ಅದೊಂದು ಕಸದ ಮಾಫಿಯಾ. ಅಲ್ಲೊಂದು ಕೊಲೆ. ಅದರ ವಿರುದ್ಧ ಸೇಡು. ಅದರ ನಡುವೆ ಒಂದು ಪ್ರೇಮ, ಹಾಗೆಯೇ ಒಂದಷ್ಟು ಕಾಮಿಡಿ. ಇದಿಷ್ಟು ಸೇರಿದ್ರೆ ವಜ್ರ. ಗಾಂಧಿನಗರದ ಸಿದ್ಧ ಮಾದರಿಯಲ್ಲೇ ಇವಿಷ್ಟು ಇಟ್ಕೊಂಡು ಕ್ರೈಮ್ ಥ್ರಿಲ್ಲರ್ ಕತೆಯೊಂದನ್ನು ತೆರೆ ಮೇಲೆ  ಕಟ್ಟಿಕೊಟ್ಟಿರುವ ನಿರ್ದೇಶಕರು, ಅಂತಿಮವಾಗಿ ಇಲ್ಲಿ ಹೇಳಹೊರಟಿದ್ದು ಜೀವನ ‘ವಜ್ರ’ದಷ್ಟೇ ಅಮೂಲ್ಯವಾದದ್ದು ಅಂತ.

ಹಾಗಾದ್ರೆ ವಜ್ರಕ್ಕಿರುವ ಹೊಳಪು, ಈ ಕತೆಗೆ ಇದೆಯಾ? ಅದೊಂದು, ನಿಮ್ಮೊಳಗೆಯೇ ಕಾಡುವ ಯಕ್ಷ ಪ್ರಶ್ನೆ ಮಾತ್ರ. ಆದ್ರೆ, ಜೀವನವನ್ನು ವಜ್ರಕ್ಕೆ ಹೋಲಿಸಿದ ನಿರ್ದೇಶಕರು, ಕತೆಯ ನಿರೂಪಣೆ ಮತ್ತು ದೃಶ್ಯಗಳ ಜೋಡಣೆಗಿಲ್ಲಿ ಹರಸಾಹಸ ಪಟ್ಟಿದ್ದು ಮಾತ್ರ ಪ್ರೇಕ್ಷಕನ ಪಾಲಿಗೆ ತಾಳ್ಮೆ ಪರೀಕ್ಷೆಯೇ ಹೌದು. ಭೂ ಮಾಫಿಯಾ, ಗಣಿ ಮಾಫಿಯಾ, ಡ್ರಗ್ಸ್ ಮಾಫಿಯಾದ ಹಾಗೆ ಇದು ಕಸದ ಮಾಫಿಯಾ ಕತೆ. ಬೆಂಗಳೂರಿನಂತಹ ಯಾವುದೇ ಮಹಾನಗರಗಳಲ್ಲಿ ಕಸ ವಿಲೇವಾರಿ ಮತ್ತು ಅದರ ಸಾಗಣೆ ನಡುವೆ ಹೇಗೆಲ್ಲ ಮಾಫಿಯಾದ ಮುಖವಾಡವಿರುತ್ತೆ ಎನ್ನುವುದನ್ನು ತೋರಿಸಲು ಕೊಲೆ ಪ್ರಕರಣವೊಂದನ್ನು ಬಳಸಿಕೊಂಡಿದ್ದಾರೆ ನಿರ್ದೇಶಕರು. ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಅಲ್ಲಿ ಕೊಲೆಯಾದ ವ್ಯಕ್ತಿ ಮಾಧ್ಯಮದ ಪ್ರತಿನಿಧಿ.

ಆ ಕೊಲೆ ಮಾಡಿದ್ದು ಯಾರು ? ಅದೇ ಆರಂಭದಿಂದ ಅಂತ್ಯದವರೆಗಿನ ಕುತೂಹಲದ ವಿಷಯ. ಆರಂಭ ಹೀಗಿದೆ, ಕೋಟ್ ನರ್ಲ್ಲಿ ವಿಚಾರಣೆ ಶುರು. ಜೈಲಿನಲ್ಲಿರುವ ಅಪರಾಧಿ ಸೂರ್ಯನನ್ನು ಟೆಲಿ ಕಾನ್ಪೆರನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದಾರೆ ನ್ಯಾಯಾಧೀಶರು. ನ್ಯಾಯಾಧೀಶರು ತೀರ್ಪಿನ ಷರಾ ಬರೆಯುವ ಮುನ್ನ ಅಂತಿಮವಾಗಿ ಏನ್ ಹೇಳ್ತೀರಾ ಸೂರ್ಯ ಎಂದಾಗ, ‘ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ’ಎನ್ನುತ್ತಾನೆ. ಅದು ವ್ಯಂಗ್ಯ ಮತ್ತು ಕಟು ಸತ್ಯ. ಮೊದಲ ದೃಶ್ಯ ಅಲ್ಲಿಗೆ ಮುಗಿಯುತ್ತದೆ. ವಿಚಿತ್ರ ಅಂದ್ರೆ, ಕನ್ನಡದ ಕೆಲವು ನಿರ್ದೇಶಕರಿಗೆ ಈ ಕೋರ್ಟ್ ನಡಾವಳಿಗಳೇ ಗೊತ್ತಿಲ್ಲ ಎನ್ನುವುದಕ್ಕೆ ಸಾಕ್ಷಿ ಆಗುತ್ತೆ ಅಲ್ಲಿನ ದೃಶ್ಯ. ನ್ಯಾಯಾಧೀಶರ ಮುಂದೆ ಅಪರಾಧಿ ಗತ್ತಿನಲ್ಲಿ ಕೂರುವುದು, ಸಾಕ್ಷಿಗಳು ಮನಸ್ಸಿಗೆ ಬಂದಂತೆ ಮಾತನಾಡು ವುದು ವಾಸ್ತವದಲ್ಲಿ ಅಸಾಧ್ಯ. ಇಂತಹ ಲೋಪಗಳು ಸಾಕಷ್ಟಿವೆ.

ಹೊಸತನವಿಲ್ಲದ ನಿರ್ದೇಶನದ ಹಾಗೆಯೇ ಪ್ರವೀಣ್ ಗಂಗಾ ನಟನೆಯ ಕಸರತ್ತು ಕೂಡ. ವಿನಾಕಾರಣ ಬಿಲ್ಡಪ್, ಬೇಕಂತಲೇ ಘರ್ಜಿಸುವ ಡೈಲಾಗ್ ಎಲ್ಲವೂ ನಾಟಕೀಯ. ನಾಯಕಿ ಸುಶ್ಮಿತಾ ಇಲ್ಲಿ ಟಿವಿ ರಿಪೋರ್ಟ್‌ರ್ ವಜ್ರ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ನಟನೆಯಲ್ಲಿ ಲವಲವಿಕೆಯಿದೆ. ವಿಲನ್ ಕಾಂಟ್ರಾಕ್ಟರ್ ಕಣ್ಣಯ್ಯ ಪಾತ್ರಧಾರಿ ರಾಜಾ ಬಾಲವಾಡಿ. ಉಳಿದಂತೆ ಅಲ್ಲಿ ಇಲ್ಲಿ ಬಂದು ಹೋಗುವ ಪಾತ್ರಗಳಿಗೆ ನೆನಪಲ್ಲಿ ಉಳಿಯುವಷ್ಟು ಪ್ರಾಮಖ್ಯತೆ ಸಿಕ್ಕಿಲ್ಲ ಬಿಡಿ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೆಯೇ ಮೊನಿಶ್ ಕುಮಾರ್ ಸಂಗೀತ ಒಂದೆರೆಡು ಹಾಡುಗಳಲ್ಲಿ ಮಾತ್ರ ಇಷ್ಟ. ಉಳಿದಿದ್ದು ಅಕಟಕಟಾ... 

ಚಿತ್ರ : ವಜ್ರ ತಾರಾಗಣ : ಪ್ರವೀಣ್ ಗಂಗಾ, ಸುಶ್ಮಿತಾ, ಬಾಲಾ ರಾಜವಾಡಿ, ಕಾರ್ತಿಕ್ ಗಿರಿ, ದಿನೇಶ್, ಸೂರ್ಯ ಕಿರಣ್ , ಪವನ್ ನಿರ್ದೇಶನ: ಪ್ರವೀಣ್ ಗಂಗಾ ಸಂಗೀತ : ಮೊನಿಶ್ ಕುಮಾರ್ ಛಾಯಾಗ್ರಹಣ : ಅರುಣ್ ಸುರೇಶ್ ರೇಟಿಂಗ್: ***

 

-ವಿಮರ್ಶೆ: ದೇಶಾದ್ರಿ ಹೊಸ್ಮನೆ