ಅಗ್ನಿಸಾಕ್ಷಿಯ ಸಿದ್ಧಾಂತ್, ಸನ್ನಿಧಿ ನಿಜ ಜೀವನದಲ್ಲೂ ಮದ್ವೆಯಾಗ್ತಾರಾ?

Agnisaakshi fame Vaishnavi and Vijay surya wedding rumours
Highlights

ಅಗ್ನಿಸಾಕ್ಷಿ ಧಾರಾವಾಹಿಯ ಪ್ರಧಾನ ಪಾತ್ರಧಾರಿಗಳಾದ ವೈಷ್ಣವಿ ಮತ್ತು ವಿಜಯ್ ಸೂರ್ಯ ಬಗ್ಗೆ ಸದಾ ಒಂದಿಲ್ಲೊಂದು ಗಾಸಿಪ್ ಇದೆ. ಈ ಜೋಡಿ ನಿಜ ಜೀವನದಲ್ಲೂ ಸಪ್ತಪದಿ ತುಳಿಯುತ್ತಾ ಎಂದಿದ್ದಕ್ಕೆ ವಿಜಯ್ ಸೂರ್ಯ ಹೇಳಿದ್ದೇನು ಗೊತ್ತಾ?

'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವೈಷ್ಣವಿ ಸುತ್ತ ರೂಮರ್ಸ್‌ಗಳದ್ದೇ ಕಾರುಬಾರು. ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ರೂಮರ್ ಎಂದರೆ ವೈಷ್ಣವಿ ಜತೆಗೆ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಅನ್ನುವುದು. ಆದರೆ ಆ ಗಾಸಿಪ್ ಸದ್ಯಕ್ಕೆ ತಣ್ಣಗಾಗಿದೆ. ಆ ಸುದ್ದಿಗೆ ಪ್ರತ್ಯೇಕವಾಗಿ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ. ಈಗ ಮತ್ತೆ ಕುತೂಹಲಿಗಳ ಕಣ್ಣು 'ಅಗ್ನಿಸಾಕ್ಷಿ'ಯ ಸೂಪರ್ ಜೋಡಿ ವಿಜಯ್ ಸೂರ್ಯ ಹಾಗೂ ವೈಷ್ಣವಿ ಮೇಲೆ ಬಿದ್ದಿದೆ. ಅದಕ್ಕೆ ತಕ್ಕಂತೆ ವಿಜಯ್ ಸೂರ್ಯ ಸೋಷಲ್ ಮೀಡಿಯಾದಲ್ಲಿ ವೈಷ್ಣವಿ ಅವರಿಗೆ 'ರೂಮರ್ ಸುಳ್ಳು ಅಂತ ತಿಳಿದು ಬಹಳ ಬೇಜಾರಾಯಿತು. ಸರಿಯಾದ ಸಂದರ್ಭದಲ್ಲಿ ನಿಮಗೆ ಯೋಗ್ಯನಾದ ಹುಡುಗ ನಿಮಗೆ ಸಿಗುತ್ತಾನೆ ಎಂದು ಭಾವಿಸಿದ್ದೇನೆ' ಅಂತ ಕಾಲೆಳೆದಿದ್ದಾರೆ. ಇದನ್ನು ಪ್ರಶ್ನಿಸಿದಾಗ ವಿಜಯ್ ಸೂರ್ಯ ಹೇಳಿದ್ದು ಇಲ್ಲಿದೆ:

ಅಗ್ನಿಸಾಕ್ಷಿ ಗೆಲುವಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿಯೂ ಕಾರಣ ಸಿನಿಮಾ, ಸೀರಿಯಲ್ ಕಲಾವಿದರಾಗಿ ಬಂದಾಗ ಇದೆಲ್ಲ ಮಾಮೂಲು. ಸಾಮಾನ್ಯವಾಗಿ ಆನ್ ಸ್ಕ್ರೀನ್ ಜನರ ಗಮನ ಸೆಳೆಯುವ ಜೋಡಿಗಳ ಬಗ್ಗೆ ಇದೆಲ್ಲ ರೂಮರ್‌ಗಳು ಇದ್ದೇ ಇರುತ್ತೆ. ಹಾಗಂತ ಅದೆಲ್ಲ ಸತ್ಯ ಅಲ್ಲ. ಒಂದು ಧಾರಾವಾಹಿ ಅಥವಾ ಸಿನಿಮಾದಲ್ಲಿ ನಾಯಕ-ನಾಯಕಿ ನಡುವೆ ಒಳ್ಳೆಯ ವೃತ್ತಿ ಬಾಂಧವ್ಯ ಇದ್ದರೆ ಪಾತ್ರಗಳಲ್ಲಿ ನೈಜವಾಗಿ ಅಭಿನಯಿಸಲು ಸಾಧ್ಯವಾಗುತ್ತೆ ಅನ್ನೋದು ಮೊದಲಿನಿಂದಲೂ ಕೇಳಿ ಬಂದಿರುವ ಮಾತು. ಅದು ಇಲ್ಲಿ ಸತ್ಯವಾಗಿದೆ. 'ಅಗ್ನಿಸಾಕ್ಷಿ' ಧಾರಾವಾಹಿ ಜನರಿಗೆ ಇಷ್ಟವಾಗಿದ್ದರ ಹಿಂದೆ ನನ್ನ ಮತ್ತು ವೈಷ್ಣವಿ ನಡುವಿನ ಕೆಮಿಸ್ಟ್ರಿಯೂ ಒಂದು ಕಾರಣ. ನಟನೆ ಅಂದಾಗ ನಾವು ಕಂಫರ್ಟ್ ಜೋನ್‌ನಲ್ಲಿಯೇ ನಿಂತಿರುತ್ತೇನೆ ಅನ್ನೋದು ನಿಜವಾದರೂ, ಅದು ರಿಯಲ್ ಬದುಕಿನ ತನಕ ಬಂದಿಲ್ಲ. ಒಳ್ಳೆಯ ಸ್ನೇಹವಿದೆ, ಒಡನಾಟವಿದೆ ಎನ್ನುವುದೆಲ್ಲವೂ ಸತ್ಯ. ಆದರಾಚೆ ಏನೂ ಇಲ್ಲ. ಅಸಲಿಗೆ ನಾವು ಯಾವತ್ತಿಗೂ ಪ್ರೀತಿ, ಪ್ರೇಮ ಅಥವಾ ಮದುವೆ ಅಂತೆಲ್ಲ ಮಾತನಾಡಿದ್ದಿಲ್ಲ. 

ತುಂಬಾ ತಾಳ್ಮೆ ಇರುವ ನಟಿ: 

ವೈಷ್ಣವಿ ನನಗೆ ಪರಿಚಯವಾಗಿದ್ದು ಅಗ್ನಿಸಾಕ್ಷಿ ಆರಂಭವಾದ ದಿನ. ಅಲ್ಲಿಂದ ಇಲ್ಲಿಗೆ ನಾಲ್ಕು ವರ್ಷ. ನಾವಿಬ್ಬರೂ ಮನೆಯಲ್ಲಿ ಕಳೆದ ಅವಧಿಗಿಂತ ಸೆಟ್‌ನಲ್ಲಿ ಕಳೆದ ದಿನಗಳೇ ಹೆಚ್ಚು. ಹಾಗಾಗಿಒಬ್ಬರನ್ನೊಬ್ಬರು ಮತ್ತಷ್ಟು, ಮಗದಷ್ಟು ಅರ್ಥ ಮಾಡಿಕೊಳ್ಳಲು, ಬೆರೆಯಲು ಸಾಧ್ಯವಾಗಿದೆ. ಎಂದಿಗೂ ನಾವು ಕಿತ್ತಾಡಿಕೊಂಡಿಲ್ಲ. ಜಗಳ ಮಾಡಿಲ್ಲ. ಹಾಗೆ ಮಾಡಿದ್ರೆ ಅದು ಸೀರಿಯಲ್ ಮೇಲೆ ಎಫೆಕ್ಟ್ ಎನ್ನುವ ನಿರ್ದೇಶಕರ ಸೂಚನೆಗೆ ಆಗಿನಿಂದಲೂ ಬೆಲೆ ನೀಡಿದ್ದೇವೆ. ಒಳ್ಳೆಯ ಸ್ನೇಹಿತರಾಗಿ ತೆರೆ ಮೇಲೆ ಕಾಣಿಸಿಕೊಳ್ಳುವಾಗ ಹೆಚ್ಚು ಕಂಫರ್ಟ್ ಜೋನ್‌ನಲ್ಲಿ ಅಭಿನಯಿಸುತ್ತೇವೆ. ಅದು ನೋಡುಗರಿಗೆ ನಾವಿಬ್ಬರೂ ನಿಜವಾದ ಗಂಡ-ಹೆಂಡತಿಯೇ ಎನ್ನುವ ಹಾಗೆ ಕಾಣುತ್ತೆ. ಅದು ಸಾಧ್ಯವಾಗಿದ್ದು ನಟಿಯಾಗಿ ವೈಷ್ಣವಿ ಅಭಿನಯಕ್ಕೆ ನೀಡಿದ ಆದ್ಯತೆಯಿಂದ. ಅವರಿಗೆ ತುಂಬಾ ತಾಳ್ಮೆಯಿದೆ. ಅನೇಕ ಸಲ ನನಗೆ ಅವರು ಸ್ಫೂರ್ತಿ ಆಗಿದ್ದಾರೆ. ಅವರ ತಾಳ್ಮೆಗೆ ನಾನು ಹ್ಯಾಟ್ಸಾಫ್ ಹೇಳುತ್ತೇನೆ.

ಸದ್ಯಕ್ಕಿಲ್ಲ, ಮುಂದೆ ಹೇಗಿದೆಯೋ ಗೊತ್ತಿಲ್ಲ.. 

ಬಾಲಿವುಡ್‌ನಲ್ಲಿ ಈಗಲೂ ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಗೆ ಬೆಸ್ಟ್ ಜೋಡಿ ಅನ್ನೋ ಮಾತಿದೆ. ತೆರೆ ಮೇಲೂ ಅದು ಪ್ರೂ ಆಗಿದೆ. ಹಾಗಂತ ಅವರಿಬ್ಬರೂ ರಿಯಲ್ ಬದುಕಲ್ಲೂ ಜೋಡಿ ಆದ್ರಾ? ಆಗಲು ಸಾಧ್ಯವಾಯಿತಾ? ವೀಕ್ಷಕರು ಅಂದುಕೊಂಡಂತೆ ಆಗೋದಿಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಬದುಕು ಇರುತ್ತೆ. ನಮ್ಮಿಬ್ಬರ ನಡುವೆಯೂ ಹಾಗೆ ಒಂದಷ್ಟು ಭಿನ್ನತೆಗಳಿವೆ. ಒಳ್ಳೆಯ ಸ್ನೇಹಿತರೆನ್ನುವುದು ನಿಜ, ಜನರಿಗೆ ನಾವು ಸೂಪರ್ ಜೋಡಿ ಅಂತಲೂ ಕಾಣಿಸಿರಬಹುದು. ಆದರೆ ಮದುವೆ, ಮಕ್ಕಳು ಅನ್ನೋದೆಲ್ಲ ನಾವಂದುಕೊಂಡಂತೆ ಆಗೋದಿಲ್ಲ. ಸದ್ಯಕ್ಕೆ ನಾವಿಬ್ಬರು ಆ ಬಗ್ಗೆ ಯೋಚಿಸಿಲ್ಲ. ಮುಂದೆ ಹೇಗಿದೆಯೋ ಗೊತ್ತಿಲ್ಲ. ರೂಮರ್ಸ್ ಸತ್ಯವೂ ಆಗಬಹುದು. ಸುಳ್ಳಾಗಿಯೂ ಕಳೆದು ಹೋಗಬಹುದು. ?
 

loader