ರಕ್ಷಿತ್ ಶೆಟ್ಟಿ- ಪುಷ್ಕರ್ ನಿರ್ಮಾಣದ ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಾಯಕಿಯಾಗಿದ್ದಾರೆ ಆರೋಹಿ ನಾರಾಯಣ್. ಕೆಲ ದಿನಗಳ ಬಳಿಕ ಸ್ಯಾಂಡಲ್‌ವುಡ್‌ಗೆ ವಾಪಸ್ಸಾಗಿದ್ದಾರೆ. ಕನ್ನಡ ಪ್ರಭದೊಂದಿಗೆ ಆರೋಹಿ ಎಕ್ಸ್‌ಕ್ಲೂಸಿವ್  ಸಂದರ್ಶನ. 

ಬೆಂಗಳೂರು (ಆ. 14): ದೃಶ್ಯ ಚಿತ್ರದ ಮುದ್ದು ಚೆಲುವೆ. ಮೊದಲ ಚಿತ್ರದಲ್ಲೇ ಕ್ರೇಜಿಸ್ಟಾರ್ ಜತೆ ನಟಿಸುವ ಅವಕಾಶಕ್ಕೆ ಪಾತ್ರರಾಗಿ ಮೆಚ್ಚುಗೆ ಗಳಿಸಿ ರಕ್ಷಿತ್ ಶೆಟ್ಟಿ-ಪುಷ್ಕರ್ ನಿರ್ಮಾಣದ ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಆರೋಹಿ ಜತೆ ಮಾತುಕತೆ. 

ದೃಶ್ಯ ನಂತರ ಎಲ್ಲೋ ಕಾಣೆಯಾಗಿಬಿಟ್ರಲ್ಲ ಯಾಕೆ?
ಎರಡು ವರ್ಷ ಬ್ರೇಕ್ ತೆಗೆದುಕೊಂಡೆ. ಜತೆಗೆ ಸರ್ಜರಿ ಬೇರೆ ಮಾಡಿಸಿಕೊಂಡೆ. ಹೀಗಾಗಿ ಯಾವ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ‘ದೃಶ್ಯ’ ಚಿತ್ರ ನಂತರ ಮತ್ತೆ ನಾನು ತೆರೆ ಮೇಲೆ ಕಾಣಿಸಿಕೊಳ್ಳುವ ಸಂದರ್ಭ ಬರಲಿಲ್ಲ.

ಅಂದ್ರೆ ಎರಡು ವರ್ಷ ಯಾವ ಚಿತ್ರವೂ ಮಾಡಿಲ್ಲ ಅನ್ನಿ?
ಈ ನಡುವೆ ನಾನು ಎರಡು ಚಿತ್ರಗಳಲ್ಲಿ ನಟಿಸಿದೆ. ಆದರೆ, ಎಂದೋ ಒಪ್ಪಿಕೊಂಡ ಚಿತ್ರಗಳು ಅವು. ಅಂದರೆ ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ ಸಿನಿಮಾ. ಸೂಕ್ತವಾಗಿ ಪ್ರಚಾರ ಕೊಡಲಿಲ್ಲ. ಹೀಗಾಗಿ ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣಲಿಲ್ಲ. ನನ್ನ ಈ ಕೊರತೆಯನ್ನು ‘ಭೀಮಸೇನ ನಳಮಹಾರಾಜ’ ಚಿತ್ರ ನೀಗಿಸುತ್ತದೆಂಬ ಭರವಸೆ ಇದೆ.

ನಳಮಹಾರಾಜನ ಜತೆ ನಿಮ್ಮ ಪಾತ್ರ ಹೇಗಿರುತ್ತದೆ?
ಒಂದೇ ವಾಕ್ಯದಲ್ಲಿ ಹೇಳುವುದಾದರೆ ಟಾಮ್ ಬಾಯ್ ಆಗಿರುತ್ತೇನೆ. ನನ್ನ ನಿಜ ಜೀವನಕ್ಕೆ ಎಳ್ಳಷ್ಟು ನಂಟಿಲ್ಲದ ಪಾತ್ರವಿದೆ. ನಾನು ನಿಜ ಜೀವನದಲ್ಲಿ ಸಸ್ಯಾಹಾರಿ. ಆದರೆ, ತೆರೆ ಮೇಲೆ ನಾನ್‌ವೆಜ್ ತಿನ್ನುವ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದೇನೆ. ಹೀಗಾಗಿ ತುಂಬಾ ಗ್ಯಾಪ್ ನಂತರ ಸಿಕ್ಕ ಈ ಚಿತ್ರ ನನಗೆ ಸಂತೋಷ ಕೊಡುವ ಜತೆಗೆ ಸವಾಲಿನ ಪಾತ್ರವನ್ನು ನೀಡಿದೆ.

ಟಾಮ್ ಬಾಯ್ ಅಂದರೆ ಹುಡುಗನ ರೀತಿ ವರ್ತಿಸುವುದಾ?
ಹಾಗಂತಲ್ಲ. ಹೆಣ್ಣು ಮಗಳು ಅಂದರೆ ಹೀಗೆ ಇರಬೇಕು, ಇಂಥದ್ದೇ ಬಟ್ಟೆ ಹಾಕಿಕೊಳ್ಳಬೇಕು, ಆಕೆ ವರ್ತನೆಗಳು ಹೀಗೆ ಇರಬೇಕು ಎಂಬಂತಹ ಒಂದು ಚೌಕಟ್ಟು ಇದೆಯಲ್ಲ ಅದನ್ನು ಮೀರಿ ನಿಲ್ಲುವ ಪಾತ್ರ, ಬೌಂಡ್ರಿ ಆಚೆಗೆ ನನ್ನ ಪಾತ್ರ ರೂಪುಗೊಂಡಿರುತ್ತದೆ. ಬ್ರಾಹ್ಮಣ ಕುಟುಂಬದ ಹುಡುಗಿ, ಸಾಂಪ್ರದಾಯಿಕವಾಗಿ ಇರಬೇಕೆಂಬ ಟಿಪಿಕಲ್ ಆಲೋಚನೆಗಳನ್ನು ಮುರಿದು ಬಾಳುತ್ತಿರುವ ಪಾತ್ರ ನನ್ನದು.

ನಳಮಹಾರಾಜನ ಜತೆಗಿನ ಪಯಣ ಹೇಗಿತ್ತು?
ಒಂದು ಪ್ರೊಡಕ್ಷನ್ ಹೌಸ್ ಹೇಗಿರುತ್ತದೆ, ಸೆಟ್‌ನಲ್ಲಿ ಹೆಣ್ಣು ಮಕ್ಕಳನ್ನು ಯಾವ ರೀತಿಯ ಗೌರವಿಸುತ್ತಾರೆ, ಹೇಗೆ ನೋಡಿಕೊಳ್ಳುತ್ತಾರೆಂಬುದನ್ನು ತೋರಿಸಿಕೊಟ್ಟ ಸಿನಿಮಾ ಇದು. ಒಂದೇ ಒಂದು ದಿನವೂ ನನಗೆ ಕಿರಿಕಿರಿ ಆಗಲಿಲ್ಲ. ನಿರ್ದೇಶಕ ಕಾರ್ತಿಕ್ ಸರಗೂರು ಹಾಗೂ ನಿರ್ಮಾಪಕರಾದ ಪುಷ್ಕರ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಇವೆರಲ್ಲ ಒಂದು ಕನಸು ಕಟ್ಟಿಕೊಂಡು ಮಾಡುತ್ತಿದ್ದ ಸಿನಿಮಾ. ಅವರ ಕನಸಿನ ಜತೆಗೆ ನಾನು ಜತೆಯಾದ ಎನ್ನುವುದೇ ಸಂಭ್ರಮ ಮೂಡಿಸುತ್ತಿತ್ತು. ಆ ಖುಷಿಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ಇನ್ನೂ ಚಿತ್ರದ ನಾಯಕ ಅರವಿಂದ್ ಅಯ್ಯರ್, ಅಚ್ಯುತ್ ಕುಮಾರ್ ಅವರಂತಹ ಕಲಾವಿದರ ಜತೆ ಕಾಣಿಸಿಕೊಂಡಿದ್ದು ನನ್ನ ಹೆಮ್ಮೆ.

ಚಿತ್ರರಂಗಕ್ಕೆ ನಿಮ್ಮ ಪ್ರವೇಶ ಆಗಿದ್ದು ಹೇಗೆ?

ನಾನು ನಿರ್ದೇಶಕನ ಕಲಿಯುವುದಕ್ಕೆ ಬಂದವಳು. ಹೀಗಾಗಿ ಡಿಗ್ರಿ ಓದುವಾಗ ನಿರ್ದೇಶಕ ಜಟ್ಟ ಗಿರಿರಾಜ್ ಅವರ ಗರಡಿಗೆ ಬಂದೆ. ಆಗ ನನಗೂ ಮತ್ತು ವಿನಯ್ ರಾಜ್‌ಕುಮಾರ್ ಅವರಿಗೂ ಒಟ್ಟಿಗೆ ವರ್ಕ್‌ಶಾಪ್ ಮಾಡಿಸಿದರು. ಅಲ್ಲಿ ತರಬೇತಿ ಮಾಡುವಾಗಲೇ ನನಗೆ ‘ದೃಶ್ಯ’ ಚಿತ್ರಕ್ಕೆ ಅಫರ್ ಬಂತು, ನಟನೆಯತ್ತ ಮುಖ ಮಾಡಿದೆ. 

-ಆರ್.ಕೇಶವಮೂರ್ತಿ