Asianet Suvarna News Asianet Suvarna News

ಬಂದಿದೆ ಹೊಸ ಚಿತ್ರ ’ಪರಸಂಗ’ ; ಹೇಗಿದೆ ಗೊತ್ತಾ?

ಈ ವಾರ ಪರಸಂಗ ಎನ್ನುವ ಹೊಸ ಸಿನಿಮಾವೊಂದು ತೆರೆ ಕಂಡಿದೆ. ವಿಭಿನ್ನವಾದ ಕಥಾ ಹಂದರವನ್ನು ಹೊಂದಿದೆ. ಟೈಟಲನ್ನು ಕೇಳಿ ಹೀಗೆ ಇರಬಹುದು ಎಂದು ಊಹಿಸಿಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ವಿಭಿನ್ನ ಕಥಾ ಹಂದರವನ್ನು ಹೊಂದಿದ ಪರಸಂಗವನ್ನು ಒಮ್ಮೆ ನೋಡಿ ಬನ್ನಿ. 

'Parasangha' Kannada Latest movie review

ಹಿರಿಯ ನಟ ಲೋಕೇಶ್ ಅಭಿನಯದ ‘ಪರಸಂಗದ ಗೆಂಡೆತಿಮ್ಮ’ ಚಿತ್ರದ ಹೆಸರನ್ನು ನೆನಪಿಸುವ ‘ಪರಸಂಗ- ಇದು ತಿಮ್ಮನ ಕತೆ’ ಎಂಬ ಈ ಚಿತ್ರದ ಹೆಸರಿನಲ್ಲಿಯೇ ಗಾಢ ವಿಷಾದವಿದೆ. ಹತ್ತಿರದವರಿಂದಲೇ ಆಗುವ ವಂಚನೆ, ಅಮಾಯಕನನ್ನು ಕಾಡುವ ಜನರ ಕ್ರೌರ್ಯ, ಹಳ್ಳಿಯ ಮಂದಿಗಾಗಿ ತ್ಯಾಗ, ಅಲ್ಲಲ್ಲಿ ತಮಾಷೆ ಪೋಲಿ ಡೈಲಾಗು, ಕೆಲಸವಿಲ್ಲದವರ ಉಡಾಫೆ ಎಲ್ಲವೂ ಇದ್ದರೂ ಅಂತಿಮವಾಗಿ ಈ ಚಿತ್ರವನ್ನು ವಿಭಿನ್ನವಾಗಿ ನಿಲ್ಲಿಸುವುದು ವಿಷಾದವೇ.

ತಿಮ್ಮ ಅಂದ್ರೆ ಮುಗ್ಧ. ಹಳ್ಳಿಯ ಜನರ ಒಳ್ಳೆಯತನಕ್ಕೆ ಮಿಡಿಯುವ ಜೀವ. ಅಷ್ಟು ಗುಣವಿದ್ದರೆ ಸಾಕು ಆ ವ್ಯಕ್ತಿ ನೋಯಲೇಬೇಕು. ಆ ನೋವನ್ನು ಇಡೀ ಚಿತ್ರದುದ್ದಕ್ಕೂ ಕಣ್ಣಲ್ಲೇ ವ್ಯಕ್ತಪಡಿಸುತ್ತಾ ಕಾಡುವುದು ಮಿತ್ರಾ. ಆರಂಭದಿಂದ ಅಂತ್ಯದವರೆಗೂ ಚಿತ್ರವನ್ನು ಆವರಿಸಿರುವ ಮಿತ್ರಾ ಪಾತ್ರ ಮೆಷಿನ್ನಿಗೆ ಕೊಟ್ಟ ಕಬ್ಬಿನಂತೆ. ಸಿಕ್ಕಸಿಕ್ಕವರೆಲ್ಲಾ ಹಿಂಡುತ್ತಾ ಹೋಗುತ್ತಾರೆ. ಆ ನೋವನ್ನು ಕಣ್ಣಲ್ಲೇ ವ್ಯಕ್ತಪಡಿಸುವುದು ಮಿತ್ರಾ ಕೆಲಸ. ಅವರು ತಿಮ್ಮನನ್ನು ಆವಾಹನೆ ಮಾಡಿಕೊಂಡಿ ದ್ದಾರೆ ಅನ್ನುವುದೇ ಅವರ ಹೆಗ್ಗಳಿಕೆ. ನಗುತ್ತಿರುವಾಗಲೂ ಪಾಪ ಅನ್ನಿಸುವಂತೆ ಮಾಡುವುದು ಅವರ ಶಕ್ತಿ.

ಒಬ್ಬ ತಿಮ್ಮನನ್ನು ಸಮಾಜ ಹೇಗೆ ಬಳಸಿಕೊಳ್ಳುತ್ತದೆ ಮತ್ತು ಅವನು ಅದರಿಂದ ಹೇಗೆಲ್ಲಾ ನೋಯುತ್ತಾನೆ ಅನ್ನುವುದನ್ನು ನಿರ್ದೇಶಕರು ಇಲ್ಲಿ ತೋರಿಸಲಿಕ್ಕೆ ಹೊರಟಿರುವುದರಿಂದ ಅವರು ತಿಮ್ಮನ ಪಾತ್ರಕ್ಕೆ ಭಾರಿ ಮಹತ್ವ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರಕತೆ ಹೆಣೆದಿದ್ದಾರೆ. ಅವರ ಗಮನ ತಿಮ್ಮ ಮಾತ್ರ ಆಗಿರುವುದರಿಂದ ದೃಶ್ಯಗಳನ್ನು ಹೆಣೆಯುವಾಗ ಬೇರೆ ಪಾತ್ರಗಳಿಗೆ ಘನತೆ ನೀಡುವಾಗ ಎಡವುತ್ತಾರೆ. ಮತ್ತೆ ಮತ್ತೆ ವಂಚನೆಗೆ ಮನಸ್ಸು ಹಾತೊರೆಯುವುದಕ್ಕೆ ಸಮರ್ಪಕ ಕಾರಣಗಳಿಲ್ಲದೇ ಇರುವುದು, ವಂಚಿಸಿದ ಜೀವಕ್ಕೆ ತಾನು ಹಾಗೆ ಮಾಡಬಾರದಿತ್ತು ಅನ್ನಿಸಲು ಸರಿಯಾದ ಸನ್ನಿವೇಶ ಇಲ್ಲದೇ ಇರುವುದೂ ಅದಕ್ಕೆ ಸಾಕ್ಷಿ.

ಕನ್ನಡಕ್ಕೆ ಇಂಥಾ ಕತೆ ಹೊಸತೇನೂ ಇಲ್ಲ. ಗ್ರಾಮೀಣ ಸೊಗಡು, ಮುಗ್ಧತೆ, ಮೋಸ, ವಂಚನೆ, ಜ್ಞಾನೋದಯ, ದುರಂತಗಳೇ ಜೀವಾಳವಾಗಿರುವ ಇಂಥಾ ಕತೆಗಳು ಕಾಡುತ್ತವೆ. ಹಾಗೆ ಕಾಡುವ ಗುಣ ಈ ಚಿತ್ರಕ್ಕಿದ್ದರೂ ಆ ತೀವ್ರತೆಯನ್ನು ಅನವಶ್ಯಕ ಡೈಲಾಗುಗಳು, ತೆಳುವಾದ ದೃಶ್ಯಗಳು ತಿಂದು ಹಾಕುತ್ತವೆ. ನಿರ್ದೇಶಕರು ಸುಖಾಸುಮ್ಮನೆ ಹಾಸ್ಯ ದೃಶ್ಯಗಳನ್ನು  ತುರುಕದೇ ಇರುವುದು ಭುವನದ ಭಾಗ್ಯ. ಈ ಚಿತ್ರವನ್ನು ಆಪ್ತವಾಗಿಸುವುದು ಹರ್ಷವರ್ಧನ್ ರಾಜ್  ಸಂಗೀತ. ಚಿತ್ರದುದ್ದಕ್ಕೂ ಅವರು ಅವರ ಪ್ರತಿಭೆಯನ್ನು ತೋರಿಸಿದ್ದಾರೆ.

ಮಿತ್ರಾ ಡಾನ್ಸ್ ಮಾಡುವಾಗಂತೂ ಹರ್ಷ ತಮ್ಮ ಹಿನ್ನೆಲೆ ಸಂಗೀತದಿಂದ ಮಿತ್ರರನ್ನು ಡಾನ್ಸರ್ ಮಾಡಿಬಿಡುತ್ತಾರೆ. ಚಿತ್ರದ ಪ್ರಮುಖ ಪಾತ್ರಧಾರಿ ಅಕ್ಷತಾ ಮಾದಕ ಮತ್ತು ಮೋಹಕ. ಮನೋಜ್ ಪುತ್ತೂರು ಕಟ್ಟುಮಸ್ತಾದ ಪ್ರತಿಭೆ. ಚಂದ್ರಪ್ರಭ ಟೈಮಿಂಗ್ ಸಕತ್. ವಿಷಾದವನ್ನು ಉಪ್ಪಿನಕಾಯಿಯಂತೆ ಚಪ್ಪರಿಸುವವರಿಗೆ ಪರಸಂಗ ಅಪ್ಪೆಮಿಡಿ ಉಪ್ಪಿನಕಾಯಿ. 

-ವಿಮರ್ಶೆ: ರಾಜೇಶ್ ಶೆಟ್ಟಿ 

Follow Us:
Download App:
  • android
  • ios