ಮುಂಡರಗಿ ಪಟ್ಟಣಕ್ಕಿಲ್ಲ ಸರ್ಕಾರಿ ಪ್ರೌಢಶಾಲೆ; ಹಲವು ವರ್ಷಗಳಿಂದ ನಿರಂತರ ಹೋರಾಟ
- ಮುಂಡರಗಿ ಪಟ್ಟಣಕ್ಕೆ ಬೇಕಿದೆ ಸರ್ಕಾರಿ ಪ್ರೌಢಶಾಲೆ
- ಪಟ್ಟಣದಲ್ಲಿ 4 ಪ್ರಾಥಮಿಕ, 2 ಉರ್ದು ಶಾಲೆ ವಿದ್ಯಾರ್ಥಿಗಳಿಗೆ ಖಾಸಗಿ ಪ್ರೌಢಶಾಲೆಯೇ ಗತಿ
- ಗ್ರಾಮೀಣ ಭಾಗದಲ್ಲಿವೆ 18 ಪ್ರೌಢಶಾಲೆ, ಪಟ್ಟಣಕ್ಕಿಲ್ಲ ಈ ಸೌಲಭ್ಯ
- ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕಿಲ್ಲ ಬೆಲೆ
ಶರಣು ಸೊಲಗಿ
ಮುಂಡರಗಿ (ಸೆ.24) : ಮುಂಡರಗಿ ತಾಲೂಕಿನ ಪ್ರತಿ 5 ಕಿಮೀ ವ್ಯಾಪ್ತಿಯಲ್ಲಿ ಒಂದೊಂದು ಸರ್ಕಾರಿ ಪ್ರೌಢಶಾಲೆಗಳಿವೆ. ಆದರೆ, ಪಟ್ಟಣದಲ್ಲಿ ಮಾತ್ರ ಒಂದೇ ಒಂದು ಸರ್ಕಾರಿ ಪ್ರೌಢಶಾಲೆಯಿಲ್ಲ!. ಸರ್ಕಾರ ಶೀಘ್ರವೇ ಮುಂಡರಗಿ ಪಟ್ಟಣಕ್ಕೊಂದು ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಬೇಕೆನ್ನುವುದು ಪಟ್ಟಣದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದೆ.
2500 ಪ್ರೌಢಶಾಲಾ ಶಿಕ್ಷಕರ ನೇಮಕ: ಸಚಿವ ನಾಗೇಶ್
ಪಟ್ಟಣದಲ್ಲಿ 4 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. 2 ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಶಾಲೆಗಳಿಂದಲೂ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು 7ನೇ ತರಗತಿ ಪಾಸಾಗಿ 8ನೇ ತರಗತಿಗೆ, ಕೆಲವು ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ವರೆಗೂ ಇದ್ದು, ಅಲ್ಲಿನ ವಿದ್ಯಾರ್ಥಿಗಳು 9ನೇ ತರಗತಿಗೆ ಹೋಗಲು ತೊಂದರೆ ಅನುಭವಿಸುವಂತಾಗಿದೆ. ಪುರಸಭೆ ವ್ಯಾಪ್ತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರೌಢ ಶಿಕ್ಷಣಕ್ಕೆ ಪರದಾಡುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ಬರದೂರು, ಮೇವುಂಡಿ, ಡಂಬಳ, ಕಂದಾಂಪುರ, ಡೋಣಿ, ಹಿರೇವಡ್ಡಟ್ಟಿ, ಸಿಂಗಟಾಲೂರು, ನಾಗರಹಳ್ಳಿ, ಬಿದರಹಳ್ಳಿ, ಚಿಕ್ಕವಡ್ಡಟ್ಟಿ, ನಾಗರಹಳ್ಳಿ, ಹೆಸರೂರು ಸೇರಿದಂತೆ 18ಕ್ಕೂ ಹೆಚ್ಚು ಸರ್ಕಾರಿ ಪ್ರೌಢಶಾಲೆಗಳಿವೆ. ಅಲ್ಲದೇ ಕಸ್ತೂರ್ಬಾ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಿದ್ಯಾಲಯ ಸೇರಿದಂತೆಯೂ ಅನೇಕ ಪ್ರೌಢಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ತಾಲೂಕು ಕೇಂದ್ರದಲ್ಲಿ ಮಾತ್ರ ಒಂದೇ ಒಂದು ಪ್ರೌಢಶಾಲೆ ಇಲ್ಲ.
ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗಿಸಿದವರು ಇಲ್ಲಿಯೇ ಸ್ಥಳೀಯವಾಗಿರುವ ಖಾಸಗಿ ಪ್ರೌಢಶಾಲೆಗಳಿಗೆ ಹೋಗಬೇಕು. ಇಲ್ಲದಿದ್ದರೆ ಪಕ್ಕದ ಬರದೂರು, ಮೇವುಂಡಿ, ನಾಗರಹಳ್ಳಿ ಗ್ರಾಮಗಳಿಗೆ ತೆರಳಬೇಕಾಗಿದೆ. ಬಡವರಿಗೆ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಕಷ್ಟವಾಗುತ್ತದೆ. ಬೇರೆ ಊರಿನ ಶಾಲೆಗೆ ಹೆಣ್ಣುಮಕ್ಕಳನ್ನು ಕಳುಹಿಸಲು ಕೆಲವು ಪಾಲಕರು ಒಪ್ಪುವುದಿಲ್ಲ.
ಪಟ್ಟಣದಲ್ಲೊಂದು ಸರ್ಕಾರಿ ಪ್ರೌಢಶಾಲೆ ಬೇಕು ಎನ್ನುವುದು ಇಂದು ನಿನ್ನೆಯ ಬೇಡಿಕೆಯಲ್ಲ. ಇದು ಬಹಳ ವರ್ಷಗಳ ಬೇಡಿಕೆ. ಆದರೆ, ದುರಂತವೆಂದರೆ ಈ ವರೆಗೆ ಈಡೇರಿಲ್ಲ. ಮಾಜಿ ಸಚಿವ ಎಸ್.ಎಸ್. ಪಾಟೀಲ್ ಅವರು ಗ್ರಾಪಂ ವ್ಯಾಪ್ತಿಗೊಂದರಂತೆ ಪ್ರೌಢಶಾಲೆ ಮುಂಜೂರು ಮಾಡಿಸಿದರು. ಆದರೆ, ಮುಂಡರಗಿ ಪಟ್ಟಣದಲ್ಲಿ ಆಗಲಿಲ್ಲ. ಆನಂತರದಲ್ಲಿ ರಾಮಣ್ಣ ಲಮಾಣಿ ಈ ಹಿಂದೆ ಹಾಗೂ ಇದೀಗ ಎರಡು ಬಾರಿ ಶಾಸಕರಾದರೂ ಮನಸ್ಸು ಮಾಡುತ್ತಿಲ್ಲ. ಈ ಹಿಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಸಹ ಈ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಅವರಿಂದಲೂ ಈ ಕಾರ್ಯ ಸಾಧ್ಯವಾಗಲಿಲ್ಲ. ಸಂಸದರಿಗೂ ಅನೇಕ ಬಾರಿ ಮನವಿ ಮಾಡಲಾಗಿದೆ. ಯಾರಿಂದಲೂ ಇಲ್ಲಿನ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತಿಲ್ಲ.
ಇದೀಗ ಗುರುವಾರ ಕೆಳಮನೆಯಲ್ಲಿ ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 13ನೇ ವರದಿ ಈ ಕುರಿತು ಚರ್ಚೆ ಮಾಡಿದ್ದು, ರಾಜ್ಯದಲ್ಲಿ 361 ಪ್ರೌಢಶಾಲೆಗಳನ್ನು ತಕ್ಷಣ ಮಂಜೂರು ಮಾಡಿಸಿ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಶಾಲೆಗಳನ್ನು ತೆರೆಯಬೇಕು ಎಂದು ಶಿಫಾರಸು ಮಾಡಿದೆ. ಆದ್ದರಿಂದ ಈಗಲಾದರೂ ಮುಂಡರಗಿ ಪಟ್ಟಣಕ್ಕೊಂದು ಸರ್ಕಾರಿ ಪ್ರೌಢಶಾಲೆ ಮುಂಜೂರಾತಿಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡಂತೆ ಎಲ್ಲ ಸಚಿವರು ಪ್ರಯತ್ನಿಸಿ ಇಲ್ಲಿನ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ವಿದ್ಯಾರ್ಥಿ ಪಾಲಕರ ಬೇಡಿಕೆಯಾಗಿದೆ.
ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ
ಮುಂಡರಗಿ ಪಟ್ಟಣಕ್ಕೊಂದು ಸರ್ಕಾರಿ ಪ್ರೌಢಶಾಲೆ ಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿದೆ. ಇದೀಗ ಈ ಕುರಿತು ಕೆಳಮನೆಯಲ್ಲಿ ಚರ್ಚಿಸಿದ್ದು, ನಮ್ಮ ಸಚಿವರು, ಶಾಸಕರು ಹಾಗೂ ಸಂಸದರು ಈ ಕುರಿತು ಪ್ರಯತ್ನ ಮಾಡಿ ಇಲ್ಲೊಂದು ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸುವ ಮೂಲಕ ಸ್ಥಳೀಯ ಬಡ ಹಾಗೂ ಹೆಣ್ಣು ಮಕ್ಕಳ ಪ್ರೌಢಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.
- ಮಂಜುನಾಥ ಇಟಗಿ, ಸಾಮಾಜಿಕ ಕಾರ್ಯಕರ್ತರು, ಮುಂಡರಗಿ