SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಅವರಿಗಾಗಿ ಐಟಿಐ ಸೇರಿದಂತೆ ಹಲವಾರು ತರಬೇತಿ ಸಂಸ್ಥೆಗಳು ಉದ್ಯೋಗಾವಕಾಶದ ಬಾಗಿಲು ತೆರೆದಿವೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಬಹುದು.

ಸೋಮರಡ್ಡಿ ಅಳವಂಡಿ ಕೊಪ್ಪಳ

ಈಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಗೆ ಈ ವರ್ಷ ಬಂಪರ್ ಫಲಿತಾಂಶ ಬಂದಿದೆ. ಇದರಲ್ಲಿ ಫೇಲ್‌, ಜಸ್ಟ್‌ ಪಾಸಾದವರು ಧೃತಿಗೆಡುವ ಅಗತ್ಯವಿಲ್ಲ, ಅವರಿಗೂ ಅತ್ಯುತ್ತಮ ಅವಕಾಶ ಇದೆ.

ಹೀಗಾಗಿ ಕಡಿಮೆ ಅಂಕ ಬಂದಿದೆ ಎಂದು ಕೊರಗುತ್ತಾ ಕುಳಿತುಕೊಳ್ಳುವ ಬದಲು ಅತ್ಯುತ್ತಮ ಅವಕಾಶ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಯಶಸ್ವಿಯಾಗಲು ಸಾವಿರಾರು ಮಾರ್ಗಗಳಿವೆ.

ರಾಜ್ಯಾದ್ಯಂತ 1500 ಐಟಿಐ ಕಾಲೇಜು

ರಾಜ್ಯಾದ್ಯಂತ 1500 ಐಟಿಐ ಕಾಲೇಜು ಇದ್ದು, ಇದರಲ್ಲಿ 270 ಸರ್ಕಾರಿ, 190 ಅನುದಾನಿತ ಹಾಗೂ ಉಳಿದವು ಖಾಸಗಿಯಾಗಿವೆ. ಇಲ್ಲಿ ಜಸ್ಟ್ ಪಾಸ್‌ ಮತ್ತು ಫೇಲಾದವರಿಗೂ ಕೋರ್ಸ್ ಇವೆ. ಅಷ್ಟೇ ಅಲ್ಲ ಬೆಂಗಳೂರಿನ ಟೋಯೋಟಾ ಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.50 ರಷ್ಟು ಅಂಕ ಪಡೆದವರಿಗೆ ಉಚಿತ ವಸತಿ, ಊಟದೊಂದಿಗೆ ತರಬೇತಿ ಶಿಕ್ಷಣ ನೀಡುತ್ತದೆ. ನಂತರ ಉದ್ಯೋಗಾವಕಾಶ ನೀಡುತ್ತದೆ. ಇಂತಹ ನೂರಾರು ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದಿದ್ದರೂ ಅವಕಾಶ ನೀಡಲು ತರಬೇತಿ ನಡೆಸುತ್ತಿವೆ. 

ಐಟಿಐ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರತಿ ಕಾಲೇಜಿನಲ್ಲಿಯೂ ಜೆಸ್ಟ್ ಪಾಸ್ ಆದವರಿಗೆ ವಿವಿಧ 13 ತರಬೇತಿ ಕೋರ್ಸ್ ಇರುತ್ತವೆ. ಫೇಲಾದವರಿಗೆ ಎರಡು ಕೋರ್ಸ್‌ಗಳಿವೆ. ಐಟಿಐ ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ತಾಂತ್ರಿಕ ಶಿಕ್ಷಣಾಧಾರಿತ ಉದ್ಯೋಗವಕಾಶ ಸಹ ಪಡೆಯಬಹುದಾಗಿದೆ. ರೇಲ್ವೆ, ರಕ್ಷಣಾ, ಬಿಎಚ್ ಇಎಲ್, ಎಸ್ಎಐಎಲ್, ಎಚ್ಎಎಲ್ ಮತ್ತು ರಾಜ್ಯದ ವಿದ್ಯುತ್ ಮಂಡಳಿಗಳಲ್ಲಿ ತಾಂತ್ರಿಕ ಸಹಾಯಕ ಮತ್ತು ಟೆಕ್ನಿಶಿಯನ್ ಆಗಿ ಕೆಲಸ ಪಡೆಯಬಹುದು. ಇದಲ್ಲದೆ ಖಾಸಗಿ ವಲಯದಲ್ಲಿಯೂ ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಮ್ಯಾನುಪ್ಯಾಕ್ಟರಿಂಗ್, ಕೈಗಾರಿಕೆಗಳಲ್ಲಿ ಪಿಟ್ಟರ್, ಆಟೋ ಮೆಕ್ಯಾನಿಕ್ ಸೇರಿದಂತೆ ಅನೇಕ ಅವಕಾಶಗಳು ಇವೆ.

ಐಟಿಐ ಮುಗಿಸಿದ ಮೇಲೆ ಅಪ್ರೆಂಟಿಸ್ ನಂತರ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ 5 ವರ್ಷ ಸೇವೆ ಮಾಡಿದವರನ್ನೇ ಐಟಿಐ ಕಾಲೇಜುಗಳಿಗೆ ಜೂನಿಯರ್ ಟ್ರೇನಿಂಗ್ ಆಫೀಸರ್ ಎಂದು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಳ್ಳುತ್ತದೆ.

ಎಸ್ಸೆಸ್ಸೆಲ್ಸಿ ಫೇಲಾದವರಿಗೆ ಸೀಟ್ ಮೆಟಲ್ ವರ್ಕರ್ ಮತ್ತು ವೆಲ್ಡರ್ ಎನ್ನುವ ಎರಡು ಕೋರ್ಸ್ ಇವೆ. ಈ ಕೋರ್ಸ್ ನಲ್ಲಿ ಐಟಿಐ ಪೂರ್ಣಗೊಳಿಸಲು ಅವಕಾಶ ಇದೆ. ನಂತರ ಡಿಪ್ಲೋಮಾ ಮಾಡಲು ಅರ್ಹತೆ ಪಡೆಯುತ್ತಾರೆ.

ಹೀಗಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿದೆ ಮತ್ತು ಫೇಲಾಗಿದ್ದೇವೆ ಎಂದು ಧೃತಿಗೆಡದೆ ಇಂತಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಧೃತಿಗೆಡುವ ಅಗತ್ಯವೇ ಇಲ್ಲ

ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದೇವೆ, ಕಡಿಮೆ ಅಂಕ ಬಂದಿವೆ ಎಂದು ಧೃತಿಗೆಡುವ ಅಗತ್ಯವೇ ಇಲ್ಲ. ಅವರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಅವಕಾಶ ನೀಡುತ್ತದೆ. ಕೋರ್ಸ್ ಸಹ ಇವೆ. ಐಟಿಐಯಲ್ಲಿ ಪಾಸಾದ ಮತ್ತು ಫೇಲಾದವರಿಗೂ ಅವಕಾಶ ಉಂಟು ಎಂದು ಕುಕನೂರ ಐಟಿಐ ಜೂನಿಯರ್ ಟ್ರೇನಿಂಗ್ ಆಫೀಸರ್ ರಾಜೇಶ ಬಳ್ಳಾರಿ ತಿಳಿಸಿದ್ದಾರೆ.