ಕೊಪ್ಪಳ(ಅ.21): ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಸ್ಥಗಿತಗೊಳಿಸಿ ಬಡ ಮಕ್ಕಳು ಶಿಕ್ಷಣ ವಂಚಿತರಾಗಿರುವುದು ಒಂದೆಡೆಯಾದರೆ, ಇದೀಗ ಸಾಕಷ್ಟು ಡೊನೇಶನ್‌ ಪಡೆಯುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಶುಲ್ಕ ಕಟ್ಟದ ಮಕ್ಕಳನ್ನು ಆನ್‌ಲೈನ್‌ ಕಲಿಕೆಯಿಂದ ಹೊರಗಿಟ್ಟು ಶಿಕ್ಷಣ ವಂಚಿತರನ್ನಾಗಿ ಮಾಡಿರುವ ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿವೆ.

ಸಿಬಿಎಸ್‌ಇ ಮತ್ತು ಸ್ಟೇಟ್‌ ಸಿಲೆಬಸ್‌ ಹೊಂದಿರುವ ಕೆಲವು ಆಂಗ್ಲ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಕಟ್ಟದೆ ಇರುವ ಮಕ್ಕಳನ್ನು ಆನ್‌ಲೈನ್‌ ಕಲಿಕೆಯ ವಾಟ್ಸಾಪ್‌ ಗುಂಪುಗಳು ಹಾಗೂ ಝೂಮ್‌ ಕಲಿಕೆಗಳಿಂದಲೂ ಹೊರಗಿಡಲಾಗುತ್ತಿದೆ. ಸುಮಾರು ಒಂದೆರಡು ವಾರದಿಂದ ಈ ರೀತಿ ನಡೆಯುತ್ತಿದೆ. ಮಂಗಳೂರಿನಲ್ಲಿ ಅನೇಕ ಶಾಲೆಗಳು ಇಂತಹ ಪದ್ಧತಿ ಅನುಸರಿಸಿರುವುದಾಗಿ ಆರೋಪಿಸಿರುವ ಪೋಷಕರು, ಇದರ ವಿರುದ್ಧ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇವಿಷ್ಟು ತಿಳ್ಕೊಂಡ್ರೆ ನೀವು ಜೀವನದಲ್ಲಿ ಏನು ಬೇಕಾದರೂ ಎದುರಿಸಬಹುದು ಖಂಡಿತಾ...

ಈ ಬಗ್ಗೆ ಪ್ರತಿಕ್ರಿಯಿಸಿದ ಪೋಷಕರು, ಆನ್‌ಲೈನ್‌ ಕಲಿಕೆಯಿಂದ ಏಕಾಏಕಿ ಹೊರಗಿಟ್ಟಿದ್ದರಿಂದ ಕೆಲವು ಮಕ್ಕಳು ನನ್ನನ್ನು ಮಾತ್ರ ಹೊರಗಿಟ್ಟದ್ದೇಕೆ ಎಂದು ಕೇಳುತ್ತಿದ್ದಾರೆ, ಉತ್ತರಿಸಲಾಗದ ಪರಿಸ್ಥಿತಿಯಲ್ಲಿದ್ದೇವೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಫೀಸ್‌ ಕೂಡ ಈ ಬಾರಿ ಏರಿಕೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.

ಆನ್‌ಲೈನ್‌ ಕಲಿಕೆಯಿಂದ ಮಕ್ಕಳನ್ನು ಹೊರಗಿಟ್ಟಿರುವ ಕುರಿತು ಕೆಲವು ಪೋಷಕರು ಮೌಖಿಕವಾಗಿ ದೂರು ನೀಡಿದ್ದಾರೆ. ನಿಜವಾಗಿಯೂ ಫೀಸ್‌ ಕಟ್ಟಲಾಗದ ಸ್ಥಿತಿಯಲ್ಲಿದ್ದರೆ ಆ ಮಕ್ಕಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿದ್ಯಾಗಮ ಉಪನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದ್ದಾರೆ.