ 9 ವರ್ಷ ಸಂದಿವೆ. ಈಗಲೂ ಬಗೆಹರಿದಿಲ್ಲ ಅವರ ಸ್ಮಾರಕ ಜಾಗದ ವಿವಾದ. ಸೆಪ್ಟೆಂಬರ್ 18 ಕ್ಕೆ ಅವರ ಮತ್ತೊಂದು ಹುಟ್ಟುಹಬ್ಬ. ವಿಷ್ಣುವರ್ಧನ್ ಕುಟುಂಬ ವಿವಿಧ ಸಂಘ ಸಂಸ್ಥೆಗಳ ಮೂಲಕ ಹುಟ್ಟು ಹಬ್ಬದ ಆಚರಣೆಗೆ ಮುಂದಾಗಿದೆ. ಈ ಬಾರಿ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಬೇಸರ ಮತ್ತು ಅಸಮಾಧಾನ ಹೊರ ಹಾಕಿದರು.

ತಾಳ್ಮೆ ಪರೀಕ್ಷೆ ನಡೆದು ಹೋಗಿದೆ. ಇನ್ನೇನಿದ್ದರೂ ಅಂತಿಮ ನಿರ್ಧಾರ. ಯಜಮಾನ್ರ ಹಿತೈಷಿಗಳು, ಒಟನಾಡಿಗಳ ಸಲಹೆ ಸೂಚನೆಯಂತೆಯೇ ಮುಂದಿನ ಹೆಜ್ಜೆ ಎಂದು ಕಟುವಾಗಿ ಹೇಳಿದರು. ರಾಷ್ಟ್ರೀಯ ಉತ್ಸವಕ್ಕೆ ಆಹ್ವಾನವಿಲ್ಲ: ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಸೆಪ್ಟೆಂಬರ್ 16, 17 ಮತ್ತು 18 ರಂದು ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಆಯೋಜಿಸಿದೆ.

ಈ ಉತ್ಸವಕ್ಕೆ ಈ ಬಾರಿ ವಿಷ್ಣುವರ್ಧನ್ ಕುಟುಂಬದವರನ್ನು ಆಹ್ವಾನಿಸಿದ್ದೇವೆ ಎಂದು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದರು. ಆದರೆ, ಈಗ ರಾಷ್ಟೀಯ ಉತ್ಸವಕ್ಕೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿದ್ದಾರೆ.

‘ನಮಗೆ ಯಾವುದೇ ಆಹ್ವಾನ ಬಂದಿಲ್ಲ. ಅಭಿಮಾನಿ ಸಂಘದವರು ಏರ್ಪಡಿಸುವ ಕಾರ್ಯಕ್ರಮಗಳಿಗೆಲ್ಲ ನಾವು ಹೋಗಬೇಕೆನ್ನುವ ಯಾವುದೇ ನಿಯಮವಿಲ್ಲ. ಇಷ್ಟಾಗಿಯೂ ಯಜಮಾನ್ರು, ಇಂತಹ ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಇಷ್ಟ ಪಡುತ್ತಿರಲಿಲ್ಲ. ಅಭಿಮಾನಿಗಳ ಬಗ್ಗೆ ಅವರಿಗೆ ಪ್ರೀತಿ ಇದ್ದರೂ ಅವರ ಹೆಸರಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸುವುದನ್ನು ಇಷ್ಟ ಪಡುತ್ತಿರಲಿಲ್ಲ. ಅದನ್ನೇ ನಾವು ಕೂಡ ಪಾಲಿಸುತ್ತಾ ಬಂದಿದ್ದೇವೆ. ಆದರೂ ಕೆಲವರು ಸ್ವಾರ್ಥಕ್ಕಾಗಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದಾರೆ’ಎಂದು ದೂರಿದರು.

ನಮಗೇನು ಹುಚ್ಚು ಹಿಡಿದಿರಲಿಲ್ಲ: ಅನಿರುದ್ಧ ಸ್ಮಾರಕ ಜಾಗ ಮೈಸೂರಿನಲ್ಲೇ ಬೇಕು ಅಂತ ನಾವು ಕೇಳಿದ್ದಲ್ಲ. ಸೂಕ್ತವಾದ ಜಾಗ ಬೆಂಗಳೂರಿನಲ್ಲಾದರೂ ಅಭ್ಯಂತರ ಇಲ್ಲ ಅಂತಲೂ ನಾನು ಹೇಳಿದ್ದೆವು. ಆದರೆ ಬೆಂಗಳೂರಿನಲ್ಲಿ ಆ ರೀತಿಯ ಜಾಗ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಮೈಸೂರಿನಲ್ಲಿ ಜಾಗ ನಿಗದಿ ಮಾಡಿತ್ತು. ಇಷ್ಟಾಗಿಯೂ ಕೆಲವರು ನಮ್ಮ ಮೇಲೆಯೇ ಏನೇನೋ ಮಾತನಾಡಿದರು. ಅಪಪ್ರಚಾರಗಳು ನಡೆದವು. ಅಲ್ಲಿಯೇ ಬೇಕು ಅಂತ ಹಠ ಹಿಡಿಯುವುದಕ್ಕೆ ನಮಗೇನು ಹುಚ್ಚು ಹಿಡಿದಿರಲಿಲ್ಲ.

ಬೆಂಗಳೂರಿನಲ್ಲೇ ಜಾಗ ಸಿಕ್ಕರೆ ಒಳ್ಳೆಯದು ಅಂತ ಸರ್ಕಾರಿ ಅಧಿಕಾರಿಗಳೇ ಸಾಕಷ್ಟು ಹುಡುಕಾಡಿದರು. ಜಾಗ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮೈಸೂರಿನಲ್ಲಾದರೆ ಒಳ್ಳೆಯದು ಅಂತ ಸರ್ಕಾರಕ್ಕೆ
ಹೇಳಿದರು. ಕೆಲವರಿಗೆ ಈ ವಾಸ್ತವ ಗೊತ್ತಿಲ್ಲ. ಹಾಗಾಗಿ ಈಗಲೂ ನಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆಂದು ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ ಬೇಸರ ಹೊರ ಹಾಕಿದರು. 

Follow Us:
Download App:
  • android
  • ios