ಎನ್‌.ಎಲ್‌.ಶಿವಮಾದು

ಬೆಂಗಳೂರು(ಮೇ.29): ರಾಜ್ಯ ಸರ್ಕಾರ 2021-22ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಇಳಿದಿದ್ದು, ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿವೆ.

ಹೌದು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗತಿಯಲ್ಲಿದೆ. ಸೋಂಕು ಕಡಿಮೆಯಾದ ಬಳಿಕ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದ ನಂತರ ಸರ್ಕಾರ 2021-22ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಟಿಸುವ ಆಲೋಚನೆಯಲ್ಲಿದೆ. ಇತ್ತ ಪೋಷಕರು ಕೊರೋನಾ ಮೊದಲನೇ ಅಲೆಯಿಂದ ಕಳೆದ ಬಾರಿಯ ಶಾಲಾ ಶುಲ್ಕವನ್ನೇ ಪಾವತಿಸಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಎರಡನೇ ಅಲೆ ಕಾರ್ಮಿಕ ವರ್ಗ, ಮಧ್ಯಮ ವರ್ಗ ಹಾಗೂ ಸಣ್ಣ ಪುಟ್ಟಕೆಲಸ ಮಾಡಿಕೊಂಡಿರುವವರ ಜೀವನವನ್ನೇ ಕಳಚಿ ಹಾಕಿದೆ. ಆದರೆ, ಇದಾವುದನ್ನೂ ಪರಿಗಣಿಸದ ಖಾಸಗಿ ಶಾಲೆಗಳು ಮಾತ್ರ ಮತ್ತೊಂದು ವರ್ಷದ ಆನ್‌ಲೈನ್‌ ತರಗತಿಗಳಿಗೆ ಸಿದ್ಧತೆ ನಡೆಸಿದ್ದು, ಜೂನ್‌ನಿಂದಲೇ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

ಶುಲ್ಕ ವಸೂಲಿ ದಂಧೆಯಲ್ಲಿ ನಗರದ ಪ್ರತಿಷ್ಠಿತ ಶಾಲೆಗಳೇ ಮುಂದಿದ್ದು, ಎಂದಿನಂತೆ ಜೂನ್‌ನಿಂದಲೇ ಆನ್‌ಲೈನ್‌ ತರಗತಿಗಳ ಮೂಲಕವೇ ತಮ್ಮ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿವೆ. ಮಾತ್ರವಲ್ಲ, ತಮ್ಮ ಮಕ್ಕಳಿಗೆ ಶುಲ್ಕ ಪಾವತಿಸುವಂತೆ ಪೋಷಕರಿಗೆ ಮನವಿಯನ್ನು ಕೂಡ ಮಾಡಿವೆ.

8 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ

ಖಾಸಗಿ ಶಾಲೆಗಳು ಹೇಳುವುದೇನು?:

ಕೊರೋನಾ ಎರಡನೇ ಅಲೆ ಇರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿಯೂ ಭೌತಿಕ ತರಗತಿಗಳನ್ನು ಆರಂಭಿಸಲು ಕಷ್ಟವಾಗಲಿದೆ. ಹೀಗಾಗಿ, ಹಿಂದಿನ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿ ಮಕ್ಕಳ ಕಲಿಕೆ ಮುಂದುವರಿಸುವುದು ಉತ್ತಮ. ಹೀಗಾಗಿ, ಜೂನ್‌ ತಿಂಗಳಿನಲ್ಲಿಯೇ ತರಗತಿಗಳನ್ನು ಆರಂಭಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಕೂಡ ಯಾವುದೇ ರೀತಿಯಲ್ಲಿ ಚರ್ಚೆಗಳನ್ನು ನಡೆಸದಿರುವುದರಿಂದ ಮಕ್ಕಳ ಕಲಿಕೆ ಮುಂದುವರಿಸುವುದಕ್ಕಾಗಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸುತ್ತಿದ್ದೇವೆ ಎನ್ನುತ್ತಿವೆ ಕೆಲವು ಶಾಲೆಗಳು.

ಪೋಷಕರು ಏನೆನ್ನುತ್ತಾರೆ?:

ಕಳೆದ ವರ್ಷದ ಶುಲ್ಕವನ್ನೇ ಇನ್ನೂ ಪಾವತಿಸಿಲ್ಲ. ಇದೀಗ ಎರಡನೇ ಅಲೆ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ಬದುಕನ್ನು ನಡೆಸುವುದೇ ದುಸ್ತರವಾಗಿದೆ. ಇಂತಹದ್ದರಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿಸಿ, ಮತ್ತೆ ಶಾಲೆ ಆರಂಭಿಸುತ್ತೇವೆಂದು ಸೂಚಿಸುವ ಮೂಲಕ ಮಾನವೀಯತೆ ಮರೆತಿವೆ. ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಿವೆ ಎಂದು ಪೋಷಕರಾದ ಮಹೇಶ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಶಾಲೆಗಳಿಗೆ ನೋಟಿಸ್‌:

ಹಿಂದಿನ ಆದೇಶಗಳ ಪ್ರಕಾರ, ಜೂ.15ರಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕೊರೋನಾ ಎರಡನೇ ಅಲೆ ಆರಂಭವಾದ ಬಳಿಕ ಹೊಸ ಶೈಕ್ಷಣಿಕ ವರ್ಷವನ್ನು ಅಧಿಕೃತವಾಗಿ ಆರಂಭಿಸುವ ಬಗ್ಗೆ ಆದೇಶ ಹೊರಡಿಸಿಲ್ಲ. ಹೀಗಿದ್ದೂ ಶಾಲೆ ಆರಂಭಿಸುವುದು ಮತ್ತು ಶುಲ್ಕ ಪಾವತಿಸುವ ಬಗ್ಗೆ ಸೂಚಿಸಿರುವ ಶಾಲೆಗಳ ವಿರುದ್ಧ ನೋಟಿಸ್‌ ನೀಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್‌ ತಿಳಿಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ರಾಜ್ಯ ಸರ್ಕಾರ ಲಾಕ್‌ಡೌನ್‌ ನಂತರ ತೀರ್ಮಾನ ಕೈಗೊಳ್ಳಲಿದೆ. ಶೈಕ್ಷಣಿಕ ವರ್ಷ ಆರಂಭಿಸುವ ಬಗ್ಗೆ ಇನ್ನೂ ಅಧಿಕೃತ ಆದೇಶವಾಗಿಲ್ಲ. ಆದ್ದರಿಂದ ಶುಲ್ಕ ಪಾವತಿಸುವಂತೆ ಯಾವುದಾದರೂ ಶೈಕ್ಷಣಿಕ ಸಂಸ್ಥೆ ಪೋಷಕರಿಗೆ ಒತ್ತಾಯ ಮಾಡುತ್ತಿದ್ದರೆ ಅಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನಕುಮಾರ್‌ ಎಂ. ತಿಳಿಸಿದ್ದಾರೆ. 

ಪ್ರಸಕ್ತ ಶೈಕ್ಷಣಿಕ ವರ್ಷ ಕೂಡ ಕೊರೋನಾ ವರ್ಷವೇ ಆಗಬಹುದು ಎಂಬ ಮುಂಜಾಗ್ರತೆಯಿಂದ ಆನ್‌ಲೈನ್‌ ಶಿಕ್ಷಣ ನೀಡಲು ಖಾಸಗಿ ಶಾಲೆಗಳು ಸಿದ್ಧತೆ ನಡೆಸುತ್ತಿವೆ. ಈ ವಿಚಾರವಾಗಿ ಸರ್ಕಾರ ಆದಷ್ಟುಬೇಗ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದ್ದಾರೆ.