ಇಂದು ದ್ವಿತೀಯ ಪಿಯು, ಸಿಇಟಿ ಫಲಿತಾಂಶ
* ಸಿಇಟಿ ಪರೀಕ್ಷೆ ನಡೆದ 20 ದಿನಕ್ಕೇ ರಿಸಲ್ಟ್
* ಆ.19ರಿಂದ ಸೆ.3ರ ವರೆಗೆ ನಡೆದಿದ್ದ ದ್ವಿತೀಯ ಪಿಯು ಪರೀಕ್ಷೆ
* ಆಗಸ್ಟ್ 28 ರಿಂದ 30ರವರೆಗೆ ನಡೆದಿದ್ದ ಸಿಇಟಿ ಪರೀಕ್ಷೆ
ಬೆಂಗಳೂರು(ಸೆ.20): ಕಳೆದ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ 2021ನೇ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶ ಇಂದು(ಸೋಮವಾರ) ಪ್ರಕಟವಾಗಲಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ಫಲಿತಾಂಶ ಪ್ರಕಟಿಸಲಿದ್ದಾರೆ. ವಿದ್ಯಾರ್ಥಿಗಳು www.karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದು.
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಎಲ್ಲ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಉತ್ತೀರ್ಣ ಮಾಡಲಾಗಿತ್ತು. ಆದರೆ ಖಾಸಗಿ ಅಭ್ಯರ್ಥಿಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಂತೆ ಸರ್ಕಾರ 17470 ಮಂದಿ ಖಾಸಗಿ ಅಭ್ಯರ್ಥಿಗಳ ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಫಲಿತಾಂಶ ಆಧರಿಸಿ ನೀಡಿದ ಫಲಿತಾಂಶ ರದ್ದುಪಡಿಸಿಕೊಂಡಿದ್ದ 592 ಅಭ್ಯರ್ಥಿಗಳೂ ಸೇರಿ ಒಟ್ಟು 18,413 ಮಂದಿಗೆ ಕಳೆದ ಆ.19ರಿಂದ ಸೆ.3ರ ವರೆಗೆ ಪರೀಕ್ಷೆ ನಡೆಸಿತ್ತು.
1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸಚಿವ ನಾಗೇಶ್
ಸಂಜೆ 4ಕ್ಕೆ ಸಿಇಟಿ ಫಲಿತಾಂಶ: ಪರೀಕ್ಷೆ ನಡೆದ 20 ದಿನಕ್ಕೇ ರಿಸಲ್ಟ್
ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ಆಗಸ್ಟ್‌ನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಸೋಮವಾರ (ಸೆ.20) ಪ್ರಕಟವಾಗಲಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಸ್ಟ್ 28 ರಿಂದ 30ರವರೆಗೆ ನಡೆದಿದ್ದ ಈ ಬಾರಿಯ ಸಿಇಟಿ ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳ ಫಲಿತಾಂಶ ಸೋಮವಾರ ಸಂಜೆ 4 ಗಂಟೆಗೆ https://cetonline.karnataka.gov.in/kea/ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ದಾಖಲೆಯ 20 ದಿನಗಳಲ್ಲೇ ಫಲಿತಾಂಶ ಪ್ರಕಟವಾಗಲು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.