ಕನ್ನಡ ಚಿತ್ರರಂಗದ ಹೊಸಫಸಲು: ಎಂಟ್ರಿಯಲ್ಲೇ ಅದ್ಭುತ ಅವಕಾಶ ಪಡೆದ ನಿಮಿಕಾ!
ಹಾಡು ಹೇಳಲು ಬಂದು ಆ್ಯಕ್ಟರ್ ಆದವರು ನಿಮಿಕಾ ರತ್ನಾಕರ್. ಹಾಗೆಯೇ ಮಾಡೆಲ್ ಕೂಡಾ ಹೌದು. ಇಂಜಿನಿಯರಿಂಗ್ ಪದವೀಧರೆ. ಕಾರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿ ಕೖತುಂಬಾ ಸಂಬಳ ಎಣಿಸುತ್ತಿದ್ದವರು ಈಗ ನಟಿ. 'ರಾಮಧಾನ್ಯ' ಚಿತ್ರದೊಂದಿಗೆ ಶುರುವಾದ ಅವರ ಸಿನಿ ಪಯಣಕ್ಕೀಗ ಎಂಟ್ರಿಯಲ್ಲೇ ಟರ್ನಿಂಗ್ ಪಾಯಿಂಟ್. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಉಪೇಂದ್ರ ಅಭಿನಯದ 'ರವಿಚಂದ್ರ' ಚಿತ್ರದ ಇಬ್ಬರು ನಾಯಕಿಯರಲ್ಲಿ ನಿಮಿಕಾ ಕೂಡಾ ಒಬ್ಬರು. ಇಲ್ಲಿ ಅವರು ಉಪೇಂದ್ರ ಜೋಡಿ. ಎಂಟ್ರಿಯಲ್ಲೇ ಒಂದೊಳ್ಳೆ ಅವಕಾಶ ಸಿಕ್ಕಿದೆ. ಹಾಗಾದ್ರೆ ತಮ್ಮ ಬದುಕಿನ ಪಯಣದ ಕುರಿತಾಗಿ ನಿಮಿಕಾ ರತ್ನಾಕರ್ ಹೇಳುವುದೇನು? ಇಲ್ಲಿದೆ ಅವರ ಮಾತುಗಳು.
1. ಕರಾವಳಿ ಹುಡುಗಿ ನಾನು. ಹುಟ್ಟಿದ್ದು, ಬೆಳೆದಿದ್ದು ಮಂಗಳೂರು. ಇಂಜಿನಿಯರಿಂಗ್ ಪದವೀಧರೆ. ಅಪ್ಪ ಇಂಟಿರೀಯರ್ ಡಿಸೈನರ್. ಕೆಲಸದ ನಿಮಿತ್ತ ಅವರು ವಲಸೆ ಹೋದ ಕಾರಣಕ್ಕೆ ಕೆಲ ಕಾಲ ದುಬೈನಲ್ಲೂ ಇದ್ದೆ. ಅಲ್ಲಿಂದ ಬೆಂಗಳೂರಿಗೆ ಬಂದು ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಹಾಡುವ ಅಭ್ಯಾಸ ಬಾಲ್ಯದಿಂದಲೂ ಇತ್ತು. ಆ ಕಾರಣಕ್ಕೆ ವಿ. ಮನೋಹರ್ ಸಂಪರ್ಕದೊಂದಿಗೆ ತುಳು ಚಿತ್ರಕ್ಕೆ ಹಾಡುತ್ತಿದ್ದವಳು, ಈಗ ನಾಯಕಿ ಆದೆ.
2. ನಟಿ ಆಗ್ಬೇಕು ಅಂತೇನು ಅಂದುಕೊಂಡವಳಲ್ಲ. ಸಿಂಗಿಂಗ್ ಜತೆಗೆ ಮಾಡೆಲಿಂಗ್ ಮಾಡುತ್ತಿದ್ದೆ. ಕೋರಿಯಾ ದೇಶದಲ್ಲಿ ನಡೆದ ಮಾಡೆಲಿಂಗ್ ಕಾಂಪಿಟೇಷನ್‌ವೊಂದಕ್ಕೂ ಹೋಗಿ ಬಂದೆ. ಅಲ್ಲಿಗೆ ಹೋಗುವುದಕ್ಕಾಗಿ ಕೆಲಸಕ್ಕೆ ಗುಡ್‌ಬೈ ಹೇಳಿದೆ. ಆದ್ರೆ, ಅಲ್ಲಿಗೆ ಹೋಗಿ ಬಂದ ನಂತರ ಒಂದು ರೀತಿ ನಿರುದ್ಯೋಗಿಯಂತಾದೆ. ಆಗ ನಟಿ ಆಗ್ಬೇಕು ಎನ್ನುವ ತುಡಿತ ಹೆಚ್ಚಾಯಿತು. ಫೋಟೋಶೂಟ್ ಮಾಡಿಸಿ, ಅವಕಾಶಗಳಿಗೆ ಕಾಯುತ್ತಿದ್ದೆ. ಆಗ ನನಗೆ ಸಿಕ್ಕಿದ್ದು 'ರಾಮಧಾನ್ಯ' ಚಿತ್ರ.
3. ಇದೇ ಮೊದಲ ಸಿನಿಮಾ. ನಟನೆ ಬಗ್ಗೆ ಗಂಧ ಗಾಳಿಯೂ ಗೊತ್ತಿರಲಿಲ್ಲ. ಚಿತ್ರೀಕರಣ ಹೇಗಿರುತ್ತದೆ ಅಂತಲೂ ನೋಡಿದವಳಲ್ಲ. ಮೊದಲ ದಿನ ಸೆಟ್‌ಗೆ ಹೋಗಿದ್ದಾಗ ನಡುಕ ಶುರುವಾಗಿತ್ತು. ನಿರ್ದೇಶಕರು ಹಾಗಲ್ಲ, ಹೀಗೆ ಅಂತೆಲ್ಲ ಹೇಳಿ ಧೈರ್ಯ ತುಂಬಿದರು. ಕ್ರಮೇಣ ಚಿತ್ರೀಕರಣ ಅಭ್ಯಾಸವಾಯಿತು. ಒಂದಷ್ಟು ನಟನೆಯ ಕಲಿಕೆಯೂ ಆಯಿತು. ಕಲಿಕೆಗೆ ಕೊನೆ ಇಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಅದೇ ಹಂತದಲ್ಲಿ ನಾನೂ ಇದ್ದೇನೆ.
4. ಪಾತ್ರಗಳಲ್ಲಿ ಚ್ಯೂಸಿ ಎನ್ನುವಷ್ಟು ನಾನಿನ್ನು ಬೆಳೆದಿಲ್ಲ. ನಟಿಯಾಗಿ ಈಗಷ್ಟೇ ಶುರುವಾಗಿದೆ ಜರ್ನಿ. ಈಗ ನಟನೆಗೆ ಹೆಚ್ಚು ಅವಕಾಶ ಇರುವಂತಹ ಯಾವುದೇ ಪಾತ್ರ ಸಿಕ್ಕರೂ ಅಡ್ಡಿಯಿಲ್ಲ. ನಟಿ ಎನ್ನುವುದಕ್ಕಿಂತ ನಾನು ಕಲಾವಿದೆ ಗುರುತಿಸಿಕೊಳ್ಳುವ ಆಸೆ. ಪ್ರತಿ ಬಗೆಯ ಪಾತ್ರಗಳಲ್ಲಿ ಪ್ರಯೋಗ ಮಾಡುವ ಹಂಬಲ.
5. ಹಳೇ ಜಮಾನದ ಪ್ರತಿಯೊಬ್ಬ ನಟಿಯೂ ನನಗೆ ಸ್ಫೂರ್ತಿ. ಅವರಂತಾಗಿದ್ದರೂ, ಅವರ ಹಾಗೆ ನಟಿಸುವುದಕ್ಕೆ ಪ್ರಯತ್ನ ಮಾಡೋಣ, ಅವರಿಂದ ಕಿಂಚಿತ್ತಾದರೂ ಕಲಿಯೋಣ ಅನ್ನೋದು ನನ್ನ ಸಿದ್ಧಾಂತ. ಶ್ರೀದೇವಿ ಅಂದ್ರೆ ತುಸು ಹೆಚ್ಚೇ ಅಭಿಮಾನ.
-ದೇಶಾದ್ರಿ ಹೊಸ್ಮನೆ