ಹಳ್ಳಿ ಮಕ್ಕಳ ಇಂಟರ್ನೆಟ್ ಸಮಸ್ಯೆಗೆ ಶೀಘ್ರ ಪರಿಹಾರ
- ರಾಜ್ಯದ ವಿವಿಧೆಡೆ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆ
- ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ, ಚಂದನ ವಾಹಿನಿಯ ಇ-ಕ್ಲಾಸ್ ವೀಕ್ಷಣೆಗೆ ತೊಡಕು
ಬೆಂಗಳೂರು (ಜು.13): ರಾಜ್ಯದ ವಿವಿಧೆಡೆ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆಯಿಂದ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ, ಚಂದನ ವಾಹಿನಿಯ ಇ-ಕ್ಲಾಸ್ ವೀಕ್ಷಣೆಗೆ ಆಗುತ್ತಿರುವ ತೊಡಕು ನಿವಾರಣೆಗೆ ಸರ್ಕಾರ ತ್ವರಿತವಾಗಿ ಕ್ರಮ ವಹಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಸಂಬಂಧ ವಿಧಾನಸೌಧದಲ್ಲಿ ಸೋಮವಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಭೇಟಿ ಮಾಡಿದ ಸುರೇಶ್ ಕುಮಾರ್ ಸುದೀರ್ಘ ಚರ್ಚೆ ನಡೆಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್
ಬಳಿಕ ಹೇಳಿಕೆ ನೀಡಿರುವ ಅವರು, ಈಗಾಗಲೇ ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಮತ್ತು ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ರಾಜ್ಯದಲ್ಲಿ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರ ಕಂಪನಿಗಳೊಂದಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಯವರು ಚರ್ಚಿಸಿದ್ದು, ಸಮಸ್ಯೆ ಪರಿಹರಿಸಲು ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಅವರು ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ನೀಟ್ ಪರೀಕ್ಷಾ ದಿನಾಂಕ ಪ್ರಕಟಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಪ್ರಸ್ತುತ ಕೊರೋನಾ ಕಾಲಘಟ್ಟದಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ ಆನ್‌ಲೈನ್ ತರಗತಿ, ದೂರದರ್ಶನದ ಮೂಲಕ ಇ-ಕ್ಲಾಸ್‌ಗಳ ಪ್ರಸಾರ ಪರ್ಯಾಯ ಬೋಧನಾ ಕ್ರಮಗಳಾಗಿವೆ. ನೆಟ್‌ವರ್ಕ್ ಸಮಸ್ಯೆಯಿಂದ ಇದಕ್ಕೆ ತೊಡಕಾಗುತ್ತಿದ್ದು, ತ್ವರಿತವಾಗಿ ಈ ಸಮಸ್ಯೆ ಪರಿಹರಿಸಬೇಕಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ. ಈ ಕುರಿತು ಮುಖ್ಯಮಂತ್ರಿಯವರೂ ಕೂಡ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿ ಶೀಘ್ರ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಗ್ರಾ.ಪಂಗಳಲ್ಲಿ ಆನ್‌ಲೈನ್ ಪಾಠಕ್ಕೆ ವ್ಯವಸ್ಥೆ: ಆನ್‌ಲೈನ್ ಶಿಕ್ಷಣ, ದೂರದರ್ಶನ ಪಾಠ ಸೇರಿ ಯಾವುದೇ ಡಿಜಿಟಲ್ ಶಿಕ್ಷಣ ಸೌಲಭ್ಯ ವಂಚಿತ ಮಕ್ಕಳಿಗೆ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಆನ್‌ಲೈನ್ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಅವರೊಂದಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಚರ್ಚಿಸಿದ ಸಚಿವರು, ರಾಜ್ಯದಲ್ಲಿರುವ 5766 ಗ್ರಾ.ಪಂ.ಗಳ ಗ್ರಂಥಾಲಯಗಳಲ್ಲಿ ಡಿವೈಸರ್ ಅಳವಡಿಸುವ ಮೂಲಕ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವನ್ನು ಹೇಗೆ ನೀಡಬಹುದು ಎಂದು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಹಾಜರಿದ್ದರು.