ಕನ್ನಡದ ಕೋಟ್ಯಧಿಪತಿ ಹವಾ ಆರಂಭವಾಗಿದೆ. ಸಾಕಷ್ಟು ಕತೆ, ಅಚ್ಚರಿ, ಬೆರಗು, ಕನಸು, ಭಾವುಕತೆಗಳನ್ನು ಒಳಗೊಂಡಿರುವ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮ. ಇಂಥ ಕಾರ್ಯಕ್ರಮಕ್ಕೆ ಈ ಬಾರಿ ರಮೇಶ್ ಅರವಿಂದ್ ನಿರೂಪಕರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಬಗ್ಗೆ ರಮೇಶ್ ಅರವಿಂದ್ ಮಾತುಗಳು 

ವೀಕೆಂಡ್ ರಮೇಶ್ ಅವರು ಈಗ ಕೋಟ್ಯಧಿಪತಿ ರಮೇಶ್ ಆಗಿದ್ದೀರಲ್ಲ?
ಹ್ಹಹ್ಹಹ್ಹ... ಹೌದು. ಆದರೆ, ಕೋಟ್ಯಧಿಪತಿ ರಮೇಶ್ ಅನ್ನೋದಕ್ಕಿಂತ ವೀಕ್ ಡೇಸ್ ರಮೇಶ್. ಯಾಕೆಂದರೆ ಅದು ಅದು ವೀಕೆಂಡ್‌ನಲ್ಲಿ ಮಾತ್ರ ಬರುತ್ತಿತ್ತು. ‘ಕನ್ನಡದ ಕೋಟ್ಯಧಿಪತಿ’ ಸೋಮವಾರದಿಂದ ಶುಕ್ರವಾರದ ತನಕ. ಹೀಗಾಗಿ ವೀಕ್‌ಡೇಸ್ ರಮೇಶ್ ಆಗಿದ್ದೇನೆ.

ಈ ಬಾರಿಯ ಶೋನ ವಿಶೇಷತೆಗಳೇನು?
ನಾನು ನಿರೂಪಣೆ ವಹಿಸಿಕೊಂಡಿರುವುದು. ಹಿಂದೆ ಸೆಲೆಬ್ರಿಟಿಯೊಳಗಿನ  ಶ್ರೀಸಾಮಾನ್ಯನನ್ನು ಹೊರಗೆ ತೆಗೆಯುವ ಪ್ರಯತ್ನ ಮಾಡಲಾಯಿತು. ಈಗ ಬಾರಿ ಶ್ರೀಸಾಮಾನ್ಯನೇ ಸೆಲೆಬ್ರಿಟಿ ಆಗಿರುತ್ತಾನೆ. ಸಾಮಾನ್ಯನೊಳಗೊಬ್ಬ ಅಸಮಾನ್ಯ ಯೋಚನೆಗಳಿವೆ. ಅಂಥ ಯೋಚನೆಗಳನ್ನು ಹೊರಗೆ ತೆಗೆಯುವ ಪ್ರಯತ್ನದ ಭಾಗವಾಗಿ ಈ ಬಾರಿ ಇಡೀ ಶೋ ಅನ್ನು ಸಂಯೋಜನೆ ಮಾಡಲಾಗಿದೆ.

ಹಾಗಾದರೆ ಈ ಬಾರಿಯ ಕೋಟ್ಯಧಿಪತಿಯ ಹೀರೋ ಶ್ರೀಸಾಮಾನ್ಯನಾ?
ಹೌದು. ಈ ಕಾರಣಕ್ಕೆ ಮೊದಲ ಎಪಿಸೋಡ್‌ನ ಸ್ಪರ್ಧಿ ಶ್ರೀಸಾಮಾನ್ಯನೇ. ಸೆಲೆಬ್ರಿಟಿ ಅಲ್ಲ.

ಈಗಾಗಲೇ ಒಂದಿಷ್ಟು ಎಪಿಸೋಡ್‌ನ ಚಿತ್ರೀಕರಣ ಆಗಿದೆಯಂತೆ. ಹೇಗಿತ್ತು ಅನುಭವ?
ನನ್ನ ನಿರ್ದೇಶನದ ಬಟರ್‌ಫ್ಲೈ ಚಿತ್ರದ ಚಿತ್ರೀಕರಣಕ್ಕೆ 7 ದಿನ ಗ್ರೀಸ್‌ಗೆ ಹೋಗುತ್ತಿದ್ದೇನೆ. ಹೀಗಾಗಿ ಮೊದಲೇ ಹತ್ತು ಎಪಿಸೋಡ್‌ಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ತುಂಬಾ ಒಳ್ಳೆಯ ಅನುಭವ. ಇದು ಕೇವಲ ದುಡ್ಡು ಮಾಡುವ ಗೇಮ್ ಶೋ ಮಾತ್ರವಲ್ಲ. ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬ್ಯೂಟಿಫುಲ್ ಆಟವಿದು.  

ಶೋನಲ್ಲಿ ಎಂಥ ವಿಷಯಗಳ ಸುತ್ತ ಪ್ರಶ್ನೆಗಳಿರುತ್ತವೆ?
ಇಡೀ ಕರ್ನಾಟಕವನ್ನು ಪ್ರತಿನಿಧಿಸುವಂತಹ  ವಿಷಯಗಳು ಇಲ್ಲಿವೆ. ಭಾಷೆ, ಆಚಾರ- ವಿಚಾರ, ಸಿನಿಮಾ, ಕ್ರೀಡೆ, ನೆಲದ ಸೊಗಡು, ಸಂಗೀತ, ಮಾನವ ಸಂಬಂಧಗಳು, ಕೌಟುಂಬಿಕತೆ. ಹೀಗೆ ಹತ್ತಾರು ವಿಷಯಗಳ ಸುತ್ತ ಕೋಟ್ಯಧಿಪತಿ ಶೋನ ಪ್ರಶ್ನೆಗಳನ್ನು ರೂಪಿಸಲಾಗಿದೆ. ಹಾಗಂತ ತುಂಬಾ ಅಕಾಡೆಮಿಕ್ ಆಗಿಲ್ಲ. ಸಾಮಾನ್ಯ ಗೃಹಿಣಿಯಿಂದ ಹಿಡಿದು ಆಟೋ ಡ್ರೈವರ್, ಮೆಕ್ಯಾನಿಕ್ ಹುಡುಗ, ವಿದ್ಯಾರ್ಥಿ, ರೈತ, ಮಹಿಳೆ ಹೀಗೆ ಎಲ್ಲ ವರ್ಗದವರು ಸುಲಭವಾಗಿ ಉತ್ತರಿಸುವಂತಹ ಪ್ರಶ್ನೆಗಳನ್ನೇ ಕೇಳುತ್ತೇವೆ.

ಎಷ್ಟು ಎಪಿಸೋಡ್‌ಗಳು ಬರಲಿವೆ? ನೀವು ಇದರ ನಿರೂಪಕರಾಗುವುದುಕ್ಕೆ ಕಾರಣ ಏನು?
ನಾನು ಈಗಾಗಲೇ 65 ಎಪಿಸೋಡ್‌ಗಳಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. 13 ವಾರ ಈ ಶೋ ನಡೆಯಲಿದೆ. ನಾನು ಒಪ್ಪಿಕೊಳ್ಳುವುದಕ್ಕೆ ಕಾರಣ, ಇದು ಜ್ಞಾನದ ವೇದಿಕೆ. ತಿಳುವಳಿಕೆ ಎಂಬುದು ಯಾವ ರೂಪದಲ್ಲಿ ಬಂದರೂ  ನಾನು ಸ್ವೀಕರಿಸುತ್ತೇನೆ. ಹಾಗೆ ಕೋಟ್ಯಧಿಪತಿ ಶೋ ನಿರೂಪಣೆಯನ್ನೂ ಸ್ವೀಕರಿಸಿದ್ದೇನೆ.

ಒಬ್ಬ ನಿರೂಪಕರಾಗಿ ನಿಮ್ಮ ಪ್ರಕಾರ ಕೋಟ್ಯಧಿಪತಿ ಎಂದರೇನು?
ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಶೋ ಇದು. ನಾನು ಇದರ ನಿರೂಪಕನಾಗುವ  ಮೂಲಕ ಕರ್ನಾಟಕದ ಜತೆ ಮಾತನಾಡಿದ ಅನುಭವಕ್ಕೆ ಪಾತ್ರನಾಗುತ್ತಿರುವೆ. ಕರ್ನಾಟಕದ ಯಾವುದೋ ಜಿಲ್ಲೆ, ಯಾವುದೇ ಊರು, ಯಾವುದೋ ಹಳ್ಳಿ, ಯಾವುದೋ ನಗರದಿಂರ ಬರುವ ಸ್ಪರ್ಧಿಗಳು. ಅವರ ಜತೆ ಮಾತು, ಅವರ ಮನೆಯ ಕತೆಗಳನ್ನು ಕೇಳುವುದು, ಅವರ ಊರಿನ ವಿಶೇಷತೆಗಳನ್ನು ಹೇಳಿಕೊಳ್ಳುವುದು, ವಯಸ್ಸಿನ ಬೇಧವಿಲ್ಲದೆ ಅವರೊಂದಿಗೆ ಬೆರೆಯುವುದು, ಅವರ ಸಾಧನೆಯ ಹೆಜ್ಜೆಗಳನ್ನು ಕಣ್ಮುಂದೆ ತುಂಬಿಕೊಳ್ಳುವುದು... ಇದೆಲ್ಲವೂ ನನಗೆ ಕೋಟ್ಯಧಿಪತಿಯಲ್ಲಿ ದೊರೆಯುತ್ತಿದೆ. ಈ ಕಾರಣಕ್ಕೆ  ನಾನು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ನಡೆಸುವುದು ಅಂದ್ರೆ, ಇಡೀ ಕರ್ನಾಟಕದ ಜತೆ ಮಾತನಾಡಿದಂತೆ.

ಇಲ್ಲಿ ಸ್ಪರ್ಧಿಸುವವರಿಗೆ ನೀವು ಹೇಳುವ ಮಾತೇನು?
ದಯವಿಟ್ಟು ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ಹಾಟ್ ಸೀಟ್‌ನಲ್ಲಿ  ಕೂತಾಗ ಒತ್ತಡ ಆಗುವುದು ಸಹಜ. ಆದರೆ, ಕೂಲಾಗಿ ಉತ್ತರಿಸಿ. ನಿಮಗೆ ಗೊತ್ತಿರುವ ನಿಮ್ಮ ಸುತಲೂ ನಡೆಯುವ ವಿಷಯಗಳನ್ನೇ ಇಲ್ಲಿವೆ. ಹೀಗಾಗಿ ಒತ್ತಡಕ್ಕೆ ಒಳಗಾಗಿ ಉತ್ತರಗಳನ್ನು ಮರೆಯಬೇಡಿ.
 

ನಿಮ್ಮ ಸಿನಿಮಾಗಳ ವಿಚಾರ ಹೇಳುವುದಾದರೆ?
ಬಟರ್‌ಫ್ಲೈ ಚಿತ್ರಕ್ಕೆ ಇನ್ನೂ ಏಳು ದಿನ ಚಿತ್ರೀಕರಣ ಬಾಕಿ ಇದೆ. ಅದು ಗ್ರೀಸ್‌ನಲ್ಲಿ ಶೂಟಿಂಗ್ ನಡೆಯಲಿದೆ. ಇದರ ನಂತರ ರಾಧಿಕಾ ಕುಮಾಸ್ವಾಮಿ ಜತೆ ನಟಿಸುತ್ತಿರುವ ‘ಭೈರಾದೇವಿ’ ಚಿತ್ರೀಕರಣ ಇದೆ. ಈ ಎರಡು ಮುಗಿಸಿಕೊಂಡು ‘ಬದ್ಮಾಷ್’ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದೇನೆ.