Asianet Suvarna News Asianet Suvarna News

ಕೋವಿಡ್‌ ಸಂಕಷ್ಟದ ನಡುವೆಯೂ ನಿಲ್ಲದ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ

* ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಷಕರು ಕಂಗಾಲು
* ಡೊನೇಷನ್‌ ನೀಡದಿದ್ದರೆ ಆನ್‌ಲೈನ್‌ ಕ್ಲಾಸ್‌ ಬಂದ್‌
* ಸಾಲ ಮಾಡಿ ಫೀಸ್‌ ಕಟ್ಟಿ ಎನ್ನುವ ಧನದಾಹಿ ಶಾಲೆಗಳು
 

Some Private Schools Harassment to Parents for Fees at Ballari grg
Author
Bengaluru, First Published Jun 26, 2021, 1:34 PM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.26): ನಗರದ ಕೆಲ ಪ್ರತಿಷ್ಠಿತ ಶಾಲೆಗಳು ಡೊನೇಷನ್‌ ಕಿರುಕುಳ ಶುರು ಮಾಡಿಕೊಂಡಿವೆ. ಪೂರ್ಣ ಪ್ರಮಾಣದ ಶುಲ್ಕ ಕಟ್ಟಲೇಬೇಕು ಎಂದು ಪಟ್ಟು ಹಿಡಿದು ಕುಳಿತಿವೆ. ಕೋವಿಡ್‌ ಸಂಕಷ್ಟದ ನಡುವೆಯೂ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ಮಿತಿ ಮೀರುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ದಟ್ಟವಾಗಿವೆ.

ಕಳೆದ ವರ್ಷ ಶೈಕ್ಷಣಿಕ ಸಾಲಿನಲ್ಲಿ ಪಡೆಯುತ್ತಿದ್ದ ಶುಲ್ಕದ ಶೇ.70ರಷ್ಟು ಮಾತ್ರ ಪಡೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೆಲವು ಹಣಬಾಕ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ಬೆಲೆ ನೀಡದೆ, ಪೂರ್ಣ ಪ್ರಮಾಣದ ಶುಲ್ಕ ಪಾವತಿಗೆ ಪೋಷಕರ ಮೇಲೆ ಒತ್ತಡ ಹೇರುತ್ತಿವೆ. ಡೊನೇಷನ್‌, ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ಕ್ಲಾಸ್‌ಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಪರೋಕ್ಷ ಬೆದರಿಕೆ ಹಾಕುತ್ತಿವೆ. ಕೋವಿಡ್‌ನಿಂದ ತೀವ್ರ ಸಮಸ್ಯೆಯಲ್ಲಿದ್ದೇವೆ. ಹೀಗಾಗಿ ಸದ್ಯ ಅರ್ಧ ಶುಲ್ಕ ಕಟ್ಟುತ್ತೇವೆ. ಉಳಿದ ಶುಲ್ಕವನ್ನು ಎರಡು ಕಂತುಗಳಲ್ಲಿ ನೀಡುತ್ತೇವೆ ಎಂದು ಪೋಷಕರು ಬೇಡಿಕೊಂಡರೂ ಕೆಲ ಪ್ರತಿಷ್ಠಿತ ಶಾಲೆಗಳ ಮಾಲೀಕರು ಪೋಷಕರ ಮನವಿ ತಿರಸ್ಕರಿಸಿ, ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಾಲ ಮಾಡಿಯಾದರೂ ಶುಲ್ಕ ಕಟ್ಟಿಎಂದು ತಾಕೀತು ಮಾಡುತ್ತಿವೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದರೆ, ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಯಾವೊಬ್ಬ ಪೋಷಕರೂ ದೂರು ನೀಡುವ ಧೈರ್ಯ ಮಾಡುತ್ತಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗಬಹುದು ಎಂಬ ಆತಂಕದಿಂದ ದುಬಾರಿ ಬಡ್ಡಿಗೆ ಸಾಲ ಮಾಡಿ ಶುಲ್ಕ ಕಟ್ಟಲು ಮುಂದಾಗಿವೆ ಎಂದು ತಿಳಿದು ಬಂದಿದೆ.

ಶಾಲೆ ಶುಲ್ಕ ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಭೇಟಿ ಮಾಡಬೇಕಿತ್ತು; ಮಾಡುವೆ..:

ಬಳ್ಳಾರಿ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಡೊನೇಷನ್‌ ಹಾವಳಿ ಶುರುವಾಗಿದೆ. ಇದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ, ಈ ವರೆಗೆ ಯಾವೊಂದು ಶಾಲೆಗೆ ಭೇಟಿ ನೀಡಿ, ಪರಿಶೀಲಿಸುವ ಕೆಲಸ ಮಾಡಿಲ್ಲ. ಪೋಷಕರು ದೂರು ನೀಡಿದರೆ ಮಾತ್ರ ಕ್ರಮ ವಹಿಸಲಾಗುವುದು ಎಂಬ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು, ಖಾಸಗಿ ಶಾಲೆಗಳ ಜತೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಪೋಷಕರು ಹಾಗೂ ವಿವಿಧ ಶಿಕ್ಷಣ ಪರ ಹೋರಾಟಗಾರರು ಆರೋಪಿಸುತ್ತಾರೆ.

ಈ ಕುರಿತು ‘ಕನ್ನಡಪ್ರಭ’ ಡಿಡಿಪಿಐ ರಾಮಪ್ಪ ಅವರನ್ನು ಸಂಪರ್ಕಿಸಿ, ಡೊನೇಷನ್‌ ಹಾವಳಿ ಕುರಿತು ಗಮನಕ್ಕೆ ತಂದಾಗ, ‘ಯಾವ ಪೋಷಕರೂ ದೂರು ನೀಡಿಲ್ಲ. ಹೀಗಾಗಿ ಯಾವುದೇ ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ’ ಎಂಬ ಸಿದ್ಧ ಹೇಳಿಕೆಯನ್ನು ಮುಂದಿಟ್ಟರು. ದೂರು ನೀಡಲೇಬೇಕೆಂದಿಲ್ಲ. ಸುಮೊಟೋ ದೂರು ದಾಖಲಿಸಲು ಸಾಧ್ಯವಿದೆ. ಎಷ್ಟುಶಾಲೆಗಳಿಗೆ ತಾವು ಭೇಟಿ ನೀಡಿ ಪರಿಶೀಲಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಡಿಪಿಐ ರಾಮಪ್ಪ ಅವರು, ‘ನೀವು ಹೇಳುವುದು ನಿಜ. ಭೇಟಿ ನೀಡಿ ಪರಿಶೀಲಿಸಬೇಕಿತ್ತು. ಇನ್ನು ಮುಂದೆ ಪರಿಶೀಲಿಸಿ, ಅಗತ್ಯ ಕ್ರಮ ವಹಿಸುತ್ತೇವೆ’ ಎಂದರು.

SSLC ಪರೀಕ್ಷೆ; ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸುರೇಶ್‌ ಕುಮಾರ್

2019- 20ನೇ ಸಾಲಿನಲ್ಲಿ ತೆಗೆದುಕೊಂಡ ಶುಲ್ಕದ ಶೇ. 70ರಷ್ಟು ಮಾತ್ರ ಈ ಬಾರಿ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಆದೇಶವಿದೆ. ಹೆಚ್ಚಿನ ಶುಲ್ಕ, ಡೊನೇಷನ್‌ ತೆಗೆದುಕೊಳ್ಳುವಂತಿಲ್ಲ. ಈವರೆಗೆ ಪೋಷಕರಿಂದ ದೂರು ಬಂದಿಲ್ಲ. ಸರ್ಕಾರಿ ಶಾಲೆಗಳಿಗಷ್ಟೇ ವಿಜಿಟ್‌ ಮಾಡಿರುವೆ ಎಂದು ಬಳ್ಳಾರಿ ಡಿಡಿಪಿಐ ರಾಮಪ್ಪ ತಿಳಿಸಿದ್ದಾರೆ. 

ಡೊನೇಷನ್‌ ಹಾವಳಿ ಇದೇ ಮೊದಲಲ್ಲ. ಪ್ರತಿವರ್ಷ ಖಾಸಗಿ ಶಾಲೆಗಳು ಅವೈಜ್ಞಾನಿಕವಾಗಿ ಡೊನೇಷನ್‌ ಪಡೆಯುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವಾಗುತ್ತಿಲ್ಲ. ಹೀಗಾಗಿ ಕೋವಿಡ್‌ ಸಂಕಷ್ಟಎನ್ನದೆ ಶಾಲೆಗಳು ಡೊನೇಷನ್‌ ಸುಲಿಗೆ ಮಾಡುತ್ತಿವೆ ಎಂದು ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಯುವಶಕ್ತಿ ಸಂಘಟನೆ ಸಿದ್ಮಲ್‌ ಮಂಜುನಾಥ್‌ ಹೇಳಿದ್ದಾರೆ. 
 

Follow Us:
Download App:
  • android
  • ios