ನವದೆಹಲಿ (ಜು. 09): ಸದ್ಯದಲ್ಲೇ ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ‘ತ್ರಿಡಿ’ ರಾಮಾಯಣ ಸೆಟ್ಟೇರಲಿದೆ. ನಿಜ ಪೌರಾಣಿಕ ಕಥನವಾದ ರಾಮಾಯಣವನ್ನು ಮೂರು ಭಾಗಗಳಲ್ಲಿ, ‘ತ್ರೀಡಿ’ ಮಾದರಿಯಲ್ಲಿ ತೆರೆಯ ಮೇಲೆ ತರಲು ತೆಲಗು ಚಿತ್ರರಂಗದ ಘಟಾನುಘಟಿಗಳಾದ ಅಲ್ಲು ಅರವಿಂದ್‌, ಪ್ಯಾಂಟಮ್‌ ಫಿಲ್ಮ್ ಸಂಸ್ಥಾಪಕ ಮಧು ಮಂಟೆನಾ ಮತ್ತು ಪ್ರೈಂ ಫೋಕಸ್‌ ಸ್ಟುಡಿಯೋ ಸಂಸ್ಥಾಪಕ ನಮಿತ್‌ ಮಲ್ಹೋತ್ರಾ ಅಣಿಯಾಗಿದ್ದಾರೆ.

ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ದಂಗಲ್‌ ಚಿತ್ರದ ನಿರ್ದೇಶಕ ನಿತೀಶ್‌ ತಿವಾರಿ ಮತ್ತು ಮಾಮ್‌ ಚಿತ್ರದ ನಿರ್ದೇಶಕ ರವಿ ಉದ್ಯಾವರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಿರ್ಮಾಪಕರ ತಂಡ 500 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಾಣಕ್ಕೆ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಹಿಂದೆ ಕೂಡಾ 1000 ಕೋಟಿ ರು. ವೆಚ್ಚದಲ್ಲಿ ರಾಮಾಯಣ ಚಿತ್ರ ನಿರ್ಮಾಣದ ಘೋಷಣೆಯಾಗಿತ್ತಾದರೂ, ಚಿತ್ರಕಥೆ ಬರೆದಿದ್ದ ವಾಸುದೇವನ್‌ ನಾಯರ್‌ ಮತ್ತು ನಿರ್ದೇಶಕ ಶ್ರೀಕುಮಾರ್‌ ನಡುವಿನ ಭಿನ್ನಮತದಿಂದಾಗಿ ಯೋಜನೆ ಮುರಿದು ಬಿದ್ದಿತ್ತು.