ಬೆಂಗಳೂರು(ನ.29): ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಜ.19ರಿಂದ ಎಂಬಿಬಿಎಸ್‌ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸುವ ನಿರ್ಧಾರ ಕೈಬಿಟ್ಟಿದೆ. 2021ರ ಮಾರ್ಚ್‌/ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲು (ಕೆಲವು ಪರೀಕ್ಷೆಗಳು ಫೆಬ್ರವರಿಯಲ್ಲಿ) ತೀರ್ಮಾನಿಸಿದೆ.

ಹೊಸ ವೇಳಾಪಟ್ಟಿ ಪ್ರಕಾರ, ಕೆಲ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪರೀಕ್ಷೆಗಳು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಡೆಯಲಿವೆ. ಇದರಿಂದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕನಿಷ್ಠ ಎರಡರಿಂದ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ. ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಗೆ ಇದ್ದ ಕಾಲಾವಕಾಶ, ಘಟಿಕೋತ್ಸವಕ್ಕೆ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ದಿನ, ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಂಕಗಳನ್ನು ವಿವಿಗೆ ಸಲ್ಲಿಸಲಿ ನೀಡಿದ್ದ ಸಮಯ ಮಿತಿ ಎಲ್ಲವನ್ನೂ ಪರಿಷ್ಕರಿಸಿ ಹೊಸ ವೇಳಾಪಟ್ಟಿನೀಡಿದೆ. ವೇಳಾಪಟ್ಟಿಯ ಪೂರ್ಣ ವಿವರ ಆರ್‌ಜಿಯುಎಚ್‌ಎಸ್‌ ವೆಬ್‌ಸೈಟ್‌ https://www.guhs.ac.in/ ನಲ್ಲಿ ವೀಕ್ಷಿಸಬಹುದಾಗಿದೆ.

ವೈದ್ಯಕೀಯ ಪರೀಕ್ಷೆಗೆ ದಿನಾಂಕ ಪ್ರಕಟ: ವಿದ್ಯಾರ್ಥಿಗಳ ಆಕ್ರೋಶ

ದಂಡ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಗೆ ಫೆ.15 ಕೊನೆಯ ದಿನವಾಗಿದೆ. ದಂಡ ಶುಲ್ಕದೊಂದಿಗೆ ಫೆ.27ರ ವರೆಗೆ ಅವಕಾಶ ನೀಡಲಾಗಿದೆ. ಅರ್ಜಿಗೆ 200 ರು., ಅಂಕ ಪಟ್ಟಿಗೆ 300 ರು., ಎಂಬಿಬಿಎಸ್‌ ಅಭ್ಯರ್ಥಿಗಳಿಗೆ ಪ್ರತಿ ಪೇಪರ್‌ಗೆ 750 ರು., ತಾತ್ಕಾಲಿಕ ಪದವಿ ಪ್ರಮಾಣ ಪತ್ರಕ್ಕೆ 600 ರು.,ಘಟಿಕೋತ್ಸವ ಶುಲ್ಕ ಭಾರತೀಯ ವಿದ್ಯಾರ್ಥಿಗಳಿಗೆ 2000 ರು., ವಿದೇಶಿ ವಿದ್ಯಾರ್ಥಿಗಳಿಗೆ 4000 ರು. ನಿಗದಿಪಡಿಸಲಾಗಿದೆ. ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಮಾ.9ರೊಳಗೆ ದಂಡ ಶುಲ್ಕವಿಲ್ಲದೆ ಸಲ್ಲಿಸಬಹುದು. ದಂಡ ಶುಲ್ಕದೊಂದಿಗೆ ಮಾ.16ರ ವರೆಗೆ ಅವಕಾಶ ಇರುತ್ತದೆ ಎಂದು ವಿವಿ ಪ್ರಕಟಿಸಿದೆ.

ಕೋವಿಡ್‌ 19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದುವರೆಗೂ ವೈದ್ಯಕೀಯ ಕಾಲೇಜುಗಳ ಆರಂಭ ಆಗಿದ್ದರೂ ಜ.19ರಿಂದ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದ್ದ ಆರ್‌ಜಿಯುಎಚ್‌ಎಸ್‌ ನಿರ್ಧಾರ ಖಂಡಿಸಿ, ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ನ.24ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.