Asianet Suvarna News Asianet Suvarna News

ಮನೆಯ ಸ್ವಿಚ್‌: ನೀವು ತಿಳಿದಿರಲೇಬೇಕಾದ ವಿಷಯಗಳು

ಮನೆಯ ಅಂದ ಹೆಚ್ಚಿಸುವಲ್ಲಿ ಸ್ವಿಚ್ ಬೋರ್ಡ್‌ಗಳು ಮಹತ್ತರ ಪಾತ್ರ ವಹಿಸುತ್ತವೆ| ಈಗಿನ ಟ್ರೆಂಡ್‌ಗೆ ತಕ್ಕಂತೆ ವಿನೂತನ ಮಾದರಿಯ ಸ್ವಿಚ್‌ಗಳನ್ನ ಹಾಕಿಸಿದಾಗ ಮನೆಗೆ ಒಂದು ಶೋಭೆ ಬರುತ್ತದೆ| ಬೆಡ್‌ರೂಮ್‌ನಲ್ಲಿ ಬೆಡ್‌ ಎಲ್ಲಿ ಹಾಕಬೇಕು, ಬೆಡ್‌ಲ್ಯಾಂಪ್‌ಗಳನ್ನು ಎಲ್ಲಿಡಬೇಕು ಎಂದು ಮೊದಲೇ ನಿರ್ಧರಿಸಿ|

All you need to know about planning switches
Author
Bengaluru, First Published Jan 9, 2020, 4:39 PM IST

ನಿಮ್ಮ ಹಳೆ ಮನೆಯ ನವೀಕರಣವಾಗಿರಲಿ ಅಥವಾ ಹೊಸ ಮನೆಯ ನಿರ್ಮಾಣವಾಗಿರಲಿ, ಇಲೆಕ್ಟ್ರಿಕಲ್ ಕೆಲಸಗಳನ್ನು ಕಡೆಗಣಿಸುವ ಹಾಗಿಲ್ಲ. ಮನೆಯ ಅಂದ ಹೆಚ್ಚಿಸುವಲ್ಲಿ ಸ್ವಿಚ್ ಬೋರ್ಡ್‌ಗಳು ಕೂಡ ಮಹತ್ತರ ಪಾತ್ರ ವಹಿಸುತ್ತವೆ. ಹೊಸ ಮನೆಗೆ ಕಾಲಿಟ್ಟು, ಸ್ವಿಚ್ ಬೋರ್ಡ್‌ಗಳನ್ನು ನೋಡಿದಾಗ, ಅಯ್ಯೋ ಇಲೆಕ್ಟ್ರಿಕಲ್ ಪ್ಲಾನಿಂಗ್ ಮಾಡುವಾಗ ನಾನಿದ್ದಿದ್ದರೇ ಎಂದು ಮರುಗುವ ಪ್ರಮೇಯ ಬರಬಾರದು.

ಈಗಿನ ಟ್ರೆಂಡ್‌ಗೆ ತಕ್ಕಂತೆ ವಿನೂತನ ಮಾದರಿಯ ಸ್ವಿಚ್‌ಗಳನ್ನ ಹಾಕಿಸಿದಾಗ ಮನೆಗೆ ಒಂದು ಶೋಭೆ ಬರುತ್ತದೆ. ಈಗಿನ ಕಾಲದ ವಿದ್ಯುತ್ ಸ್ವಿಚ್‌ಗಳು ತರಹೇವಾರಿ ಮಾದರಿಯಲ್ಲಿ ಲಭ್ಯವಿದೆ.  ಪ್ರೀ-ಸೆಟ್ಟಿಂಗ್ ಮಾಡಬಹುದಾದ ಸ್ವಿಚ್‌ಗಳಿಂದ ಹಿಡಿದು, ಮನೆಗೆ ಯಾರಾದರೂ ಪ್ರವೇಶಿಸಿದಾಗ ಬಲ್ಬ್‌ಗಳು ಸ್ವಯಂಚಾಲಿತವಾಗಿ  ಆನ್ ಆಗುವ ವ್ಯವಸ್ಥೆಗಳು ಇವೆ.

ಮನೆಯ ಎಲ್ಲಾ ಲೈಟ್‌ಗಳನ್ನು ಒಂದೇ ಕಡೆಯಿಂದ ನಿಯಂತ್ರಿಸುವ ಸೆಂಟ್ರಲ್ ಕಂಟ್ರೋಲ್ ಸಿಸ್ಟಮ್‌ನಿಂದ ಹಿಡಿದು, ಕೂತಲ್ಲಿಂದ ಕಂಟ್ರೋಲ್ ಮಾಡೋ  ಇನ್ಫ್ರಾರೆಡ್ ಅಥವಾ ವೈರ್‌ಲೆಸ್‌ ರಿಮೋಟ್‌  ಕಂಟ್ರೋಲ್ ವ್ಯವಸ್ಥೆಯೂ ಲಭ್ಯವಿದೆ. ಇಂತಹ ಟೆಕ್ನಾಲಜಿ  ನಿಮ್ಮ ಶ್ರಮವನ್ನು ಕಡಿಮೆ ಮಾಡುತ್ತವೆಯಲ್ಲದೇ, ವಿದ್ಯುತ್ ಉಳಿತಾಯ ಮಾಡಲು ಕೂಡಾ ಸಹಕಾರಿಯಾಗಿವೆ.

ಹೊಸ ಪೀಳಿಗೆಯ ಈ ಸ್ವಿಚ್‌ಗಳನ್ನು ಕೀ, ಟೈಮರ್ಸ್‌ ಮತ್ತು ಫ್ಲ್ಯಾಟ್ ರಾಕರ್ಸ್‌ ಮೂಲಕವೂ ನಿಯಂತ್ರಿಸಬಹುದು. ಮನೆ ಹೊರಾಂಗಣಕ್ಕಾಗಿ ಜಲನಿರೋಧಕ ಸ್ವಿಚ್‌ಗಳೂ ಕೂಡಾ ಲಭ್ಯ ಇವೆ. ಬೆಳಕನ್ನೇ ಸೆನ್ಸ್ ಮಾಡಿ ಕಾರ್ಯಾಚರಿಸುವ ಸ್ವೀಚ್‌ಗಳೂ ಇವೆ.  ವಿದ್ಯುತ್‌ ಪ್ರವಾಹದ ಪ್ರಮಾಣವನ್ನು ನಿಯಂತ್ರಿಸುವ ಡಿಮ್ಮರ್‌ಗಳನ್ನು ಟಾಗರ್‌, ಡಯಲ್, ಸ್ಲೈಡ್‌, ಸ್ವಿಚ್‌, ಟಚ್‌ ಪ್ಯಾಡ್‌ ಅಥವಾ ಬಟನ್ ಮೂಲಕವೂ ನಿಯಂತ್ರಿಸಬಹುದಾಗಿದೆ.

ಸ್ವಿಚ್‌ಗಳ ಸ್ಥಳ ಮತ್ತು ಸಂಖ್ಯೆ- ಮನೆಯಲ್ಲಿ ವಿದ್ಯುತ್ ಸ್ವಿಚ್‌ಗಳನ್ನು ಅಳವಡಿಸುವಾಗ ಪ್ರಮುಖವಾಗಿ ಪರಿಗಣಸಲೇಬೇಕಾದ ಅಂಶಗಳು.  ಅಡುಗೆ ಮನೆಯಲ್ಲಿ ಮಿಕ್ಸರ್,  ಮತ್ತಿತರ ಇಲೆಕ್ಟ್ರಿಕಲ್ ಅಪ್ಲಯನ್ಸ್‌ಗಳಿಗಾಗಿ ಕಡಿಮೆ ಸಾಮರ್ಥ್ಯದ ಸ್ವಿಚ್‌ಗಳನ್ನು ಅಳವಡಿಸಿದರೆ,  ರೆಫ್ರಿಜರೇಟರ್ ಮತ್ತು ಮೈಕ್ರೊವೇವ್‌ಗಾಗಿ ಹೆಚ್ಚಿನ ಸಾಮರ್ಥ್ಯದ ಸ್ವಿಚ್‌ಗಳನ್ನು ಹಾಕಬೇಕಾಗುತ್ತದೆ. ಇಡೀ ರಾತ್ರಿ ಆನ್‌ ಇದ್ದರೂ, ಯಾವುದೇ ಖರ್ಚು ಇರದ ಎಲ್‌ಇಡಿ ಲೈಟ್ಸ್‌ಗಳನ್ನು ಕೂಡಾ ಅಳವಡಿಸಬಹುದು.

ಇನ್ನು ಲಿವಿಂಗ್‌ ರೂಮ್‌ಗೆ ಬಂದಾಗ, ಪ್ರತಿ ಗೋಡೆಯ ಮಧ್ಯೆ ಹಾಗೂ ಮೂಲೆಗಳಲ್ಲಿಯೂ ಸ್ವಿಚ್‌ಗಳನ್ನು ಹಾಕುವ ಬಗ್ಗೆ ಗಮನಹರಿಸಿ. ಇನ್ನು ಗೋಡೆಯಲ್ಲಿ ಟೀವಿ ಫಿಕ್ಸ್ ಮಾಡುವ ಯೋಚನೆಯಿದ್ದರೆ, ಕೇಬಲ್‌ಗಳು ಕಾಣದಂತೆ, ಅಥವಾ ಕಿರಿಕಿರಿಯಾಗುವುದನ್ನು ತಪ್ಪಿಸಲು ಟೀವಿ ಹಿಂದೆಯೇ ಸ್ವಿಚ್ ಇರಲಿ. ಕಾಫಿ ಟೇಬಲ್‌ ಮೇಲೆ ಆಲಂಕಾರಿಕ ವಸ್ತುಗಳನ್ನು ಪ್ರದರ್ಶನಕ್ಕಿಡಬೇಕಾದರೆ,  ನೆಲದೊಳಗಡೆ ಸ್ವಿಚ್‌ಗಳನ್ನು ಹಾಕಿಸಿ.  ಕ್ರಿಸ್‌ಮಸ್ ಟ್ರೀಯನ್ನು ಸಿಂಗರಿಸುವ ಇರಾದೆ ಇದ್ದರೆ, ಅದಕ್ಕೆ ಸೂಕ್ತ ಸ್ಥಳ ಗುರುತಿಸಿ ಸ್ವಿಚ್ ಹಾಕಿಸಿಕೊಳ್ಳಿ. ಹೊಸ ಮನೆಯನ್ನು ಕಟ್ಟುವಾಗ,  ದೂರದೃಷ್ಟಿ ಇರಲಿ, ನಿಮ್ಮ ಅನುಕೂಲ, ಸೌಲಭ್ಯ ಗಮನದಲ್ಲಿರಲಿ.

ಇನ್ನು ಬಾತ್‌ರೂಮ್‌ ಬಗ್ಗೆ ಹೇಳೋದಾದರೆ, ಇಲ್ಲಿ  ಜಿಎಫ್‌ಐ ಪ್ಲಗ್‌ಗಳನ್ನೇ ಅಳವಡಿಸಿ. ಮೊದಲು ಸ್ವಿಚ್‌ಗೆ ಪ್ರಶಸ್ತವಾದ ಸ್ಥಳವನ್ನು ಗುರುತಿಸಿ. ಉಪಕರಣಗಳನ್ನು ಇಡೋ ಜಾಗದ ಹತ್ತಿರದಲ್ಲೇ ಸ್ವಿಚ್ ಪಾಯಿಂಟ್‌ ಇದ್ರೆ ಚೆನ್ನ. ಬಾತ್‌ರೂಂನಲ್ಲಿ ನೇತಾಡುವ ವೈರ್‌ಗಳು ಬರೇ ಕಿರಿಕಿರಿಯಲ್ಲ,  ಅಪಾಯಕಾರಿಯೂ ಹೌದು.  

ಬೆಡ್‌ರೂಮ್‌ನಲ್ಲಿ ಬೆಡ್‌ ಎಲ್ಲಿ ಹಾಕಬೇಕು, ಬೆಡ್‌ಲ್ಯಾಂಪ್‌ಗಳನ್ನು ಎಲ್ಲಿಡಬೇಕು ಎಂದು ಮೊದಲೇ ನಿರ್ಧರಿಸಿ, ಸೂಕ್ತವಾದ ಸ್ಥಳದಲ್ಲಿ ಪ್ಲಗ್‌ಗಳನ್ನು ಅಳವಡಿಸಿ.  ವೈರ್‌ಗಳು ಕಾಣದಂತೆ ಇರಬೇಕಾದ್ರೆ, ಪ್ಲಗ್‌ಗಳು ಕೆಳ ಮಟ್ಟದಲ್ಲಿರಲಿ. 3-ವೇ ಸ್ವಿಚ್‌ಗಳನ್ನು ಅಳವಡಿಸಿದರೆ ಸೂಕ್ತ. ಬಾಗಿಲ ಬಳಿ ಒಂದಾದರೆ, ಇನ್ನೆರಡು ಮಂಚದ ಎರಡೂ ಬದಿಗಳಲ್ಲಿರಲಿ.

ಮನೆಯಲ್ಲಿ ಸ್ವಿಚ್‌ಗಳನ್ನು ಅಳವಡಿಸುವಾಗ ನಿಮ್ಮ ರಜಾದಿನಗಳ ದಿನಚರಿ,  ಪಾರ್ಟಿ, ಸಮಾರಂಭಗಳು ಕೂಡಾ ಗಮನದಲ್ಲಿರಲಿ.   ಅವುಗಳಿಗೆ ತಕ್ಕಂತೆ  ಸ್ವಿಚ್-ಪ್ಲಗ್‌ಗಳನ್ನು ಹಾಕಿಸಿ. ಮನೆಯ ಲೈಟ್ಸ್‌ಗಳನ್ನು ಇನ್ನೂ ಸುಲಭವಾಗಿ ನಿಯಂತ್ರಿಸಬೇಕಾದರೆ, ಟೈಮರ್ಸ್‌ಗಳನ್ನು ಬಳಸಿ.
 

Follow Us:
Download App:
  • android
  • ios