ತನ್ನ ಫೋಟೋ ಕೆಟ್ಟದಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವವರ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಕಿಡಿಗೇಡಿಗಳ ಫೋಟೋ ಐಡಿ ಡೀಟೈಲ್ಸ್ ನೀಡಿದ್ದಾಗಿ ಶುಭ್ರ ಹೇಳಿಕೊಂಡಿದ್ದಾರೆ.

‘ನಾನು ನಟಿ ಹಾಗೂ ಮಾಡೆಲ್. ನಾನು ಯಾವಾಗಲೂ ಸಾರ್ವಜನಿಕರ ದೃಷ್ಟಿಯಲ್ಲಿ ಇರಲು ಬಯಸಿದವಳು ನಿಜ, ಆದರೆ ಸಾರ್ವಜನಿಕರ ಸೊತ್ತಲ್ಲ’ ಎಂದು ಫೋಟೋ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಿಡಿಕಾರಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟ ನಟ ಶುಭ್ರ ಅಯ್ಯಪ್ಪ ಬಹುತೇಕ ಮಾಡೆಲಿಂಗ್‌ನಲ್ಲೇ ಬ್ಯುಸಿ. ಆದರೂ ಈಗ ರಿಷಿ ಅಭಿನಯದ ‘ರಾಮನ ಅವತಾರ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಸದ್ಯಕ್ಕೆ ಆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ನನ್ನ ಫೋಟೋಗಳನ್ನು ದುರ್ಬಳಕೆ ಮಾಡಿದವರ ವಿರುದ್ಧ ಸೈಬರ್ ಕ್ರೈಮ್ಗೆ ದೂರು ನೀಡಿದ್ದೇನೆ. ಇದರ ಉದ್ದೇಶ, ನನ್ನ ಹಾಗೆ ಬೇರೆಯವರ ಫೋಟೋಗಳು ದುರ್ಬಳಕೆ ಆಗುವುದು ಬೇಡ. ನನ್ನ ಹಾಗೆ ಅವರಿಗೂ ಮಾನಸಿಕ ಹಿಂಸೆ ಆಗಬಾರದು ಎಂಬುದು. ಅದೇ ಕಾರಣಕ್ಕೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಬೇಕಾಗಿ ಬಂತು. - ಶುಭ್ರ ಅಯ್ಯಪ್ಪ

ಇಷ್ಟಕ್ಕೂ ಆಗಿದ್ದೇನು?

ಶುಭ್ರ ಅಯ್ಯಪ್ಪ ಸೋಷಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಟ್ರಿಪ್‌ಗೆ ಹೋಗಿದ್ದಾಗ ತೆಗೆಸಿಕೊಂಡಿದ್ದ ಬಿಕಿನಿ ಫೋಟೋಗಳು ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿದ್ದವು. ಅವುಗಳನ್ನೆ ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು, ಫೋಟೋಶಾಪ್ ಬಳಸಿ, ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ, ಇದರಿಂದ ತಮ್ಮ ವೈಯಕ್ತಿಕ ಬದುಕಿಗೆಧಕ್ಕೆ ಉಂಟಾಗಿದೆ ಎನ್ನುವುದು ಶುಭ್ರ ಅಯ್ಯಪ್ಪ ಆರೋಪ. ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಬ್ಬರ ಫೋಟೋಗಳನ್ನು ಫೋಟೋಶಾಪ್ ಬಳಸಿ, ಕೆಟ್ಟದಾಗಿ ಬಿಂಬಿಸುತ್ತಿರುವ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ತಾಯಿ ಇಲ್ಲವೇ, ತಂಗಿ ಇಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

 

ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಾಕಿದ ಸ್ಟೇಟಸ್..

‘ನನ್ನ ಬಿಕಿನಿ ಫೋಟೋಗಳನ್ನ ಫೋಟೋಶಾಪ್ ಬಳಸಿ, ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದು ತೀವ್ರ ನೋವುಂಟು ಮಾಡಿದೆ. ರಜೆಯಲ್ಲಿ ನಾನು ಕೂಡ ಸಾಮಾನ್ಯ ಮನುಷ್ಯಳಂತೆ ಎಂಜಾಯ್ ಮಾಡುವುದರಲ್ಲಿ ತಪ್ಪೇನಿದೆ? ನಾನು ಬಿಕಿನಿ ಹಾಕಿ ರಸ್ತೆಯಲ್ಲಿ ತಿರುಗಾಡಿಲ್ಲ. ಅದು ಬೀಚ್‌ನಲ್ಲಿ ತೊಟ್ಟಿದ್ದು. ಅವುಗಳನ್ನೇ ನಾನು ನನ್ನ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಾಕಿಕೊಂಡರೆ ತಪ್ಪೇನು? ನಾನು ಒಬ್ಬ ಹೆಣ್ಣು. ನನಗೆ ಇಷ್ಟ ಬಂದಂತೆ ಜೀವಿಸಲು ಸ್ವಾತಂತ್ರ್ಯವಿದೆ. ನಾನು ಎಲ್ಲರಂತೆ ಕೆಲಸ ಮಾಡುತ್ತೇನೆ. ನನಗೆ ಇಷ್ಟವಾಗುವಂತಹ ಬಟ್ಟೆ ತೊಡುತ್ತೇನೆ. ನಾನು ಸಂಸ್ಕೃತಿ ಇಲ್ಲದವಳು ಎಂದು ಜರೆಯುವುದು ಎಷ್ಟು ಸರಿ?