ಬೆಂಗಳೂರು (ಮಾ.27):  ತುಂಬಾ ದಿನಗಳ ನಂತರ ಸಿಂಧು ಲೋಕನಾಥ್ ಮತ್ತೆ ಬಂದಿದ್ದಾರೆ. ಮದುವೆಯ ನಂತರ ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮದ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರಿಂದ ಅವರ ಮಾತುಗಳು ಕೊಂಚ ವಿಶೇಷವಿತ್ತು.  

ಮದುವೆಯ ನಂತರ ಜೀವನ ಹೇಗಿದೆ?
ತುಂಬಾ ಚೆನ್ನಾಗಿದೆ. ನನ್ನ ಪತಿ ಶ್ರೇಯಸ್ ಪೂಮಾ ಕಂಪನಿಯಲ್ಲಿ ಎಚ್‌ಆರ್. ಮನೆಯವರು ತೋರಿಸಿದ ಹುಡುಗನನ್ನು ನಾನು ಮದುವೆ ಆಗಿರೋದು. ಲವ್ ಮಾಡಿ ಮದುವೆ ಆಗುವವರ ನಡುವೆ ಮದುವೆಯಾಗಿ ಲವ್ ಮಾಡುತ್ತಿರುವ ದಂಪತಿ ನಾವು.

ಇದ್ದಕ್ಕಿದ್ದಂತೆ ಮದುವೆ ಆಗಿಬಿಟ್ರಲ್ಲ?
ನಿಜ ಹೇಳಬೇಕು ಅಂದ್ರೆ ನನಗೂ ಇಷ್ಟು ಬೇಗ ಮದುವೆ ಆಗುವ ಯೋಚನೆ  ಇರಲಿಲ್ಲ. ಆದರೆ, ಮನೆಯಲ್ಲಿ ಎಲ್ಲರೂ ನನ್ನ ಮದುವೆ ಬಗ್ಗೆಯೇ  ಮಾತನಾಡುತ್ತಿದ್ದರು. ಮನೆಯವರ ಒತ್ತಾಯಕ್ಕೆ ಮದುವೆ ಆದೆ. ಮದುವೆ ಆದ ಮೇಲೆ ಮನೆಯವರ ಮಾತು ಕೇಳಿದ್ದೇ ಒಳ್ಳೆಯದು ಅನಿಸಿತು. ಯಾಕೆಂದರೆ  ಶ್ರೇಯಸ್ ಮತ್ತು ನಾನು ಅಷ್ಟು ಚೆನ್ನಾಗಿದ್ದೀವಿ. ಅವರು ನನ್ನ ತುಂಬಾ ಚೆನ್ನಾಗಿ  ಕೇರ್ ಮಾಡುತ್ತಾರೆ.

ಹಾಗಿದ್ದರೆ ಸಿನಿಮಾಗಳಲ್ಲಿ ನಟಿಸಬಾರದೆಂಬ ಷರತ್ತುಗಳಿಲ್ಲ ಅನ್ನಿ?
ಖಂಡಿತ ಅಂಥ ಯಾವುದೇ ರೀತಿಯ ಷರತ್ತುಗಳನ್ನು ಶ್ರೇಯಸ್ ನನಗೆ ಹಾಕಿಲ್ಲ.  ವೃತ್ತಿ ವಿಚಾರಕ್ಕೆ ಬಂದರೆ ಮದುವೆಗೂ ಮೊದಲು ಹೇಗಿತ್ತೋ, ಮದುವೆ ನಂತರವೂ ಹಾಗೆ ಇದೆ. ತುಂಬಾ ಕತೆಗಳನ್ನು ಕೇಳುತ್ತಿದ್ದೇನೆ. ನನಗೆ ಸೂಕ್ತ ಎನಿಸುವುದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಈ ವಿಚಾರದಲ್ಲಿ ಶ್ರೇಯಸ್ ಅವರದ್ದು ಯಾವುದೇ ಅಭ್ಯಂತರವಿಲ್ಲ. ನಟನೆ ಮುಂದುವರಿಸುವಂತೆ ಅವರೇ ಹೇಳಿದ್ದಾರೆ. ಹೀಗಾಗಿ ನಾನು ಚಿತ್ರರಂಗದಿಂದ  ದೂರವಾಗಲ್ಲ. ಮದುವೆ ಆದ ಮೇಲೆ ನಟನೆ
ನಿಲ್ಲಿಸಬೇಕು ಎಂಬುದು ನನ್ನ ವಿಚಾರದಲ್ಲಿ  ಸುಳ್ಳು. 

ನಿಮ್ಮ ನಿಜ ಜೀವನದ ಕತೆ  ಸಿನಿಮಾ ಮಾಡುತ್ತಿದ್ದೀರಂತೆ?
ಹೌದು, ನಾನೇ ಕತೆ ಬರೆದಿದ್ದೇನೆ. ನಾನೇ  ನಾಯಕಿಯಾಗಿಯೂ ನಟಿಸಿದ್ದೇನೆ. ಜತೆಗೆ  ನಿರ್ಮಾಣವನ್ನೂ ಮಾಡಿದ್ದೇನೆ. ನಿರ್ದೇಶನ ಮಾಡಿರುವುದು ವಿಕಾಸ್ ಎಂಬುವವರು. ಚಿತ್ರದ ಹೆಸರು ‘ಅಟ್ ದಿ ಎಜ್ ೩೦’. ಇದು ನನ್ನ ಬದುಕಿಗೆ ಹತ್ತಿರವಾಗುವಂತಹ ಕತೆಯ ಸಿನಿಮಾ. ಹೆಣ್ಣು  ಮಗಳು ಮದುವೆ ಆಗುವ ವಿಚಾರವೂ  ಒಳಗೊಂಡಂತೆ ಸಾಕಷ್ಟು ಸೂಕ್ಷ್ಮ ಸಂಗತಿಗಳನ್ನು ಈ  ಚಿತ್ರದಲ್ಲಿ ತರಲಾಗಿದೆ. ಅಂದಹಾಗೆ ಇದು ೧೭ ನಿಮಿಷದ ಒಂದು ಕಿರು ಚಿತ್ರ. ಸೀತಾ ಕೋಟೆ
ನನ್ನೊಂದಿಗೆ ನಟಿಸಿದ್ದಾರೆ. ಸದ್ಯದಲ್ಲೇ ಇದನ್ನು  ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿದ್ದೇನೆ. ಕೇವಲ ಒಂದು ಲಕ್ಷ ರುಪಾಯಿನಲ್ಲಿ  ನಿರ್ಮಿಸಿರುವ ಸಿನಿಮಾ ಇದು. 

ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ  ಕುರಿತು ಹೇಳುವುದಾದರೆ?
ಹೀಗೊಂದು ದಿನ ಹಾಗೂ ಕಾಣದಂತೆ ಮಾಯವಾದನೋ ಈ ಎರಡು ಸಿನಿಮಾಗಳ ಪೈಕಿ ‘ಹೀಗೊಂದು ದಿನ’ ಇದೇ ಶುಕ್ರವಾರ(ಮಾ.೩೦) ತೆರೆಗೆ ಬರುತ್ತಿದೆ. ಯೋಗಾನಂದ್ ನಿರ್ದೇಶಿಸಿ, ಚಂದ್ರಶೇಖರ್ ನಿರ್ಮಾಣ ಮಾಡಿರುವ ಸಿನಿಮಾ.ಒಬ್ಬ ಹುಡುಗಿ ಬೆಳಗ್ಗೆ  6 ಗಂಟೆಗೆ ಮನೆ ಬಿಡುತ್ತಾಳೆ. ಮತ್ತೆ ಅವರು 8 ಗಂಟೆ ಒಳಗೆ ಮನೆ ಸೇರಬೇಕು. ಅಷ್ಟರಲ್ಲಿ ಏನೆಲ್ಲ ನಡೆಯುತ್ತವೆ ಎಂಬುದು ಚಿತ್ರದ ಕತೆ. ಇನ್ನೂ ‘ಕಾಣದಂತೆ ಮಾಯವಾದನೋ’ ಚಿತ್ರದ
ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ.