Asianet Suvarna News Asianet Suvarna News

ಈಗಲೇ ಶಾಲೆ ಆರಂಭ ಬೇಡ: ಮಕ್ಕಳಲ್ಲಿ ಕೊರೋನಾಗಿಂತ ಕೋವಿಡೇತರ ಅಪಾಯ ಹೆಚ್ಚು

  • ರಾಜ್ಯವು ಮೂರನೇ ಅಲೆ ಆತಂಕದಲ್ಲಿರುವಾಗ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ
  • ಮಕ್ಕಳಲ್ಲಿ ಕೊರೋನಾ ಸೋಂಕಿಗಿಂತ ಕೊರೋನೋತ್ತರ ಅನಾರೋಗ್ಯ ಸಮಸ್ಯೆಗಳು ಗಂಭೀರ ಪರಿಣಾಮ ಬೀರುತ್ತವೆ
Private hospital organization warns about School opening snr
Author
Bengaluru, First Published Aug 17, 2021, 7:20 AM IST

 ಬೆಂಗಳೂರು (ಆ.17):  ರಾಜ್ಯವು ಮೂರನೇ ಅಲೆ ಆತಂಕದಲ್ಲಿರುವಾಗ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಮಕ್ಕಳಲ್ಲಿ ಕೊರೋನಾ ಸೋಂಕಿಗಿಂತ ಕೊರೋನೋತ್ತರ ಅನಾರೋಗ್ಯ ಸಮಸ್ಯೆಗಳು ಗಂಭೀರ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಡಿ.

- ಹೀಗಂತ ಸರ್ಕಾರಕ್ಕೆ ವರದಿ ಸಲ್ಲಿಸಲು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಸಂಘ (ಫನಾ) ಮುಂದಾಗಿದೆ.

ಲಸಿಕೆ ವಿತರಣೆಯಲ್ಲಿ ಸಿಎಂ ತವರು ಜಿಲ್ಲೆಗೆ ಲಾಸ್ಟ್‌ ಸ್ಥಾನ!

ವಿವಿಧ ಕ್ಷೇತ್ರಗಳಿಂದ ಬರುವ ಒತ್ತಡಕ್ಕೆ ಮಣಿದು ಪುಟ್ಟಮಕ್ಕಳ ಶಾಲೆ ಆರಂಭಿಸಿದರೆ ಮುಂದೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಒಂದು ವೇಳೆ ಶಾಲೆಗಳನ್ನು ಪ್ರಾರಂಭ ಮಾಡಲೇಬೇಕು ಎಂದಾದರೆ 8ನೇ ತರಗತಿ ಒಳಗಿನ ಮಕ್ಕಳಿಗೆ ಪ್ರಾರಂಭಿಸಬಾರದು. 9ನೇ ತರಗತಿ ಮೇಲಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಆರಂಭಿಸಿದರೂ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಿದೆ

ಮಂಡ್ಯದಲ್ಲಿ ಮೂರನೆ ಅಲೆ ಭೀತಿ : ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ 40 ಮಂದಿಗೆ ಸೋಂಕು

ಈ ಬಗೆಗಿನ ವರದಿಯನ್ನು ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ಫನಾ ಸಲ್ಲಿಸಲಿದೆ.

ಈ ಬಗ್ಗೆ   ಪ್ರತಿಕ್ರಿಯಿಸಿರುವ ಫನಾ ಅಧ್ಯಕ್ಷ ಡಾ.ಪ್ರಸನ್ನ, ಪ್ರಸ್ತುತ ಒಟ್ಟು ಸೋಂಕಿತರಲ್ಲಿ ಶೇ.14 ರಿಂದ 15 ರಷ್ಟುಮಕ್ಕಳಿಗೆ ಸೋಂಕು ಉಂಟಾಗುತ್ತಿದೆ. ಹೀಗಾಗಿ ಪ್ರಸ್ತುತ ಪ್ರಾಥಮಿಕ ಶಾಲೆಗಳನ್ನು ತೆರೆಯಬಾರದು ಎಂದು ವರದಿ ನೀಡಲು ಮುಂದಾಗಿದ್ದೇವೆ. ಶಾಲೆಗಳನ್ನು ತೆರೆದು ಮಕ್ಕಳ ಸೋಂಕಿನ ಪ್ರಮಾಣ ಶೇ.20 ರಿಂದ 25 ರಷ್ಟಕ್ಕೆ ಹೆಚ್ಚಾದರೆ ತೀವ್ರ ಹಾನಿ ಉಂಟಾಗಲಿದೆ ಎಂದು ಎಚ್ಚರಿಸಿದರು.

ಮಕ್ಕಳಿಗೆ ಎಂಎಸ್‌ಐ-ಸಿ ಆತಂಕ

ಮಕ್ಕಳಲ್ಲಿ ಕೊರೋನಾ ಸೋಂಕಿನ ಪ್ರಾಥಮಿಕ ಅನಾರೋಗ್ಯ ಆತಂಕಕಾರಿಯಲ್ಲ. ಆದರೆ, ಕೊರೋನಾ ಸೋಂಕಿನ ಬಳಿಕ ಉಂಟಾಗುವ (ಪೋಸ್ಟ್‌ ಕೋವಿಡ್‌ ಕಾಂಪ್ಲಿಕೇಷನ್ಸ್‌) ಹೆಚ್ಚು ಅಪಾಯ ಸೃಷ್ಟಿಮಾಡಬಹುದು. ‘ಮಲ್ಟಿಸಿಸ್ಟಂ ಇನ್‌ಫ್ಲೇಮೆಟರಿ ಸಿಂಡ್ರೋಮ್‌ ಇನ್‌ ಚಿಲ್ಡ್ರನ್‌’ (ಎಂಐಎಸ್‌-ಸಿ) ಸಮಸ್ಯೆ ಸೃಷ್ಟಿಯಾಗಬಹುದು. ಒಂದು ವೇಳೆ ಎಂಐಎಸ್‌-ಸಿ ಉಂಟಾದರೆ ಉಸಿರಾಟ ಸಮಸ್ಯೆ ಹಾಗೂ ಮತ್ತಿತರ ಕಾರಣಗಳಿಂದ ಶೇ.30 ರಷ್ಟುಮಕ್ಕಳು ಸಾವನ್ನಪ್ಪಬಹುದು. ಹೀಗಾಗಿ ಕೊರೋನಾಗಿಂತ ಅದು ಸೃಷ್ಟಿಸುವ ಅನಾರೋಗ್ಯದ ಬಗ್ಗೆ ಹೆಚ್ಚು ಆತಂಕವಿದೆ ಎಂದು ಡಾ. ಪ್ರಸನ್ನ ಹೇಳಿದರು.

ಫನಾ ಸಲಹೆಗಳು

- ಶಾಲೆ ಆರಂಭಿಸಲೇಬೇಕು ಎಂದಾದರೆ 8ನೇ ತರಗತಿ ಒಳಗಿನ ಮಕ್ಕಳಿಗೆ ಬೇಡ

- 9, 10 ತರಗತಿಗಳನ್ನು ಆರಂಭಿಸಿದರೂ ಸಾಕಷ್ಟುಮುನ್ನೆಚ್ಚರಿಕೆ ಅಗತ್ಯ

- ಪ್ರತಿ ಶಾಲೆಯಲ್ಲೂ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ

- ಪೋಷಕರನ್ನು ಈ ಸಮಿತಿ ಭಾಗವಾಗಿಸಬೇಕು

- ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡೂ ಆಯ್ಕೆ ನೀಡಬೇಕು

- ಶಿಕ್ಷಕರು, ಶಾಲಾ ಸಿಬ್ಬಂದಿಗೆ ಶೇ.100 ರಷ್ಟುಲಸಿಕಾಕಾರಣ ಮಾಡಬೇಕು

- ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳನ್ನು ಗಮನಿಸಲು ಶುಶ್ರೂಷಕರನ್ನು ನೇಮಿಸಿಕೊಳ್ಳಬೇಕು

- ರೋಗ ಲಕ್ಷಣಗಳು ಇದ್ದರೆ ಕೂಡಲೇ ಪತ್ತೆ ಹಚ್ಚಿ ಅವರನ್ನು ಪ್ರತ್ಯೇಕವಾಗಿಡಬೇಕು

- ಪ್ರೌಢ ಶಾಲಾ ವಿದ್ಯಾರ್ಥಿಗಳ ಮೇಲಿನ ಪರಿಣಾಮ ಅಧ್ಯಯನದ ನಂತರವೇ ಉಳಿದ ತರಗತಿ ಕುರಿತು ನಿರ್ಧರಿಸಬೇಕು

3ನೇ ಅಲೆ ಯಾವುದೇ ಕ್ಷಣದಲ್ಲಾದರೂ ಬರಬಹುದು:

ರಾಜ್ಯದಲ್ಲಿ ಮೂರನೇ ಅಲೆ ಯಾವುದೇ ಕ್ಷಣದಲ್ಲಿ ಆರಂಭವಾಗಬಹುದು. ಈ ಹಂತದಲ್ಲಿ ಶಾಲೆಗಳನ್ನು ಆರಂಭಿಸುವಾಗ ಎಚ್ಚರ ವಹಿಸಬೇಕು. ಇಸ್ರೇಲ್‌, ಅಮೇರಿಕದಲ್ಲಿ ಈಗಾಗಲೇ ಎರಡು ಬಾರಿ ಶಾಲೆಗಳನ್ನು ಆರಂಭಿಸಿ ಮತ್ತೆ ಮುಚ್ಚಿದ್ದಾರೆ. ದಕ್ಷಿಣ ಕೊರಿಯಾದಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಸ್ಪತ್ರೆಗಳ ಸಂಘದ ವತಿಯಿಂದ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವರದಿ ಸಿದ್ದಪಡಿಸಿದ್ದೇವೆ. ಆರೋಗ್ಯ ಸಚಿವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದು, ಗುರುವಾರ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Follow Us:
Download App:
  • android
  • ios