ಕಾಲೇಜು ಪ್ರಾರಂಭಕ್ಕೆ ಡೇಟ್ ಫಿಕ್ಸ್: 2020-21ರ ಶೈಕ್ಷಣಿಕ ಸಾಲಿನ ಪರೀಕ್ಷೆ ದಿನಾಂಕ ನಿಗದಿ
ಕೊರೋನಾ ಕಾರಣದಿಂದ ಇಡೀ ಶೈಕ್ಷಣಿಕ ಕ್ಷೇತ್ರವೇ ನೆಲ ಕಚ್ಚಿದ್ದು, ಇದನ್ನು ಹಂತ-ಹಂತವಾಗಿ ಮೇಲೆತ್ತಲ್ಲು ಯುಜಿಸಿ 2020-21ರ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.
ನವದೆಹಲಿ, (ಸೆ.22): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಶೈಕ್ಷಣಿಕ ವರ್ಷದ ಕಾಲೇಜು ತರಗತಿ ನವೆಂಬರ್ 1ರಿಂದ ಶುರುವಾಗಲಿದೆ. ಈ ಸಂಬಂಧ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿಯಂತೆ ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನವೆಂಬರ್ 1ರಿಂದ ಕಾಲೇಜು ತರಗತಿಗಳು ಪ್ರಾರಂಭವಾಗಲಿವೆ.
8 ರಾಜ್ಯಗಳಲ್ಲಿ ಶಾಲೆ ಶುರು, 6 ತಿಂಗಳ ಬಳಿಕ ವಿದ್ಯಾರ್ಥಿಗಳು ತರಗತಿಗೆ!
ಇನ್ನು ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ನಡುವೆ ನಡೆಯಲಿದೆ. 2ನೇ ಸೆಮಿಸ್ಟರ್ ಏಪ್ರಿಲ್ 5ರಿಂದ ಆರಂಭವಾಗಲಿದ್ದು, ಪರೀಕ್ಷೆಗಳು ಆಗಸ್ಟ್ನಲ್ಲಿ ನಡೆಯಲಿವೆ. ಹಾಗೆ, ಮೊದಲ ವರ್ಷದ ಕೋರ್ಸ್ ಆಗಸ್ಟ್ 30ಕ್ಕೆ ಪೂರ್ಣಗೊಳ್ಳಲಿದೆ.
ಇನ್ನು ಕೊರೋನಾ ಕಾರಣದಿಂದ ಹಣಕಾಸು ತೊಂದರೆ ಅನುಭವಿಸುತ್ತಿರುವ ಪಾಲಕರ ಅನುಕೂಲಕ್ಕಾಗಿ, ಅವರೇನಾದರೂ ವಿದ್ಯಾರ್ಥಿಗಳ ಅಡ್ಮಿಷನ್ ಕ್ಯಾನ್ಸಲ್ ಮಾಡಿದರೆ ಅಥವಾ ಬೇರೆ ಕಾಲೇಜುಗಳಿಗೆ ಪ್ರವೇಶ ಬಯಸಿದರೆ, ಅವರು ಕಟ್ಟಿರುವ ಪೂರ್ಣ ಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂದಿರುಗಿಸಬೇಕು. ಆದರೆ, ಈ ವಿನಾಯಿತಿ ನವೆಂಬರ್ 30ರ ತನಕ ಮಾತ್ರ ಲಭ್ಯ ಎಂದು ಮಾರ್ಗಸೂಚಿ ತಿಳಿಸಿದೆ. ಇದನ್ನು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.