Asianet Suvarna News Asianet Suvarna News

ಕೊರೋನಾತಂಕ: ಗೊಂದಲದಲ್ಲಿರುವ SSLC, PUC ವಿದ್ಯಾರ್ಥಿಗಳು

* ಯಾವ ರೀತಿ ಪಾಠ ಮಾಡಬೇಕೆಂಬ ಗೊಂದಲ ಶಿಕ್ಷಕರಲ್ಲೂ ಇದೆ
* ಆರಂಭದಲ್ಲಿ ಮುದ ನೀಡಿದ ಆನಲೈನ್‌ ಶಿಕ್ಷಣ, ನಂತರದಲ್ಲಿ ಕಿರಿಕಿರಿ
* ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರುವ ಪೋಷಕರು
 

SSLC and PUC Students in Confusion due to Coronavirus in Dharwad grg
Author
Bengaluru, First Published May 28, 2021, 1:56 PM IST

ಧಾರವಾಡ(ಮೇ.28): ಓದಲು ಸಾಕಷ್ಟು ಸಮಯವಿದೆ. ಆದರೆ, ಓದಲು ಮನಸ್ಸಿಲ್ಲ. ಆನಲೈನ್‌ ಶಿಕ್ಷಣ ಆರಂಭದಲ್ಲಿ ಮುದ ನೀಡಿದರೂ ನಂತರದ ದಿನಗಳಲ್ಲಿ ಅದು ಮಕ್ಕಳ ಮನಸ್ಸಿಗೆ ಕಿರಿಕಿರಿ ಎನಿಸುತ್ತಿದೆ. ಪ್ರಾಥಮಿಕ ಶಾಲಾ ಮಕ್ಕಳಂತೂ ಆನಲೈನ್‌ ಶಿಕ್ಷಣದ ಹೆಸರಿನಲ್ಲಿ ಮೊಬೈಲ್‌ ದಾಸರಾಗುತ್ತಿದ್ದಾರೆ.

ಇನ್ನು, ಪರೀಕ್ಷೆಗಳನ್ನು ನಡೆಸುತ್ತಾರೋ ಅಥವಾ ಇಲ್ಲವೋ ಎಂಬ ದ್ವಂದ್ವ, ಗೊಂದಲದಲ್ಲಿದ್ದಾರೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು. ಕಳೆದ ಎರಡು ವರ್ಷಗಳಿಂದ ಬರೀ ವಿದ್ಯಾರ್ಥಿಗಳಲ್ಲದೇ ಅಷ್ಟೇ ಪ್ರಮಾಣದಲ್ಲಿ ಪಾಲಕರು ಹಾಗೂ ಶಿಕ್ಷಕರು ಶಿಕ್ಷಣದ ಸಲುವಾಗಿ ತಲೆಕೆಡಿಸಿಕೊಂಡಿದ್ದಾರೆ. ಹಾಗೆಯೇ, ಶಿಕ್ಷಕರಿಗೂ ಮಕ್ಕಳಿಗೆ ಯಾವ ರೀತಿ ಪಾಠ ಮಾಡಬೇಕು ಎಂಬ ಗೊಂದಲ ಉಂಟಾಗಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಕೆಲವು ಪಾಲಕರು ಹಾಗೂ ಶಿಕ್ಷಕರು ಚಿಂತಾಕ್ರಾಂತರಾಗಿದ್ದಾರೆ.

"

ಏತನ್ಮಧ್ಯೆ, ಹಲವು ಶಿಕ್ಷಣ ಸಂಸ್ಥೆಗಳು, ಟ್ಯೂಶನ್‌ ಕ್ಲಾಸ್‌ಗಳು ಸಹ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಆನಲೈನ್‌ ಮೂಲಕ ಪಾಠ-ಪ್ರವಚನ ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಭೌತಿಕ ಶಿಕ್ಷಣದಷ್ಟು ಪ್ರಭಾವ ಆನಲೈನ್‌ ಮೂಲಕ ಸಿಗುತ್ತಿಲ್ಲ ಎಂಬುದು ಸ್ಪಷ್ಟ ಎನಿಸುತ್ತಿದೆ.

ಶಾಲೆ ಯಾವಾಗ? ವೇಳಾಪಟ್ಟಿ ನೀಡಿ: ರುಪ್ಸಾ ಒತ್ತಾಯ

ವಿದ್ಯಾರ್ಥಿಗಳಿಗೂ ಕೋವಿಡ್‌ ಭಯ:

ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಜೀವನದ ಪ್ರಮುಖ ಘಟ್ಟ. ಶಿಕ್ಷಣದ ಪ್ರಮುಖ ಹಂತಗಳಲ್ಲಿ ಇವೆರೆಡೂ ಅತ್ಯಂತ ಪ್ರಮುಖ. ಜೀವನದ ಹಾದಿ ತೋರುವ ಮಾರ್ಗಗಳಿವು. ಆದರೆ, ಕಳೆದ ಎರಡು ವರ್ಷಗಳಿಂದ ಈ ಹಂತದ ವಿದ್ಯಾರ್ಥಿಗಳಿಗೆ ಕೋವಿಡ್‌ ಹಲವು ರೀತಿಯಲ್ಲಿ ಕಾಡುತ್ತಿದೆ. ಕಳೆದ ಬಾರಿ ತಡವಾದರೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ, ಈ ಬಾರಿ ಏನು ಮಾಡಬೇಕು ಎಂಬ ಗೊಂದಲ ಶಿಕ್ಷಣ ಇಲಾಖೆ ಹೊಂದಿದೆ.

ಪರೀಕ್ಷೆ ನಡೆಯುತ್ತವೆಯೇ:

3ನೇ ಅಲೆಯಲ್ಲಿ ಕೋವಿಡ್‌ ಮಕ್ಕಳಿಗೆ ಬಾಧಿಸುತ್ತದೆ ಎಂಬ ಹೇಳಿಕೆಗಳು ಕೇಳಿ ಬರುತ್ತಿರುವಾಗಲೇ 2ನೇ ಅಲೆಯಲ್ಲಿಯೇ ವಿವಿಧ ಕಡೆಗಳಲ್ಲಿ ಮಕ್ಕಳಿಗೆ ಕೋವಿಡ್‌ ಅಂಟಿಕೊಂಡಿದ್ದು ಮಕ್ಕಳಿಗೆ ಹಾಗೂ ಪಾಲಕರಿಗೆ ಮತ್ತಷ್ಟುಆತಂಕ ಮೂಡಿಸಿದೆ. ಈ ಕಾರಣದಿಂದ ಕೆಲವು ಪಾಲಕರು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಎಂಬ ಬೇಡಿಕೆ ಸಹ ಇಡುತ್ತಿದ್ದಾರೆ. ಇದರೊಂದಿಗೆ ಸಿಬಿಎಸ್ಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು ರಾಜ್ಯದ ಪ್ರೌಢ ಶಿಕ್ಷಣ ಮಂಡಳಿಯೂ ಇದೇ ರೀತಿಯ ನಿರ್ಧಾರ ಪ್ರಕಟಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಜೊತೆಗೆ ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯದೇ ಅಥವಾ ರದ್ದುಗೊಳ್ಳದೇ ಅನೇಕ ಮಕ್ಕಳ ಪಾಲಕರು ಪಿಯುಸಿ ಪ್ರಥಮ ವರ್ಷದ ತರಗತಿಗೆ ಪ್ರವೇಶ ಸಹ ಕೊಡಿಸಿದ್ದಾರೆ. ಬಹುತೇಕ ಪಿಯು ಕಾಲೇಜುಗಳು ಈಗಾಗಲೇ ಭರ್ತಿಯಾಗಿದ್ದು ಪ್ರವೇಶ ಪಡೆಯದ ಪಾಲಕರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮಕ್ಕಳ ಶಿಕ್ಷಣದ ಬಗ್ಗೆ ಏನು ಮಾಡಬೇಕು ಎಂದು ತಿಳಿಯದೇ ಶಿಕ್ಷಣ ತಜ್ಞರ ಮೊರೆ ಹೋಗುತ್ತಿದ್ದಾರೆ.

ಇದರೊಂದಿಗೆ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಮುಗಿದ ವಿದ್ಯಾರ್ಥಿಗಳ ಗೋಳು ಮತ್ತೊಂದು ರೀತಿ. ಲಕ್ಷಾನುಗಟ್ಟಲೇ ವೆಚ್ಚದಲ್ಲಿ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ನೌಕರಿ ಸಿಗದೇ ಮನೆಯಲ್ಲಿ ಕುಳಿತಿದ್ದಾರೆ. ಲಾಕ್‌ಡೌನ ಹಿನ್ನೆಲೆಯಲ್ಲಿ ಎಲ್ಲೂ ಹೋಗುವಂತಿಲ್ಲ. ಉದ್ಯೋಗದ ಬಗ್ಗೆ ಸಾಕಷ್ಟುನಿರೀಕ್ಷೆ ಹೊಂದಿದ್ದ ಅಭ್ಯರ್ಥಿಗಳು ಕೋವಿಡ್‌ ಹೊಡೆತಕ್ಕೆ ತಮ್ಮ ಔದ್ಯೋಗಿಕ ಭವಿಷ್ಯದ ಬಗ್ಗೆ ಒಳಗೊಳಗೆ ಕೊರಗುವಂತಾಗಿದೆ.

ಕೋವಿಡ್‌ ನಿರ್ವಹಣೆಯ ಸಲುವಾಗಿ ಎರಡು ವರ್ಷಗಳಿಂದ ಯಾವ ತರಗತಿಗಳೂ ನಡೆದಿಲ್ಲ. ಅದು ಅನಿವಾರ್ಯವೂ ಆಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತಕ್ಕಮಟ್ಟಿಗೆ ಆನಲೈನ್‌ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲೆಗಳು ಸಹ ಈ ಶಿಕ್ಷಣ ಅಳವಡಿಸಿಕೊಂಡಿದ್ದು ಮಕ್ಕಳ ಅಧ್ಯಯನ ನಿರಂತರತೆ ಕಾಯ್ದುಕೊಳ್ಳಲು ಶಿಕ್ಷಣ ಇಲಾಖೆ ನಿತ್ಯ ಪ್ರಯತ್ನಿಸುತ್ತಿದೆ. ಎಸ್ಸೆಸ್ಸೆಲ್ಸಿ ಮಕ್ಕಳಿಗಂತೂ ವಿಶೇಷ ಪ್ರಯತ್ನಗಳೂ ನಡೆದಿವೆ. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಧೈರ್ಯ ಹೇಳುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಧಾರವಾಡ ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಕೋವಿಡ್‌ ಹೊಡೆತಕ್ಕೆ ಶಿಕ್ಷಣದ ಕೊಂಡಿ ತಪ್ಪುತ್ತಿದೆ ಎನ್ನುವ ಭಾಸ ನಮಗೂ ಆಗುತ್ತಿದೆ. ಮಕ್ಕಳಲ್ಲಿನ ಓದು, ಬರವಣಿಗೆ ಇಲ್ಲವಾಗಿದೆ. ಆನಲೈನ್‌ ಶಿಕ್ಷಣವು ಭೌತಿಕ ಶಿಕ್ಷಣದ ಗುಣಮಟ್ಟನೀಡುತ್ತಿಲ್ಲ. ಆದರೆ, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ನಿರಾಸೆಗೊಳ್ಳದೆ ಕೋವಿಡ್‌ ಭಯ, ಆತಂಕ ಬಿಟ್ಟು ಮಾನಸಿಕವಾಗಿ ಹೊರಬರಬೇಕು. ಕೋವಿಡ್‌ನಿಂದ ಪಾರಾಗಲು ನಾವಿದ್ದೇವೆ ಎಂದು ಹೇಳುವ ತಂಡದಂತೆ ಶಿಕ್ಷಣಕ್ಕಾಗಿಯೂ ನಾವಿದ್ದೇವೆ ಎಂಬ ಹೊಸ ತಂಡವೊಂದು ಸೃಷ್ಟಿಯಾಗಬೇಕಿದೆ ಎಂದು ಶಿಕ್ಷಣ ತಜ್ಞ ವಿನಾಯಕ ಜೋಶಿ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios