ಬಾಗಲಕೋಟೆ (ಜ.24):  ಖಾಸಗಿ ಶಾಲೆಗಳ ಶುಲ್ಕ ಕಟ್ಟುವ ವಿಷಯದಲ್ಲಿ ಸರ್ಕಾರದ ಮುಂದೆ ಮೂರು ವಿಧಗಳ ಸೂತ್ರವಿದ್ದು, ಶೀಘ್ರದಲ್ಲಿಯೇ ಅಂತಿಮ ನಿರ್ಧಾರದೊಂದಿಗೆ ಒಂದು ಸೂತ್ರವನ್ನು ಜಾರಿಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಜಿಲ್ಲೆಯ ಜಮಖಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಲ್ಕ ಕಟ್ಟಿಲ್ಲವೆಂದು ಆನ್‌ಲೈನ್‌ ಶಿಕ್ಷಣದಲ್ಲಿ ಪಾಸ್‌ವರ್ಡ್‌ ನೀಡದೇ ಇರುವುದನ್ನು ಸಹ ಗಮನಿಸಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಈ ಕುರಿತು ದೂರು ಬಂದರೆ ಖಂಡಿತ ಕ್ರಮಕೈಗೊಳ್ಳುತ್ತೇನೆ. ಶುಲ್ಕ ಕಟ್ಟಿಸಿಕೊಳ್ಳುವ ಒತ್ತಡ ಹಾಕುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಇವೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ..

ಪೋಷಕರ ಅಭಿಪ್ರಾಯ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಭಿಪ್ರಾಯ, ತಜ್ಞರ ಅಭಿಪ್ರಾಯ ಸಂಗ್ರಹಿಸಿ 2 ವಿಧದ ಸೂತ್ರ ಹೆಣೆಯಲಾಗಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳ ಮಕ್ಕಳ ಪಾಲಕರಿಗೆ ಕೋವಿಡ್‌ನಿಂದ ಆರ್ಥಿಕ ಹಿಂಜರಿತವಾಗಿ ಶುಲ್ಕ ಕಟ್ಟುವುದಕ್ಕೆ ಆಗುತ್ತಿಲ್ಲ. ಪಾಲಕರು ಶುಲ್ಕ ಕಡಿತಕ್ಕೆ ಮನವಿ ಮಾಡಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳು ಶುಲ್ಕ ಇಲ್ಲದೆ ಶಾಲೆ ನಡೆಸುವುದು ಕಷ್ಟಎನ್ನುತ್ತಿವೆ. 6 ತಿಂಗಳಿನಿಂದ ಖಾಸಗಿ ಶಾಲೆಗಳಲ್ಲಿ ಕೆಲಸವೂ ಇಲ್ಲ. ಸಂಬಳವೂ ಇಲ್ಲದೆ ಅನೇಕ ಶಿಕ್ಷಕರು ತರಕಾರಿ ಮಾರಾಟ ಮಾಡಿದ್ದನ್ನು ಸಹ ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ಮುಖ್ಯ ವಿಷಯ ಫೀ ಸ್ಟ್ರಕ್ಚರ್‌ (ಶುಲ್ಕ ನಿಗದಿ) ಆಗಿದೆ ಎಂದರು.