Chikkamagaluru: ಶಾಲೆ ಮುಚ್ಚುವುದಿಲ್ಲ, ವಿಲೀನ ಮಾಡ್ತೇವೆ: ಸಚಿವ ನಾಗೇಶ್
ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವುದಿಲ್ಲ. ಆದರೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಅಂತಹ ಶಾಲೆಗಳನ್ನು ವಿಲೀನ ಮಾಡುವ ಆಲೋಚನೆ ಸರ್ಕಾರ ಹೊಂದಿದೆ.
ಚಿಕ್ಕಮಗಳೂರು (ಏ.23): ರಾಜ್ಯದಲ್ಲಿ (Karnataka) ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ (Students) ಶಾಲೆಗಳನ್ನು (Schools) ಮುಚ್ಚುವುದಿಲ್ಲ. ಆದರೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಅಂತಹ ಶಾಲೆಗಳನ್ನು ವಿಲೀನ ಮಾಡುವ ಆಲೋಚನೆ ಸರ್ಕಾರ ಹೊಂದಿದೆ. ಗಡಿ ಜಿಲ್ಲೆಗಳಲ್ಲಿ ಆ ರೀತಿ ಉರ್ದು ಶಾಲೆಗಳಿದ್ದರೂ ವಿಲೀನ ಮಾಡುತ್ತೇವೆ, ಕನ್ನಡ, ಇಂಗ್ಲಿಷ್, ತಮಿಳು, ಮರಾಠಿ ಇದ್ದರೂ ಒಗ್ಗೂಡಿಸುತ್ತೇವೆ ಎಂದು ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಡಿಮೆ ಅಂತರದಲ್ಲಿರುವ ಶಾಲೆಗಳನ್ನು , ಅಲ್ಲಿನ ಶಿಕ್ಷಕರನ್ನು ಒಗ್ಗೂಡಿಸಿ ಗುಣಮಟ್ಟದ ಶಿಕ್ಷಣ ನೀಡಬಹುದಾ ಎಂಬ ಚಿಂತನೆ ಸರ್ಕಾರದ್ದಾಗಿದೆ ಎಂದರು.
ರಾಜ್ಯದಲ್ಲಿ 2700ಕ್ಕೂ ಹೆಚ್ಚು ಏಕ ಗ್ರಾಮ ಪಂಚಾಯಿತಿಗಳಿದ್ದು ಅಂತಹ ಕಡೆ 5ರಿಂದ 7 ಶಾಲೆಗಳಿವೆ. ಕೆಲವೊಂದರಲ್ಲಿ 100 ವಿದ್ಯಾರ್ಥಿಗಳು ಮತ್ತೆ ಕೆಲವೆಡೆ 20 ಮಕ್ಕಳಿದ್ದಾರೆ. ಇವೆಲ್ಲವೂ 300ರಿಂದ 800 ಮೀಟರ್ ಅಂತರದಲ್ಲಿದೆ. ಅಂತಹ ಶಾಲೆಗಳನ್ನು ಶಿಕ್ಷಕರನ್ನು ಒಗ್ಗೂಡಿಸಿ ಗುಣಮಟ್ಟದ ಶಿಕ್ಷಣ ನೀಡಬಹುದಾ ಎಂಬ ಕಲ್ಪನೆ ಸರ್ಕಾರದ್ದಾಗಿದೆ. ಗುಣಾತ್ಮಕ ಶಿಕ್ಷಣ ನೀಡುವ ದೃಷ್ಟಿಯಿಂದ ಮಾದರಿ ಶಾಲೆ ಕಲ್ಪನೆಯಂತೆ ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 3 ಸಾವಿರ ಶಾಲೆಗಳಿವೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC Nagesh
ಇದರಿಂದ ಮಕ್ಕಳಿಗೆ ನ್ಯಾಯ ಕೊಡುತ್ತಿದ್ದೇವಾ? ಅನ್ಯಾಯ ಮಾಡುತ್ತಿದ್ದೆವಾ ಎಂದು ರಾಜಕೀಯ ನಿರ್ಣಯ ತೆಗೆದುಕೊಳ್ಳದೆ ನಿರ್ಧಾರವನ್ನು ಶಿಕ್ಷಣ ಇಲಾಖೆಗೆ ಬಿಟ್ಟರೆ ಅಲ್ಲಿ ಬೇಕಾದಷ್ಟುಅನುಭವಿಗಳು, ತಜ್ಞರಿದ್ದಾರೆ. ಅವರ ಸಲಹೆ ಮೇಲೆ ಮುಂದುವರೆಯುತ್ತೇವೆ ಎಂದರು. ಪ್ರತಿವರ್ಷ ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಈಗ ಮರಾಠಿ ಮಾಧ್ಯಮದಲ್ಲೂ ಮಕ್ಕಳು ತುಂಬಾ ಕಡಿಮೆಯಾಗಿದ್ದಾರೆ. ಯಾವ ಮಾಧ್ಯಮದಲ್ಲಿ ಓದಿದರೆ ಮುಂದೆ ಕೆಲಸ ಸಿಗುತ್ತದೆ. ಪ್ರೊಫೆಷನಲ್ ಕೋರ್ಸ್‌ಗಳಿಗೆ ಹೋಗಬಹುದು ಎಂದು ಮಕ್ಕಳಿಗೆ ಅನಿಸಿದೆಯೊ ಅಂತಹ ಮಾಧ್ಯಮವನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಆ ಕಾರಣಕ್ಕಾಗಿ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದ್ದು ಎಲ್ಲಿ ಸಾಧ್ಯವಿದೆಯೋ ಆ ಶಾಲೆಗಳನ್ನು ವಿಲೀನ ಮಾಡಲಾಗುತ್ತದೆ. ಆದರೆ ಯಾವುದೇ ಶಾಲೆಗಳನ್ನು ಮುಚ್ಚುವ ಪ್ರಶ್ನೆ ಇಲ್ಲ ಎಂದರು. ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ ಎಂಬ ದೂರು ಇದೆ, ಆಂಗ್ಲ ಮಾಧ್ಯಮ ಬೇಕು ಎನ್ನುವ ಬೇಡಿಕೆಯೂ ಇದೆ. ಆದರೆ ಯಾವುದೇ ಭಾಷೆಯಲ್ಲೂ ಸಾಧನೆ ಮಾಡಿದ್ದಾರೆಂದರೆ ಪಾಠ ಹೇಳಿಕೊಟ್ಟವರ ಶ್ರಮವಿರುತ್ತದೆ. ಆಂಗ್ಲ ಶಿಕ್ಷಕರು ಎಷ್ಟಿದ್ದಾರೊ ಅದಕ್ಕೆ ತಕ್ಕಂತೆ ಶಾಲೆ ಮಾಡಬಹುದೇ ಹೊರತು ರಾಜಕೀಯ ಉದ್ದೇಶದಿಂದ ಯಾರೋ ಕೇಳಿದರು ಎಂದು 2 ಮಕ್ಕಳಿಗಾಗಿ ಶಾಲೆ ಆರಂಭ ಮಾಡಿದ್ದರಿಂದಲೇ ಇಂದು ಶಿಕ್ಷಣ ವ್ಯವಸ್ಥೆ ಹಾಳಾಗಿರುವುದು ಎಂದು ಹೇಳಿದರು.
6 ಲಕ್ಷ ವಿದ್ಯಾರ್ಥಿಗಳು ಮುಖ್ಯ 6 ವಿದ್ಯಾರ್ಥಿಗಳಲ್ಲ: ಹಿಜಾಬ್ ವಿವಾದದಿಂದ 6 ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆಯದೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು ರಾಜ್ಯದ 6 ಲಕ್ಷ ವಿದ್ಯಾರ್ಥಿಗಳ ಮುಖ್ಯ, 6 ವಿದ್ಯಾರ್ಥಿಗಳಲ್ಲ ಎಂದರು. ಪಿಯುಸಿ ಪರೀಕ್ಷಗೆ ಗೈರು ಹಾಜರಿ ಆಗಯವ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತೆ ಎಂದರು.
Tipu syllabus ಟಿಪ್ಪು ಕುರಿತ ಪಠ್ಯಕ್ಕೆ ಕತ್ತರಿ, ಪ್ರಸಕ್ತ ಸಾಲಿನಿಂದಲೇ ಜಾರಿ ಎಂದ ಸಚಿವ ನಾಗೇಶ್!
ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬನ್ನಿ ಅಂತಾ ಕರೆಯಬಹುದು, ಆದ್ರೆ ಪರೀಕ್ಷಾ ಕೇಂದ್ರಕ್ಕೆ ಎಳೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಕೂರಿಸಲು ಸಾಧ್ಯವಿಲ್ಲ ಎಂದು ಉಡುಪಿಯ 6 ಮಂದಿ ವಿದ್ಯಾರ್ಥಿನಿಯರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ದೇಶದಲ್ಲಿ ಎಲ್ಲರಿಗೂ ಎಲ್ಲಾತರದ ಸ್ವಾತಂತ್ರ್ಯವಿದೆ ಇದು ಪ್ರಜಾಪ್ರಭುತ್ವವಾಗಿದ್ದು ಯಾರನ್ನು ಬಲವಂತ ಮಾಡಲಾಗುವುದಿಲ್ಲ ಎಂದರು.ಈ ಪರೀಕ್ಷಾ ಕೇಂದ್ರದಲ್ಲಿ ಕೂಡ ಸಾಕಷ್ಟು ವಿದ್ಯಾರ್ಥಿನಿಯರು ಬಂದಿದ್ದಾರೆ ,ಪರೀಕ್ಷೆ ಬರೆಯುತ್ತಿದ್ದಾರೆ. ಆದ್ರೆ ಅ ಆರು ಜನ ವಿದ್ಯಾರ್ಥಿಗಳ ಹಿಂದೆ ಕಾಣದ ಶಕ್ತಿ ಇದೆ , ಆ ಶಕ್ತಿಯಿಂದ ಅವರನ್ನು ಬಿಡಿಸುವುದಕ್ಕೆ ಸಾಕಷ್ಟು ಸಮಯ ಬೇಕೆಂದರು.