ಬೆಂಗಳೂರು, (ಏ.10):  ಪ್ರತಿನಿತ್ಯ ರಾಜ್ಯದ ರೈಲ್ವೇ ಹಳಿಗಳ ಮೇಲೆ 5 ರಿಂದ 6 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕರು 14 ರಿಂದ 30 ರ ವಯಸ್ಸಿನವರಾಗಿದ್ದು, ಏನನ್ನಾದರೂ ಸಾಧಿಸುವಂತಹ ವಯಸ್ಸಿನಲ್ಲಿ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾಗುವುದು ವಿಷಾದದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಆತ್ಮಸ್ಥೈರ್ಯವನ್ನು ಬೆಳಸಿಕೊಳ್ಳುವುದು ಅತ್ಯವಶ್ಯಕ ಎಂದು ರೈಲ್ವೇ ಎಡಿಜಿಪಿ ಭಾಸ್ಕರ್‌ ರಾವ್‌ ಅಭಿಪ್ರಾಯಪಟ್ಟರು. 

ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ 2020 ರ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ರ‍್ಯಾಂಕ್‌ ಗಳಿಸಿದ ಸುರಾನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಇಂದು (ಶನಿವಾರ) ಸನ್ಮಾನಿಸಲಾಯಿತು. ಹಿರಿಯ ಪೊಲೀಸ್‌ ಅಧಿಕಾರಿ ಎಡಿಜಿಪಿ (ರೈಲ್ವೇ) ಶ್ರೀ ಭಾಸ್ಕರ್‌ ರಾವ್‌ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಧನೆಗೆ ಪ್ರೇರಣೆ ಹಾಗೂ ಬದುಕಿನ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ. ಯಶಸ್ಸು ನಿರಂತರ ಶ್ರಮದ ಪ್ರತಿಫಲ. ಹಲವಾರು ವರ್ಷಗಳ ಶ್ರಮ, ವೈಫಲ್ಯಗಳು ಅದರ ನಂತರವೂ ನಡೆಸಿದ ನಿರಂತರ ಪ್ರಯತ್ನಗಳು ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ. ಸಣ್ಣ ವಯಸ್ಸಿನಲ್ಲಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ತಗೆದುಕೊಳ್ಳುವುದು ಸರಿಯಲ್ಲ. ಆ ವಯಸ್ಸು ದೊಡ್ಡ ಸಾಧನೆಯನ್ನು ಮಾಡುವ ವಯಸ್ಸು. ಏಳು ಬೀಳುಗಳು ಸಾಮಾನ್ಯವಾಗಿದ್ದು, ಹಲವಾರು ಒತ್ತಡಗಳು ಇರುತ್ತವೆ. ಅವನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ಯಶಸ್ಸು ಪಡೆಯಲು ಗುರುಗಳ ಮಾರ್ಗದರ್ಶನ ಬಹಳ ಅವಶ್ಯಕವಾಗಿದೆ ಎಂದರು. 

ಈಗ ಜ್ಞಾನದ ವಿನಿಮಯಕ್ಕೆ ಗುರುಗಳ ಅವಶ್ಯಕತೆ ಹೆಚ್ಚಾಗಿಲ್ಲ. ಆದರೆ, ಪಠ್ಯಪುಸ್ತಕವನ್ನು ಹೊರತುಪಡಿಸಿ ಜೀವನದ ಪಾಠವನ್ನು ಕಲಿಸಲು ಅವರ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಕಾಲೇಜಿನಲ್ಲಿ ಕೇವಲ ಅಂಕಗಳಿಸುವುದನ್ನು ಹೇಳಿಕೊಡುವುದಲ್ಲದೆ ಜೀವನದ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಎಂದು ಕರೆ ನೀಡಿದರು. 

ಸಂಧರ್ಭದಲ್ಲಿ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ ನ ಸಿಎಂಡಿ ಶ್ರೀ ದಿಲೀಪ್‌ ಸುರಾನಾ, ಸುರನಾ ಎಜುಕೇಷನಲ್‌ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಪಾಂಶುಪಾಲರಾದ ಡಾ ಭವಾನಿ ಎಂ ಆರ್‌ ಉಪಸ್ಥಿತರಿದ್ದರು.