Bangalore University ಕುಲಪತಿ ನೇಮಕ ರದ್ದಾದರೂ ಮುಗಿಯದ ಗೊಂದಲ
* ಇನ್ನೂ ವಿವಿ ತಲುಪದ ಹೈಕೋರ್ಟ್‌ನ ಆದೇಶ ಪ್ರತಿ
* ಸರ್ಕಾರ, ರಾಜ್ಯಪಾಲರಿಂದ ಸಿಗದ ನಿರ್ದೇಶನ
* ಗೊಂದಲದಲ್ಲಿ ವಿವಿ ಅಧಿಕಾರಿಗಳು
ಬೆಂಗಳೂರು(ಮಾ.19): ಬೆಂಗಳೂರು ವಿಶ್ವವಿದ್ಯಾಲಯ(Bangalore University) ಕುಲಪತಿ ಸ್ಥಾನಕ್ಕೆ ಪ್ರೊ.ವೇಣುಗೋಪಾಲ್ ಅವರನ್ನು ನೇಮಕ ಆದೇಶವನ್ನು ಹೈಕೋರ್ಟ್(High court) ರದ್ದು ಮಾಡಿ ಎರಡು ದಿನ ಕಳೆದರೂ ಮುಂದೇನು ಮಾಡಬೇಕೆಂದು ಸರ್ಕಾರ ಮತ್ತು ರಾಜ್ಯಪಾಲರಿಂದ ಯಾವುದೇ ನಿರ್ದೇಶನ ಬಾರದ ಹಿನ್ನೆಲೆಯಲ್ಲಿ ವಿವಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.
ನ್ಯಾಯಾಲಯದ ಆದೇಶವಾದ ತಕ್ಷಣದಿಂದಲೇ ಕುಲಪತಿ(Chancellor) ಹುದ್ದೆ ಅಧಿಕೃತವಾಗಿ ಖಾಲಿಯಾಗಿದೆಯಾ ಅಥವಾ ಕೋರ್ಟ್ ಆದೇಶದ ಮೇಲೆ ರಾಜ್ಯಪಾಲರಿಂದ(Governor) ಏನಾದರೂ ನಿರ್ದೇಶನಗಳಾಗಬೇಕಾ ಎಂಬ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಈ ಅನಿಶ್ಚಿತತೆಯ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಕೋರಿ ಅಧಿಕಾರಿಗಳು ಸರ್ಕಾರಕ್ಕೆ(Government of Karnataka) ಪತ್ರ ಬರೆದಿದ್ದಾರೆ.
Bangalore University: ಬೆಂಗಳೂರು ವಿವಿ ಫೈಟ್ ಗೌರ್ನರ್ ಅಂಗಳಕ್ಕೆ..!
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿವಿಯ ಕುಲಸಚಿವ ಪ್ರೊ.ಕೊಟ್ರೇಶ್ ಅವರು, ಇದುವರೆಗೂ ನಮಗೆ ಹೈಕೋರ್ಟ್‌ನ ಅಧಿಕೃತ ಆದೇಶವೂ ಬಂದಿಲ್ಲ. ಈ ಸಂಬಂಧ ಸರ್ಕಾರದಿಂದ ಆಗಲಿ, ರಾಜ್ಯಪಾಲರಿಂದ ಆಗಲಿ ಯಾವುದೇ ನಿರ್ದೇಶನಗಳೂ ಬಂದಿಲ್ಲ. ಆದರೂ, ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕುಲಪತಿ ಅವರ ನೇಮಕಾತಿ ರದ್ದುಮಾಡಿರುವ ನ್ಯಾಯಾಲಯದ ಸುದ್ದಿ, ಮಾಹಿತಿಯನ್ನು ಗಮನಿಸಿ ಸರ್ಕಾರಕ್ಕೆ ಪತ್ರ ಬರೆದು ಮಾರ್ಗದರ್ಶ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ತಜ್ಞರು(Education Experts) ಹೇಳುವ ಪ್ರಕಾರ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂ.ವಿವಿ ಕುಲಪತಿ ಸ್ಥಾನ ತಕ್ಷಣವೇ ಖಾಲಿಯಾಗಿದೆ. ಇಂತಹ ಸಂದರ್ಭದಲ್ಲಿ ಒಂದು ಕ್ಷಣವೂ ಆ ಹುದ್ದೆಯನ್ನು ಖಾಲಿ ಇರಿಸಬಾರದು. ಇದರಿಂದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ವಿವಿಯ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಸರ್ಕಾರ, ರಾಜ್ಯಪಾಲರು ಮಧ್ಯಪ್ರವೇಶಿಸಿ ಹಿಂದೆ ಹೊಸ ಕುಲಪತಿ ನೇಮಿಸುವಾಗ ಸರ್ಕಾರ ರಾಜ್ಯಪಾಲರಿಗೆ ರವಾನಿಸಿದ್ದ ಇನ್ನೆರಡು ಹೆಸರಲ್ಲಿ ಯಾವುದಾದರೂ ಒಂದನ್ನು ಹೊಸ ಕುಲಪತಿಯಾಗಿ ನೇಮಿಸಬಹುದು ಅಥವಾ ವಿವಿಯ ಹಿರಿಯ ಡೀನ್ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಬೇಕು ಎಂದು ಹೇಳುತ್ತಾರೆ. ಈ ಮಧ್ಯೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ(Supreme Court) ವಿವಿಯ ಉನ್ನತ ಅಧಿಕಾರಿಯಿಂದಲೇ ಮೇಲ್ಮನವಿ ಸಲ್ಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಹಾಗೆ ಮಾಡಲು ಬರುವುದಿಲ್ಲ ಎಂಬುದು ತಜ್ಞರ ವಾದ.
ಹಂಗಾಮಿ ಕುಲಪತಿ ನೇಮಕಕ್ಕೆ ಆಗ್ರಹ
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ.ಕೆ.ಆರ್.ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದ ರಾಜ್ಯಪಾಲರ ಆದೇಶವನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಹೊಸ ಕುಲಪತಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು, ಅಲ್ಲಿಯವರೆಗೆ ವಿವಿಯ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯಪಾಲರು ಹಂಗಾಮಿ ಕುಲಪತಿಯನ್ನು ನೇಮಕ ಮಾಡಬೇಕು ಎಂದು ಬೆಂ.ವಿವಿಯ ವಿವಿಧ ಸಿಂಡಿಕೇಟ್ ಸದಸ್ಯರು ಒತ್ತಾಯಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯರಾದ ಎಚ್.ಸುಧಾಕರ್, ಗೋವಿಂದರಾಜು, ಗೋಪಿನಾಥ್, ಪ್ರೇಮ್, ಟಿ.ವಿ.ರಾಜು ಅವರು, ಪ್ರೊ.ವೇಣುಗೋಪಾಲ್ ಅವರು ಕುಲಪತಿ ಹುದ್ದೆಯಲ್ಲಿ ಕುಳಿತು ವಿವಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವುದು ಕಾನೂನಾತ್ಮಕವಾಗಿ ಸರಿಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಬಗ್ಗೆ ವಿಶೇಷ ಸಿಂಡಿಕೇಟ್ ಆಯೋಜಿಸಿ ಚರ್ಚೆ ನಡೆಸುವ ಅಗತ್ಯವಿದೆ. ಹಾಗಾಗಿ ವಿವಿಯ ಕುಲಾಧಿಪತಿಗಳು ಆದ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಹೈಕೋರ್ಟ್ ಆದೇಶದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಡೀನ್‌ಗೆ ಅಧಿಕಾರ?
ಹಾಲಿ ಕುಲಪತಿ ನೇಮಕಾತಿ ರದ್ದಾದ ಹಿನ್ನೆಲೆಯಲ್ಲಿ ನಿಯಮಾನುಸಾರ ಹೊಸ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿವಿಯ ಹಿರಿಯ ಡೀನ್ ಅವರನ್ನು ರಾಜ್ಯಪಾಲರು ಹಂಗಾಮಿ ಕುಲಪತಿಯಾಗಿ ನೇಮಿಸಬೇಕು. ಸದ್ಯ ವಿವಿಯ ಕಾನೂನು ವಿಭಾಗದ ಡೀನ್ ದಶರಥ ಅವರು ಹಿರಿಯರಾಗಿದ್ದಾರೆ. ದೃಷ್ಟಿಹೀನತೆ ಇದ್ದರೂ ಸಾಮಾನ್ಯರಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಲಪತಿಯಾಗಿ ನೇಮಕವಾದರೆ ರಾಜ್ಯದಲ್ಲೇ ಇತಿಹಾಸ ದಾಖಲಾಗಲಿದೆ. ಇವರ ಹೊರತಾಗಿ ವಾಣಿಜ್ಯ ವಿಭಾಗದ ಡೀನ್ ಪ್ರೊ.ಸಿಂಥಿಯಾ ಕೂಡ ರೇಸ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಸಿಂಥಿಯಾ ಅವರ ಶೈಕ್ಷಣಿಕ ಅರ್ಹತೆ ಉತ್ತಮವಾಗಿದೆ. ಹಂಗಾಮಿ ಕುಲಪತಿ ಹುದ್ದೆಗೆ ಅವರ ನೇಮಕವಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.
Bangalore University: ಸಹಸ್ರಾರು ಉತ್ತರ ಪತ್ರಿಕೆಗಳಲ್ಲಿ ಅಕ್ರಮ
ಕುಲಪತಿ ಕಚೇರಿ ಮೂಲಗಳ ಪ್ರಕಾರ, ಸದ್ಯ ರಾಜ್ಯಪಾಲರು ರಾಜ್ಯದಲ್ಲಿ ಇಲ್ಲ. ಅವರು ವಾಪಸ್ಸಾದ ಬಳಿಕವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ರಾಜಭವನದ ಮೂಲಗಳು ಹೇಳುತ್ತಿವೆ. ಆದರೆ, ರಾಜ್ಯ ಸರ್ಕಾರ ನ್ಯಾಯಾಲಯದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ ಆದೇಶದ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ 48 ವರ್ಷಗಳ ವೃತ್ತಿ ಜೀವನದಲ್ಲಿ ಇಂತಹ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಎಲ್ಲವೂ ವಿಧಿಲಿಖಿತ ಎಂದು ಭಾವಿಸುತ್ತೇನೆ. ನಾನು ದೇವರನ್ನು ನಂಬಿದ್ದೇನೆ. ಎಲ್ಲರ ದಾರಿಯನ್ನೂ ದೇವರೇ ನಿರ್ಧರಿಸಿರುತ್ತಾರೆ. ನನಗೂ ಮುಂದಿನ ದಾರಿಯನ್ನು ದೇವರೇ ತೋರಿಸುತ್ತಾನೆ ಅಂತ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.