ಬಸವರಾಜ ಹಿರೇಮಠ

ಧಾರ​ವಾಡ(ಜೂ.11): ಇನ್ನೂ ಶೈಕ್ಷಣಿಕ ವರ್ಷವೇ ಆರಂಭವಾಗಿಲ್ಲ. ಅಷ್ಟರಲ್ಲಿ ಹು- ಧಾ ಮಹಾನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳು ಮಕ್ಕಳ ಪ್ರವೇಶ ಶುಲ್ಕವನ್ನು ಭರಿಸಲು ಒತ್ತಡ ಹೇರುತ್ತಿರುವುದು ಪಾಲಕರಲ್ಲಿ ಮತ್ತೆ ದುಗುಡ ಶುರುವಾಗಿದೆ.

ಕಳೆದ ಬಾರಿಯ ಮಾದರಿಯಲ್ಲಿ ಸಾಕಷ್ಟುಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್‌ ಶಿಕ್ಷಣವನ್ನು ಶುರು ಮಾಡಿವೆ. ಜತೆಗೆ ಪ್ರವೇಶ ಶುಲ್ಕವನ್ನು ಭರಿಸಬೇಕೆಂದು ಸಂದೇಶಗಳನ್ನು ಕಳುಹಿಸುತ್ತಿದ್ದು, ಇದು ಆರ್ಥಿಕವಾಗಿ ತೊಂದರೆಯಲ್ಲಿರುವ ಪಾಲಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದರೊಂದಿಗೆ ಮಹಾನಗರದ ಕೆಲವು ಶಾಲೆಗಳು ಪ್ರವೇಶ ಶುಲ್ಕವನ್ನು ಕಳೆದ ಬಾರಿಗಿಂತ ಹೆಚ್ಚುವರಿ ಮಾಡಿದ್ದು ಪಾಲಕರಲ್ಲಿ ಬೇಸರ ಮೂಡಿಸಿದೆ. ಕೆಲವು ಖಾಸಗಿ ಶಾಲೆಗಳಂತೂ ಜೂನ್‌ 15ರೊಳಗೆ ಮೊದಲ ಕಂತು ತುಂಬಲು ಕೊನೆ ದಿನವನ್ನು ನಿಗದಿ ಮಾಡಿದ್ದು, ಇದೀಗ ಶೈಕ್ಷಣಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಕಳೆದ ವರ್ಷ ಕೋವಿಡ್‌ ಹಿನ್ನೆಲೆ ಶಾಲೆಗಳು ಭೌತಿಕವಾಗಿ ನಡೆಯಲಿಲ್ಲ. ಆನ್‌ಲೈನ್‌ ಶಿಕ್ಷಣ ನೀಡಿರುವ ಕಾರಣ ಶಾಲೆಗಳ ಆಡಳಿತ ಮಂಡಳಿ ನಿಗದಿಪಡಿಸಿದ ಪ್ರವೇಶ ಶುಲ್ಕವನ್ನು ತುಂಬಿದ್ದೇವೆ. ಈ ಬಾರಿಯ ಪರಿಸ್ಥಿತಿ ನೋಡಿದರೆ ಶಾಲೆಗಳು ಅದರಲ್ಲೂ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆಯುವುದು ಕಷ್ಟಸಾಧ್ಯ. ಮೊದಲೇ ಕೋವಿಡ್‌ನಿಂದ ತೊಂದರೆಯಲ್ಲಿರುವ ನಾವು ಪೂರ್ಣ ಪ್ರಮಾಣದ ಹಾಗೂ ಹೆಚ್ಚುವರಿ ಶುಲ್ಕ ತುಂಬಿ ಎಂದರೆ ಸಾಧ್ಯವಿಲ್ಲ. ಬೋಧನಾ ಶುಲ್ಕ ಮಾತ್ರ ತುಂಬುತ್ತೇವೆ ಎಂದು ಪಾಲಕರು ತಮ್ಮ ವಾದ ಮಂಡಿಸುತ್ತಿದ್ದಾರೆ.

ನೀಟ್‌ ಪರೀಕ್ಷೆ ಮುಂದೂಡಿಕೆ ಪ್ರಶ್ನಿಸಿದ್ದ ಅರ್ಜಿ ವಜಾ

ಲಾಕ್‌ಡೌನ್‌ ಕಾರಣ ವ್ಯಾಪಾರ- ವಹಿವಾಟು ಬಂದ್‌ ಆಗಿದೆ. ಖಾಸಗಿ ಉದ್ಯೋಗಿಗಳಿಗೆ ಸಂಬಳದಲ್ಲಿ ಕಡಿತ ಮಾಡಲಾಗಿದೆ. ಕೆಲವು ಕಡೆ ಕಂತು ರೂಪದಲ್ಲಿ ನೀಡುತ್ತಿವೆ. ಹೀಗೆ ಬಹುತೇಕರು ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂತಹ ಸಮಯದಲ್ಲಿ ಖಾಸಗಿ ಶಾಲೆಗಳು ಸಂಪೂರ್ಣ ಅಥವಾ ಹೆಚ್ಚುವರಿ ಶುಲ್ಕವನ್ನು ಇಷ್ಟೇ ದಿನಾಂಕದೊಳಗೆ ತುಂಬಬೇಕು ಎಂಬುದು ಸರಿಯಲ್ಲ. ಕಳೆದ ವರ್ಷ ಸರ್ಕಾರ ರೂಪಿಸಿದ ಶೇ. 70ರಷ್ಟು ಶುಲ್ಕವನ್ನು ಕಂತು ರೂಪದಲ್ಲಿ ತುಂಬಲು ತಾವು ಸಿದ್ಧ ಎಂದು ಕೆಲ ಪಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರತಿ ಶಾಲೆಗಳು ಶಿಕ್ಷಕರಿಗೆ ಸಂಬಳ ಹಾಗೂ ನಿರ್ವಹಣೆ ಹಿನ್ನೆಲೆ ಪ್ರವೇಶ ಶುಲ್ಕ ಪಡೆಯಲೇಬೇಕಾಗುತ್ತದೆ. ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಪಾಲಕರು ಪ್ರವೇಶ ಶುಲ್ಕ ಭರಿಸಬೇಕು. ಆದರೆ, ಪ್ರಸ್ತುತ ಸಂದಿಗ್ಧ ಸ್ಥಿತಿ ಉಂಟಾಗಿದೆ. ಕೋವಿಡ್‌ ಕಾರಣದಿಂದ ಪಾಲಕರ ಸ್ಥಿತಿ ಅರಿತು ಪ್ರತಿಷ್ಠಿತ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸುವುದು ಅಥವಾ ಪೂರ್ಣ ಪ್ರಮಾಣದಲ್ಲಿ ಪಡೆಯುತ್ತಿವೆ ಎಂದಾದರೆ ಅದು ತಪ್ಪು. ಈ ಬಗ್ಗೆ ಪಾಲಕರು, ಶಾಲೆಗಳಲ್ಲಿ ಗೊಂದಲ ಉಂಟಾಗದಂತೆ ಸರ್ಕಾರ ಆದಷ್ಟುಶೀಘ್ರ ನಿರ್ಧಾರ ಪ್ರಕಟಿಸಬೇಕು ಎಂದು ಧಾರವಾಡ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ ಹಲಗತ್ತಿ ಆಗ್ರಹಿಸಿದರು.

ಈ ಬಾರಿಯ ಶೈಕ್ಷಣಿಕ ವರ್ಷ ಜೂನ್‌ 15ರಿಂದ ಪ್ರಾರಂಭವಾಗಲಿದೆ. ಇಷ್ಟು ಬೇಗ ಖಾಸಗಿ ಶಾಲೆಗಳು ಪಾಲಕರಿಂದ ಪೂರ್ಣ ಪ್ರಮಾಣದಲ್ಲಿ ಪ್ರವೇಶ ಶುಲ್ಕ ಭರಿಸಬೇಕು ಎಂಬುದು ತಪ್ಪು. ಈ ಬಗ್ಗೆ ತಮಗೆ ದೂರುಗಳು ಬಂದರೆ ಪರಿಶೀಲಿಸಲಾಗುವುದು. ಸದ್ಯದಲ್ಲಿಯೇ ಶಿಕ್ಷಣ ಇಲಾಖೆಯು ಪ್ರವೇಶ ಶುಲ್ಕದ ಗೊಂದಲ ಬಗೆಹರಿಸಲಿದೆ ಎಂದು ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ತಿಳಿಸಿದ್ದಾರೆ.