- ಇದು ‘ರಾಮಾ ರಾಮಾ ರೇ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಬಿಂಬಶ್ರೀ ನೀನಾಸಂ ಖಡಕ್ ಮಾತು. ಅವರ ಮೊದಲ ಚಿತ್ರ ‘ರಾಮಾ ರಾಮಾ ರೇ’ ತೆರೆ ಕಂಡು ಹೆಚ್ಚು ಕಡಿಮೆ ಮೂರು ವರ್ಷಗಳೇ ಆದವು. ಬಿಂಬಶ್ರೀ ಈಗ ಗೌಡ್ರು ಸೈಕಲ್ ಏರಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ‘ಗೌಡ್ರು ಸೈಕಲ್’ ಬಿಂಬಶ್ರೀ ಅಭಿನಯದ  ಮತ್ತೊಂದು ಚಿತ್ರದ ಹೆಸರು. ಮಂಗಳೂರು ಮೂಲದ  ಉದ್ಯಮಿ ಸವಿತಾ ರಾಜೇಶ್ ಚೌಟ ನಿರ್ಮಾಣದಲ್ಲಿ ಹೊಸ ಪ್ರತಿಭೆ ಪ್ರಶಾಂತ್ ಎಳ್ಳಂಪಳ್ಳಿ ನಿರ್ದೇಶಿಸಿದ ಚಿತ್ರ. ಈ ಚಿತ್ರಕ್ಕೆ ಬಿಂಬಶ್ರೀ ನಾಯಕಿ. ಅವರದ್ದು ಹಳ್ಳಿ ಹುಡುಗಿ ಪಾತ್ರ.

‘ಡಿ ಗ್ಲಾಮ್ ಪಾತ್ರಗಳೇ ನನಗೆ ಸಿಗುತ್ತಿರುವ ಕಾರಣ ಯಾಕೆಂದು ಗೊತ್ತಿಲ್ಲ. ಅದು ಮೊದಲ ಸಿನಿಮಾದಲ್ಲಿನ ನನ್ನ ಪಾತ್ರವೂ ಪ್ರಭಾವವೂ ಇರಬಹುದು. ಆ ಬಗ್ಗೆ ನನಗೆ ಬೇಸರವಿಲ್ಲ. ನಾನು ರಂಗಭೂಮಿಯಿಂದ ಬಂದವಳು. ಎಲ್ಲಾ ರೀತಿಯ ಪಾತ್ರಗಳಲ್ಲೂ ಅಭಿನಯಿಸಬೇಕೆನ್ನುವ ಆಸೆಯಿದೆ. ಅವಕಾಶ ಸಿಗುತ್ತಿಲ್ಲ. ಸಿಗುವ ಪಾತ್ರಕ್ಕೆ ನ್ಯಾಯ ಒದಗಿಸಬೇಕೆನ್ನುವ ಸಿದ್ಧಾಂತ ನನ್ನದು. ಇದು ನಟಿಯಾಗಿ ನನ್ನನ್ನು ನಾನು ತೋರಿಸಿಕೊಳ್ಳುವುದಕ್ಕೆ ಸಿಕ್ಕ ಒಳ್ಳೆಯ ಅವಕಾಶ’ ಎನ್ನುತ್ತಾರೆ ನಟಿ ಬಿಂಬಶ್ರೀ.

ಚಿತ್ರ ತಂಡ ಒಂದು ವಿಶೇಷವಾದ ಸೈಕಲ್ ಡಿಸೈನ್ ಮಾಡಿಸಿ, ಚಿತ್ರಕ್ಕೆ ಬಳಸಿದೆ. ಅದು ಕೂಡ ಚಿತ್ರದ ಒಂದು ಪಾತ್ರ. ಹಳೆ ವಸ್ತು ಮತ್ತು ವಯಸ್ಸಾದ ವ್ಯಕ್ತಿಗಳನ್ನು ಸಮಾಜ ಕಡೆಗಣಿಸಿದರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಗೌಡ್ರು ಸೈಕಲ್ ಹೆಸರಲ್ಲಿ ತೋರಿಸಲು ಹೊರಟಿದೆಯಂತೆ ಚಿತ್ರತಂಡ. ಇದಲ್ಲದೇ ಬಿಂಬಶ್ರೀ ‘ಹಫ್ತಾ’ ಎಂಬ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ವರ್ಧನ್ ತೀರ್ಥಹಳ್ಳಿ ಅದರ ನಾಯಕ.