ಸರ್ಕಾರದ ಯಡವಟ್ಟಿನಿಂದ ಸಿಗದ ಬಸ್‌ ಪಾಸ್‌: ಸಂಕಷ್ಟದಲ್ಲಿ ವಿದ್ಯಾರ್ಥಿಗಳು..!

ಆಧಾರ್‌- ಮೊಬೈಲ್‌ ನಂಬರ್‌ ಲಿಂಕ್‌ ತಂದಿಟ್ಟ ಫಜೀತಿ| ವಾಸಸ್ಥಳ ವಿಳಾಸಕ್ಕೆ ಆಧಾರ ಕಾರ್ಡ್‌ ದೃಢೀಕರಣವೇ ಬಿಕ್ಕಟ್ಟಿಗೆ ಕಾರಣ| ಸೇವಾ ಸಿಂಧು ಆನ್‌ಲೈನ್‌ನಲ್ಲಿ ಅರ್ಜಿಗಳ ತಿರಸ್ಕಾರ| ವಿದ್ಯಾರ್ಥಿಗಳು ಶಾಲಾ- ಕಾಲೇಜಿನಿಂದಲೇ ದೂರ ಉಳಿಯುವ ಸಾಧ್ಯತೆ| ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪರಿಹರಿಸಬೇಕಿದೆ| 

Students Faces Problems for Government Decision in Koppal grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.24): ಬಸ್‌ ಪಾಸ್‌ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯ ಮತ್ತು ಅದಕ್ಕೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿರಬೇಕು ಎನ್ನುವ ಷರತ್ತು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಪಡೆಯಲು ಅನೇಕ ಸಮಸ್ಯೆಗಳನ್ನು ತಂದಿಟ್ಟಿದೆ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಬಸ್‌ ಪಾಸ್‌ನಿಂದಲೇ ವಂಚಿತರಾಗುತ್ತಿದ್ದಾರೆ.

ಸರ್ಕಾರದ ಈ ಕ್ರಮದಿಂದ ಈಗ ಶೇ. 50ರಷ್ಟು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ ದೊರಕದು ಎಂದು ಅಂದಾಜಿಸಲಾಗಿದೆ. ನಿತ್ಯವೂ ನೂರಾರು ರುಪಾಯಿ ಬಸ್‌ ಚಾರ್ಜ್‌ ಕೊಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ- ಕಾಲೇಜಿನಿಂದಲೇ ದೂರ ಉಳಿದರೂ ಅಚ್ಚರಿ ಇಲ್ಲ. ಫೆ. 28ರ ವರೆಗೂ ಎಲ್ಲ ವಿದ್ಯಾರ್ಥಿಗಳಿಗೆ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಿ, ಸುತ್ತೋಲೆಯನ್ನು ನೀಡಿರು​ವುದರಿಂದ ಅಲ್ಲಿಯವರೆಗೂ ವಿದ್ಯಾರ್ಥಿಗಳು ಸಮಸ್ಯೆಯಿಂದ ಪಾರಾಗಿದ್ದಾರೆ.

ಏನಿದು ಸಮಸ್ಯೆ?:

ಬಸ್‌ ಪಾಸ್‌ ಪಡೆಯುವ ವೇಳೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿರುವ ಆಧಾರ್‌ ಕಾರ್ಡ್‌ ಇರಬೇಕು ಎನ್ನುವ ಷರತ್ತು ಹಾಗೂ ಆಧಾರ ಕಾರ್ಡ್‌ನಲ್ಲಿಯೇ ವಿಳಾಸ ಮತ್ತು ಬಸ್‌ ಪಾಸ್‌ ಪಡೆಯುತ್ತಿರುವ ವಿಳಾಸಕ್ಕೂ ತಾಳೆ ನೋಡುತ್ತಿರುವುದು ಸಮಸ್ಯೆಯಾಗಿದೆ. ಬಹುತೇಕ ವಿದ್ಯಾರ್ಥಿಗಳ ಆಧಾರ ಕಾರ್ಡ್‌ ವಿಳಾಸಕ್ಕೂ ಮತ್ತು ಈಗ ಶಾಲಾ​- ಕಾಲೇಜಿಗೆ ಓಡಾಡುತ್ತಿರುವ ವಿಳಾಸಕ್ಕೂ ವ್ಯತ್ಯಾಸವಿದೆ. ಹೀಗಾಗಿ ಸೇವಾ ಸಿಂಧು ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಿರಸ್ಕರಿ​ಸಲಾಗಿದೆ. ಕೇಳಿದರೆ ನಿಮ್ಮ ಆಧಾರ್‌ ಕಾರ್ಡ್‌ ವಿಳಾಸ ಮತ್ತು ಈಗ ಪಾಸ್‌ ಬೇಡಿಕೆ ಸಲ್ಲಿಸಿರುವ ವಿಳಾಸವೇ ಬೇರೆ ಇದೆ. ಹೀಗಾಗಿ ತಿರಸ್ಕರಿ​ಸಲಾಗಿದೆ ಎಂದು ಹೇಳಿ ಕೈ ಚೆಲ್ಲುತ್ತಿದ್ದಾರೆ.

IIT ವಿದ್ಯಾರ್ಥಿಗಳಿಗೆ 'ಸೆಲ್ಫ್ ತ್ರೀ' ಫಾರ್ಮುಲಾ ಕೊಟ್ಟ ಪಿಎಂ ಮೋದಿ!

ಗಂಭೀರ ಸಮಸ್ಯೆ:

ಶಾಲೆ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಎಲ್ಲರೂ ತಮ್ಮ ಮನೆಯಲ್ಲಿ ಇರ​ಲ್ಲ. ಸಂಬಂಧಿಕರ ಮನೆ, ಇಲ್ಲವೇ ತಂದೆ- ತಾಯಿ ದುಡಿಮೆಗೆಂದು ಇರುವ ಸ್ಥಳಗಳಲ್ಲಿ ವಾಸ್ತವ್ಯ ಮಾಡಿ, ಶಾಲೆ, ಕಾಲೇಜಿಗೆ ಹೋಗುತ್ತಾರೆ. ಆದರೆ, ಇವರ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಮಾತ್ರ ತಮ್ಮ ಶಾಶ್ವತ ನೆಲೆ ಇರುತ್ತದೆ. ಈಗ ಅವರೆಲ್ಲರಿಗೂ ಬಸ್‌ ಪಾಸ್‌ ದೊರೆಯದಂತಾಗಿದೆ.
ತಳಕಲ್‌ ಗ್ರಾಮದ ವಿದ್ಯಾರ್ಥಿನಿ ಮುನಿರಾಬಾದ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾರೆ. ಅವರ ತಂದೆ- ತಾಯಿ ಈಗ ಹುಲಿಗಿಯಲ್ಲಿ ಹೋಟೆಲ್‌ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ, ಅವರ ಆಧಾರ್‌ ಕಾರ್ಡ್‌ನ​ಲ್ಲಿ ತಮ್ಮೂರಿನ ವಿಳಾಸ ಇದೆ. ಹೀಗಾಗಿ ಪಾಸ್‌ ದೊರೆತಿಲ್ಲ.

ವಿದ್ಯಾರ್ಥಿನಿಯೊಬ್ಬರು ಬಳ್ಳಾರಿ ಜಿಲ್ಲೆಯವರು. ಇಲ್ಲಿ ಬಿಇಡಿ ಓದುವುದಕ್ಕಾಗಿ ಬಂದು ಕೊಪ್ಪಳ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನೆಲೆ​ಸಿದ್ದಾರೆ. ಈಗ ಮುನಿರಾಬಾದ್‌ ಕಾಲೇಜಿಗೆ ನಿತ್ಯವೂ ಓಡಾಡಬೇಕು. ಆದರೆ, ಈ ವಿದ್ಯಾರ್ಥಿನಿಯ ಆಧಾರ್‌ ಕಾರ್ಡ್‌ ವಿಳಾಸ ಬಳ್ಳಾರಿ ಜಿಲ್ಲೆಯಲ್ಲಿರುವುದರಿಂದ ಬಸ್‌ ಪಾಸ್‌ ತಿರಸ್ಕರಿ​ಸ​ಲಾ​ಗಿದೆ. ಶೇ. 50ರಷ್ಟುಬಸ್‌ಪಾಸ್‌ಗಳು ತಿರಸ್ಕಾರವಾಗಿದ್ದು, ವಿದ್ಯಾರ್ಥಿಗಳು ಶಾಲಾ- ಕಾಲೇಜಿನಿಂದಲೇ ದೂರ ಉಳಿಯುವ ಸಾಧ್ಯತೆ ಇದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪರಿಹರಿಸಬೇಕಿದೆ.

ನಮ್ಮ ಕಾಲೇಜಿನಿಂದಲೇ ಸುಮಾರು 20 ವಿದ್ಯಾರ್ಥಿಗಳು ಬಸ್‌ಪಾಸ್‌ಗೆ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿ​ಸಿ​ದ್ದಾ​ರೆ. ಆದರೆ, ಇದರಲ್ಲಿ ವಿಳಾಸ ಹೊಂದಾಣಿಕೆಯಾಗುತ್ತಿಲ್ಲ ಎಂದು 15 ತಿರಸ್ಕೃತವಾಗಿವೆ ಎಂದು ವಿಜಯನಗರ ಕಾಲೇಜಿನ ಉಪನ್ಯಾಸಕ ಅಂಬಳಿ ವೀರೇಂದ್ರ ತಿಳಿಸಿದ್ದಾರೆ.

ನಾವು ಎಲ್ಲಿಯೋ ಸಂಬಂಧಿಕರ ಬಳಿ ಆಶ್ರಯ ಪಡೆದು ಓದುತ್ತಿದ್ದೇವೆ ಎಂದರೂ ಅದಕ್ಕೂ ಅವಕಾಶ ಇಲ್ಲ ಎಂದರೇ ಹೇಗೆ? ನನ್ನ ಆಧಾರ ಕಾರ್ಡ್‌ ವಿಳಾಸ ಮತ್ತು ಈಗಿರುವ ವಿಳಾಸಕ್ಕೂ ವ್ಯತ್ಯಾಸವಿದೆ ಎಂದು ಬಸ್‌ ಪಾಸ್‌ ತಿರಸ್ಕರಿ​ಸಿದರೆ ಹೇಗೆ? ಎಂದು ವಿದ್ಯಾರ್ಥಿನಿ ಭುವನೇಶ್ವರಿ ಹೇಳಿದ್ದಾರೆ. 

ಸರ್ಕಾರದ ಯಡವಟ್ಟಿನಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆಧಾ​ರ್‌ ಲಿಂಕ್‌ ಮತ್ತು ಅದಕ್ಕಾಗಿ ವಿಳಾಸ ಪರಿಶೀಲನೆಯಿಂದ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios