ನಿರ್ದೇಶಕ ತರುಣ್ ಸುಧೀರ್ ತಂಡ ಶೂಟಿಂಗ್ ಲೊಕೇಶನ್‌ಗಳನ್ನೂ ಪಕ್ಕಾ ಮಾಡಿಕೊಂಡಿದೆ. ಬೆಂಗಳೂರು, ಮೈಸೂರು, ವೈಜಾಗ್, ಉತ್ತರ ಪ್ರದೇಶದ ಅಯೋಧ್ಯೆ ಮುಂತಾದ ಕಡೆ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

‘ಇದು ದೊಡ್ಡ ಬಜೆಟ್ ಸಿನಿಮಾ. ಅಲ್ಲದೆ ಕತೆಯ ಬೇಡಿಕೆಗೆ ತಕ್ಕಂತೆ ದಕ್ಷಿಣ ಭಾರತದ ಜತೆಗೆ ಉತ್ತರ ಭಾರತದಲ್ಲೂ ಶೂಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ಚಿತ್ರಕ್ಕೆ ಮುಹೂರ್ತ ಹಾಗೂ ಚಿತ್ರೀಕರಣ ಎರಡೂ ಏಪ್ರಿಲ್ ತಿಂಗಳಲ್ಲಿ ಚಾಲನೆ ದೊರೆಯಲಿದೆ. ನಮ್ಮ ರಾಬರ್ಟ್ ಚಿತ್ರ ಟೇಕಾಫ್ ಆಗುವ ಹೊತ್ತಿಗೆ ದರ್ಶನ್ ಅವರ ಮತ್ತೊಂದು ಸಿನಿಮಾ ಒಡೆಯ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳಲಿದೆ’ ಎನ್ನುತ್ತಾರೆ ನಿರ್ಮಾಪಕ ಉಮಾಪತಿ. ಇನ್ನು ಚಿತ್ರಕ್ಕೆ ನಾಯಕಿ ಹೆಸರು ಅಂತಿಮಗೊಂಡಿಲ್ಲ. ಕತೆಗೆ ಸೂಕ್ತ ಎನಿಸುವವರನ್ನು ಹುಡುಕುತ್ತಿದ್ದೇವೆ ಎಂಬುದು ಉಮಾಪತಿ ಅವರ ಮಾತು.

ದರ್ಶನ್ ಜತೆ ಪ್ರೇಮ್ ಚಿತ್ರ ಮಾಡಲ್ಲ ಇದೇ ಹೆಬ್ಬುಲಿ ನಿರ್ಮಾಪಕ ಉಮಾಪತಿ ಅವರು ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ಜೊತೆ ಒಂದು ಸಿನಿಮಾ ಮಾಡುವ ತಯಾರಿ ಮಾಡಿಕೊಂಡಿದ್ದರು. ಕಾಟೇರಿ ಎನ್ನುವ ಹೆಸರನ್ನೂ ಅಂತಿಮಗೊಳಿಸಿದ್ದರು. ಈಗ ಬರುತ್ತಿರುವ ಮಾಹಿತಿ ಪ್ರಕಾರ ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ಇಲ್ಲ.

‘ಸದ್ಯ ರಾಬರ್ಟ್ ಸಿನಿಮಾ ಮಾತ್ರ ಮಾಡುತ್ತಿದ್ದೇನೆ. ಪ್ರೇಮ್ ನಿರ್ದೇಶನದ ಚಿತ್ರದ ಯಾವುದೇ ಪ್ರೋಗ್ರೆಸ್ ಇಲ್ಲ. ಅಲ್ಲದೆ ದರ್ಶನ್ ಅವರ ಮುಂದೆ ಸಾಲು ಸಾಲು ಸಿನಿಮಾಗಳು ಇದ್ದಾವೆ. ಹೀಗಾಗಿ ಸದ್ಯಕ್ಕೆ ಪ್ರೇಮ್ ನಿರ್ದೇಶನದ ದರ್ಶನ್ ಸಿನಿಮಾ ಮಾಡುತ್ತಿಲ್ಲ’ ಎಂದು ನಿರ್ಮಾಪಕ ಉಮಾಪತಿ ಅವರೇ ಹೇಳುತ್ತಾರೆ.