ಚಿತ್ರದಲ್ಲಿ ರಮೇಶ್ ಅರವಿಂದ್ ಜೋಡಿಯಾಗಿ ರಾಧಿಕಾ ಚೇತನ್ ಕಾಣಿಸಿಕೊಂಡರೆ, ಅವರಷ್ಟೇ ಪ್ರಾಮುಖ್ಯತೆ ಹೊಂದಿರುವ ಮತ್ತೊಂದು ಪಾತ್ರಕ್ಕೆ ಆರೋಹಿ ನಾರಾಯಣ್ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಅಂದ್ರೆ, ಇಲ್ಲಿ ರಾಧಿಕಾ ಚೇತನ್ ಅಡ್ವೊಕೇಟ್. ಅತ್ತ ಆರೋಹಿ ನಾರಾಯಣ್ ಡಾಕ್ಟರ್. ಇಬ್ಬರು ನಟಿಯರ ಪಾತ್ರವೂ ವಿಶೇಷ ಮತ್ತು ವಿಭಿನ್ನ. 

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಅನೂಪ್ ಗೌಡ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಯುವ ನಿರ್ದೇಶಕ ಆಕಾಶ್ ಶ್ರೀವತ್ಸ ಕತೆ, ಚಿತ್ರಕತೆ ಬರೆದು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನವ ನಿರ್ದೇಶಕನ ಜತೆಗೆ ಅಭಿನಯಿಸಲು ಥ್ರಿಲ್ ಆಗಿರುವ ರಮೇಶ್ ಅರವಿಂದ್ ಅವರ ಪಾತ್ರದ ಬಗೆಗೂ ಸಾಕಷ್ಟು ಕುತೂಹಲವಿದೆ. ಆದರೆ, ಅವರ ಪಾತ್ರ ಎಂಥದ್ದು ಅನ್ನೋದು ಮಾತ್ರ ನಿಗೂಢ. ಸದ್ಯಕ್ಕೆ ಅದೇನು ಅನ್ನೋದು ರಿವೀಲ್ ಆಗಿಲ್ಲ. ಚಿತ್ರ ತಂಡ ಹೇಳುವ ಪ್ರಕಾರ ಅವರಿಲ್ಲಿ ವಿಶೇಷ ಪಾತ್ರದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಹಾಗೆಯೇ, ಆ ಪಾತ್ರ ಇಬ್ಬರು ನಾಯಕಿಯರ ಸುತ್ತ ಸಾಗಲಿದೆ ಎನ್ನುವುದು ಮತ್ತಷ್ಟು ಕುತೂಹಲ ಕಾರಣ.

ತೆರೆ ಮೇಲೆ ನಟಿ ರಾಧಿಕಾ ಚೇತನ್, ವಿವಾಹಿತ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಮತ್ತೊಮ್ಮೆ ಈಗ ಅವರದ್ದು ಇಲ್ಲಿ ಅಂತಹದೇ ಒಂದು ಪಾತ್ರ. ಚಿತ್ರದಲ್ಲಿ ಅವರು ರಮೇಶ್ ಅರವಿಂದ್ ಪತ್ನಿಯಾಗಿ ಅಭಿನಯಿಸುತ್ತಿದ್ದಾರೆ. ಅದೂ ಸಹ ಕತೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎನ್ನುವುದು ಅವರ ವಿಶ್ವಾಸದ ಮಾತು ‘ನಾನಿಲ್ಲಿ ಅಡ್ವೊಕೇಟ್. ಕಥಾ ನಾಯಕ ರಮೇಶ್ ಅರವಿಂದ್ ಪತ್ನಿ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಕತೆಗೆ ಆ ಪಾತ್ರದಿಂದಲೇ ಸಾಕಷ್ಟು ಟ್ವಿಸ್ಟ್ ಸಿಗಲಿದೆ. ಅಷ್ಟು ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ಅಭಿನಯಿಸುವ ಅವಕಾಶ ನನ್ನ ಪಾಲಿಗೆ ಸಿಗುತ್ತಿದೆ ಅಂತ ಒಪ್ಪಿಕೊಂಡೆ. ಜತೆಗೆ ರಮೇಶ್ ಅರವಿಂದ್ ಕಾಂಬಿನೇಷನ್ ಎನ್ನುವುದು ಕಾರಣವಾಯಿತು’ ರಾಧಿಕಾ ಚೇತನ್.

ಹಲವು ಜನಪ್ರಿಯ ನಟ, ನಟಿಯರು ಚಿತ್ರದಲ್ಲಿನ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಷ್ಟೇ ಚಿತ್ರದ ಮೂರು ಪಾತ್ರಗಳಿಗೆ ಕಲಾವಿದರು ಕನ್‌ಫರ್ಮ್ ಆಗಿದ್ದಾರೆ. ಜನವರಿ ಮೊದಲ ವಾರದಿಂದ ಚಿತ್ರೀಕರಣ ಆರಂಭ. ಗುರು ಪ್ರಸಾದ್ ಛಾಯಾಗ್ರಹಣ, ಜುಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಮುಹೂರ್ತದ ವೇಳೆಯೇ ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆಯಂತೆ. 

ಡಾಕ್ಟರ್ ಆಗಿ ಆರೋಹಿನಾರಾಯಣ್ 

ನವ ಪ್ರತಿಭೆ ಆರೋಹಿ ನಾರಾಯಣ್ ಈ ಚಿತ್ರದ ಮತ್ತೊಬ್ಬ ನಾಯಕಿ. ರಾಧಿಕಾ ಚೇತನ್ ಅಡ್ವೊಕೇಟ್ ಆದ್ರೆ, ಆರೋಹಿ ನಾರಾಯಣ್ ಇಲ್ಲಿ ಡಾಕ್ಟರ್.ಅದರಲ್ಲೂ ಮನೋರೋಗ ತಜ್ಞೆ. ಸೈಕಲಾಜಿಕಲ್ ಥ್ರಿಲ್ಲರ್ ಕತೆಯಲ್ಲಿ ಅವರು ಮನೋರೋಗ ತಜ್ಞೆ ಅಂದ್ರೆ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದೇ ಇರುತ್ತೆ ಎನ್ನುವುದನ್ನು ಅವರು ಕೂಡ ಒಪ್ಪಿಕೊಳ್ಳುತ್ತಾರೆ. ಅಷ್ಟು ಪ್ರಾಮುಖ್ಯತೆ ಇರುವ ಕಾರಣದಿಂದಲೇ ತಾವು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ ಆರೋಹಿ ನಾರಾಯಣ್. ಸದ್ಯಕ್ಕೆ ಅವರೀಗ ‘ಭೀಮಸೇನ ನಳಮಹರಾಜ’ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಅದರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.